Advertisement

ಮ್ಯಾನ್‌ಹೋಲ್‌ಗ‌ಳೇ ಹೆಚ್ಚು ಅಪಾಯಕಾರಿ

06:30 AM Feb 16, 2019 | |

ಬೆಂಗಳೂರು: ಬೆಂಗಳೂರಿನಲ್ಲಿ ರಸ್ತೆಗುಂಡಿಗಳಿಗಿಂತ  ಜಲಮಂಡಳಿಯ ಮ್ಯಾನ್‌ಹೋಲ್‌ಗ‌ಳು, ಆಪ್ಟಿಕಲ್‌ ಫೈಬರ್‌ ಕೇಬಲ್‌ (ಒಎಫ್ಸಿ) ಚೇಂಬರ್‌ಗಳು ಅಪಾಯಕಾರಿ ಎಂಬ ಅಂಶ ಬಿಬಿಎಂಪಿಯಿಂದ ನಡೆಸಿದ ಸಮೀಕ್ಷೆ ಬಯಲು ಮಾಡಿದೆ. 

Advertisement

ರಸ್ತೆಗುಂಡಿ ಸಮಸ್ಯೆಯಿಂದಾಗಿ ಸಾವು-ನೋವುಗಳು ಸಂಭವಿಸಿದ ಪರಿಣಾಮ ಸಾರ್ವಜನಿಕರು ಪಾಲಿಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಜತೆಗೆ ಹೈಕೋರ್ಟ್‌ ಸಹ ಛೀಮಾರಿ ಹಾಕಿದರಿಂದ ಅಧಿಕಾರಿಗಳು, ಸಮರೋಪಾದಿಯಲ್ಲಿ ಗುಂಡಿ ಮುಚ್ಚುವ ಕಾರ್ಯಾಚರಣೆ ನಡೆಸಿ, ಬಹುತೇಕ ಆರ್ಟಿರಿಯಲ್‌ ಹಾಗೂ ಸಬ್‌ ಆರ್ಟಿರಿಯಲ್‌ ರಸ್ತೆಗಳನ್ನು ಗುಂಡಿಮುಕ್ತವಾಗಿಸಿದ್ದಾರೆ. 

ಆದರೆ, ನಗರದ ಪ್ರಮುಖ ರಸ್ತೆಗಳು ಗುಂಡಿಮುಕ್ತವಾದರೂ ವಾಹನ ಸವಾರರಿಗೆ ಮಾತ್ರ ಅಪಾಯ ತಪ್ಪಿಲ್ಲ ಎಂಬ ಆತಂಕಾರಿ ವಿಷಯ ಪಾಲಿಕೆಯಿಂದ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ಸಾರ್ವಜನಿಕರಿಗೆ ರಸ್ತೆಗಳಲ್ಲಿ ಅನಾನುಕೂಲವಾದ ಅಂಶಗಳ ಕುರಿತು ಸಮೀಕ್ಷೆ ನಡೆಸಿರುವ ಪಾಲಿಕೆಯ ರಸ್ತೆ ಮೂಲಸೌಕರ್ಯ ವಿಭಾಗವು, ಗುಂಡಿಗಿಂತ ಮ್ಯಾನ್‌ಹೋಲ್‌ ಅಪಾಯಕಾರಿ ಎಂಬುದನ್ನು ಗುರುತಿಸಿದ್ದಾರೆ. 

ಜಲಮಂಡಳಿಯ ಮ್ಯಾನ್‌ಹೋಲ್‌ಗ‌ಳು ಹಾಳಾಗಿರುವ ಸ್ಥಳಗಳು ಹಾಗೂ ವಾಹನ ಸವಾರರಿಗೆ ಯಾವ ರೀತಿಯ ತೊಂದರೆಯಾಗುತ್ತಿದೆ ಎಂಬುದರ ಅಧ್ಯಯನ ನಡೆಸಿ ವರದಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಲವು ಬಾರಿ ಜಲಮಂಡಳಿಗೆ ಸೂಚಿಸಿದ್ದಾರೆ. ಆದರೆ, ಜಲಮಂಡಳಿಯ ಅಧಿಕಾರಿಗಳು ಸಮರ್ಪಕವಾಗಿ ವರದಿ ನೀಡಿಲ್ಲ. ಪರಿಣಾಮ ಪಾಲಿಕೆಯಿಂದಲೇ ಸಮೀಕ್ಷೆ ನಡೆಸಿದ್ದು, ವರದಿಯನ್ನು ಸರ್ಕಾರ ಹಾಗೂ ಜಲಮಂಡಳಿಗೆ ನೀಡಲಾಗಿದೆ. 

