ಮುಂಬಯಿ: ದಕ್ಷಿಣ ಭಾರತದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ʼಪೊನ್ನಿಯಿನ್ ಸೆಲ್ವನ್ʼ ಅದ್ಧೂರಿ ರಿಲೀಸ್ ಗೆ ದಿನಗಣನೆ ಆರಂಭವಾಗಿದೆ. ದೊಡ್ಡ ತಾರಾಗಣವುಳ್ಳ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ.
ಕಲ್ಕಿ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ ಕಥೆಯನ್ನು ಎರಡು ಭಾಗಗಳಲ್ಲಿ ದೃಶ್ಯ ರೂಪಕ್ಕೆ ತೆರೆಗೆ ತರಲು ಖ್ಯಾತ ನಿರ್ದೇಶಕ ಮಣಿರತ್ನಂ ಸಜ್ಜಾಗಿದ್ದಾರೆ. ಸೆಪ್ಟೆಂಬರ್ 30 ಚಿತ್ರ ಥಿಯೇಟರ್ ಗೆ ಲಗ್ಗೆಯಿಡಲಿದೆ.
ಇತ್ತೀಚಿಗೆ ಚಿತ್ರದ ಆಡಿಯೋ ಹಾಗೂ ಟ್ರೇಲರ್ ಬಿಡುಗಡೆ ಚೆನ್ನೈನಲ್ಲಿ ನೆರವೇರಿತ್ತು. ಈ ಸಮಾರಂಭದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ , ಕಮಲ್ ಹಾಸನ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.
ಅಮೋಘ, ಅದ್ಧೂರಿ ಟ್ರೇಲರ್ ನೋಡಿದ ಬಳಿಕ ಪ್ರೇಕ್ಷಕರು ಚಿತ್ರವನ್ನು ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕನ್ನು ಅಮೆಜಾನ್ ಪ್ರೈಮ್ ದೊಡ್ದ ಮೊತ್ತಕ್ಕೆ ಖರೀದಿಸಿದೆ ಎಂದು ವರದಿಯಾಗಿದೆ.
ಚಿತ್ರದ ಭಾಗ-1, ಭಾಗ-2 ರ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕು ಅಮೆಜಾನ್ ಪ್ರೈಮ್ ಗೆ 125 ಕೋಟಿಗೆ ಮಾರಾಟವಾಗಿದೆ ಎಂದು ವರದಿ ತಿಳಿಸಿದೆ. ಈಗಾಗಲೇ ಚಿತ್ರದ ಸ್ಯಾಟ್ ಲೈಟ್ ಹಕ್ಕು ಸನ್ ಟಿವಿಗೆ ಮಾರಾಟವಾಗಿದ್ದು, ಚಿತ್ರದ ಟ್ರೇಲರ್ ಹಾಗೂ ಆಡಿಯೋ ಬಿಡುಗಡೆ ಸಮಾರಂಭವನ್ನು ಸನ್ ಟಿವಿ ಸಿನಿಮಾ ಬಿಡುಗಡೆಯ ಮೊದಲು ಪ್ರಸಾರ ಮಾಡಲಿದೆ.
ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಚಿಯಾನ್ ವಿಕ್ರಮ್, ಐಶ್ವರ್ಯ ರೈ ಬಚ್ಚನ್, ಕಾರ್ತಿ, ತ್ರಿಶಾ, ಜಯಂ ರವಿ ಮುಂತಾದ ಕಲಾವಿದರು ಒಂದೇ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಚೋಳ ಸಾಮ್ರಾಜ್ಯದ ರಾಜನೊಬ್ಬನ ಕಥೆಯಾಗಿದೆ. ಪಾರ್ಟ್ – 1 ಬಳಿಕ ಕೆಲವೇ ತಿಂಗಳ ಬಳಿಕ ಚಿತ್ರದ ಎರಡನೇ ಭಾಗ ತೆರೆಗೆ ಬರಲಿದೆ.