ಅದರಂತೆ ಪಾಲಿಕೆಯ ಪ್ರಮುಖ ರಸ್ತೆಗಳಲ್ಲಿ ಜಲಮಂಡಳಿ ನಿರ್ಮಿಸಿರುವ ಮ್ಯಾನ್‌ಹೋಲ್‌ಗ‌ಳು ವಾಹನ ಸವಾರರಿಗೆ ಹೆಚ್ಚು ಅನಾನುಕೂಲವಾಗಿವೆ. ಜತೆಗೆ ಅಪಘಾತಗಳಿಗೆ ಕಾರಣವಾಗುತ್ತಿವೆ. ಜಲಮಂಡಳಿಯೂ ಮ್ಯಾನ್‌ಹೋಲ್‌ಗ‌ಳನ್ನು ನಿರ್ಲಕ್ಷಿಸಿದರಿಂದ ಹಲವು ಭಾಗಗಳಲ್ಲಿ ಮ್ಯಾನ್‌ಹೋಲ್‌ಗ‌ಳು ಉಕ್ಕಿಹರಿದು ರಸ್ತೆಗಳು ಹಾಳಾಗಿವೆ. ಹೀಗಾಗಿ ಕೂಡಲೇ ಮ್ಯಾನ್‌ಹೋಲ್‌ಗ‌ಳ ದುರಸ್ತಿಪಡಿಸುವಂತೆ ಪಾಲಿಕೆಯ ಅಧಿಕಾರಿಗಳು ಜಲಮಂಡಳಿಗೆ ಪತ್ರ ಬರೆದಿದ್ದಾರೆ. 

Advertisement

ಒಎಫ್ಸಿ ಚೇಂಬರ್‌ಗಳ ಕಾಟ: ಖಾಸಗಿ ಸಂಸ್ಥೆಗಳು ರಸ್ತೆಗಳಲ್ಲಿ ಅಧಿಕೃತ ಹಾಗೂ ಅನಧಿಕೃತವಾಗಿ ಅಳವಡಿಸಿರುವ ಒಎಫ್ಸಿ ಚೇಂಬರ್‌ಗಳೂ ವಾಹನ ಸವಾರರ ತಲೆನೋವಾಗಿ ಪರಿಣಮಿಸಿವೆ. ನಗರದ ರಸ್ತೆಗಳಲ್ಲಿ 904 ಕಡೆಗಳಲ್ಲಿ ಒಎಫ್ಸಿ ಚೇಂಬರ್‌ಗಳಿದ್ದು, ರಸ್ತೆ ಮಟ್ಟಕ್ಕಿಂತ ಎತ್ತರದಲ್ಲಿರುವುದರಿಂದ ದ್ವಿಚಕ್ರ ವಾಹನಗಳು ವೇಗವಾಗಿ ಚಲಿಸುವಾಗ ಅಪಘಾತ ಸಂಭವಿಸುವ ಸಾಧ್ಯತೆಯಿರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 

1,355 ಅಪಾಯಕಾರಿ ಮ್ಯಾನ್‌ಹೋಲ್‌: ಪಾಲಿಕೆಯ ವ್ಯಾಪ್ತಿಯ 1400 ಕಿ.ಮೀ. ಉದ್ದ ಆರ್ಟಿರಿಯಲ್‌ ಹಾಗೂ ಸಬ್‌ ಆರ್ಟಿರಿಯಲ್‌ ರಸ್ತೆಗಳಲ್ಲಿ ಜಲಮಂಡಳಿಯಿಂದ ಸಾವಿರಾರು ಮ್ಯಾನ್‌ಹೋಲ್‌ ನಿರ್ಮಿಸಲಾಗಿದೆ. ಆದರೆ, ಆ ಪೈಕಿ 1,355 ಕಡೆಗಳಲ್ಲಿನ ಮ್ಯಾನ್‌ಹೋಲ್‌ಗ‌ಳು ಅಪಾಯಕಾರಿಯಾಗಿವೆ ಎಂಬುದು ಸಮೀಕ್ಷೆಯಿದೆ ಬೆಳಕಿಗೆ ಬಂದಿದೆ. ಪ್ರಮುಖವಾಗಿ ಮ್ಯಾನ್‌ಹೋಲ್‌ಗ‌ಳು ರಸ್ತೆ ಮಟ್ಟಕ್ಕಿಂತ ತಳಭಾಗದಲ್ಲಿದ್ದರೆ, ಮತ್ತೆ ಹಲವೆಡೆ ರಸ್ತೆಗಿಂತ ಮೇಲ್ಮಟ್ಟದಲ್ಲಿದ್ದು, ವಾಹನ ಸವಾರರಿಗೆ ತೊಂದರೆಯುಂಟಾಗುತ್ತಿದ್ದು, ಅವುಗಳನ್ನು ಸರಿಪಡಿಸುವಂತೆ ಪತ್ರ ಬರೆಯಲಾಗಿದೆ. 

ಅಂಕಿ-ಅಂಶಗಳು
– 1400 ಕಿ.ಮೀ. ಆರ್ಟಿರಿಯಲ್‌, ಸಬ್‌ ಆರ್ಟಿರಿಯಲ್‌ ರಸ್ತೆಗಳ ಉದ್ದ 
– 1355 ಅಪಾಯಕಾರಿ ಮ್ಯಾನ್‌ಹೋಲ್‌ಗ‌ಳು
– 904 ಒಎಫ್ಸಿ ಚೇಂಬರ್‌ಗಳು
– 58 ಜಲಮಂಡಳಿ ವಾಟರ್‌ ವಾಲ್‌ ಚೇಂಬರ್‌ಗಳು
– 42 ಬೆಸ್ಕಾಂ ಹಾಗೂ ಕೆಪಿಸಿಎಲ್‌ ಚೇಂಬರ್‌ಗಳು
– 14 ಮಳೆನೀರು ಹರಿದು ಹೋಗಲು ನಿರ್ಮಿಸಿದ ಚೇಂಬರ್‌ಗಳು

ಪ್ರಮುಖ ರಸ್ತೆಗಳಲ್ಲಿನ ಮ್ಯಾನ್‌ಹೋಲ್‌ಗ‌ಳು ಮಳೆಗಾಲದಲ್ಲಿ ಉಕ್ಕಿಹರಿದು ಸಮಸ್ಯೆ ಸೃಷ್ಟಿಸುತ್ತಿದ್ದು, ಅವುಗಳ ಸಮೀಕ್ಷೆ ನಡೆಸಿ ವರದಿಯನ್ನು ಜಲಮಂಡಳಿಗೆ ನೀಡಲಾಗಿದೆ. ಆದರೆ, ಅವರು ಎಷ್ಟು ಮ್ಯಾನ್‌ಹೋಲ್‌ಗ‌ಳನು ದುರಸ್ತಿಪಡಿಸಿದ್ದಾರೆ ಎಂಬ ಮಾಹಿತಿ ನೀಡಿಲ್ಲ. ಇದೀಗ ವಾಹನ ಸವಾರರಿಗೆ ತೊಂದರೆಯಾಗುತ್ತಿರುವ ಮ್ಯಾನ್‌ಹೋಲ್‌ಗ‌ಳ ಗುರುತಿಸಿ ವರದಿ ಜಲಮಂಡಳಿಗೆ ನೀಡಿದ್ದು, ಅವುಗಳನ್ನು ದುರಸ್ತಿ ಪಡಿಸುವಂತೆ ಕೋರಲಾಗಿದೆ. 
-ಸೋಮಶೇಖರ್‌, ಮುಖ್ಯ ಎಂಜಿನಿಯರ್‌ (ರಸ್ತೆ ಮೂಲಸೌಕರ್ಯ)

* ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next