ಸಾಗರ: ಬುಧವಾರ ಬೆಳಗಿನ ಜಾವ ಇಲ್ಲಿನ ನೆಹರೂ ನಗರದ ಮೊದಲನೇ ತಿರುವಿನಲ್ಲಿ ಇದ್ದಕ್ಕಿದ್ದಂತೆ ರಸ್ತೆ ಬಿರುಕು ಬಿಟ್ಟು ನೀರು ನುಗ್ಗಿದ ಘಟನೆ ನಡೆದಿದ್ದು ಜನ ಭೂಕಂಪ ಆಗಿದೆ ಎಂದು ಭಾವಿಸಿ ಮನೆಯಿಂದ ಹೊರಗೋಡಿದ ಘಟನೆ ನಡೆದಿದೆ.
ಮ್ಯಾನ್‌ಹೋಲ್‌ನಿಂದ ನೀರು ಉಕ್ಕಿ ರಸ್ತೆ ಬಿರುಕು ಬಿಟ್ಟಿದೆ. ಮ್ಯಾನ್‌ಹೋಲ್ ಒಡೆದಿದ್ದರಿಂದ ಹೊರಬಿದ್ದ ಶಬ್ದವನ್ನು ಕೇಳಿ ಅಕ್ಕಪಕ್ಕದ ಮನೆಯವರು ಗಾಬರಿಯಾಗಿದ್ದಾರೆ. ಮ್ಯಾನ್‌ಹೋಲ್ ಒಡೆದಿದ್ದರಿಂದ ನೀರು ಉಕ್ಕಿ ಅಕ್ಕಪಕ್ಕದ ಮನೆಗಳಿಗೆ ಸಹ ನುಗ್ಗಿದೆ.
ಕಳೆದ ಮೂರ‍್ನಾಲ್ಕು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ನಗರದ ವಿವಿಧ ಭಾಗಗಳಲ್ಲಿ ಅಪೂರ್ಣವಾಗಿಯೇ ಉಳಿದಿರುವ ಒಳಚರಂಡಿ ಕಾಮಗಾರಿಗೆ ಅಳವಡಿಸಿದ್ದ ಮ್ಯಾನ್‌ಹೋಲ್ ಒಡೆದು ರಸ್ತೆಗೆ ನೀರು ನುಗ್ಗಿದ ಘಟನೆಗಳು ನಡೆದಿದೆ. ನಗರದ ಮಾರ್ಕೆಟ್ ರಸ್ತೆಯಲ್ಲಿ ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ಚರಂಡಿ ಮುಚ್ಚಿ ಹೋಗಿದ್ದರಿಂದ ಹೆಚ್ಚಿನ ನೀರು ರಸ್ತೆಯಲ್ಲಿ ಹರಿಯುವ ಜೊತೆಗೆ ಅಕ್ಕಪಕ್ಕದ ರಸ್ತೆಗಳಿಗೆ ಸಹ ನುಗ್ಗಿದೆ.
ವಾರ್ಡ್ ನಂ. 24 ರಲ್ಲಿ ಎಡಬಿಡದೆ ಸುರಿದ ಮಳೆಯಿಂದಾಗಿ ನೂರ್ ಜಹಾನ್ ಮತ್ತು ಪರ್ವೀಜ್ ಎಂಬುವವರ ಎರಡು ಮನೆ ಸಂಪೂರ್ಣ ಕುಸಿದು ಹೋಗಿದ್ದು, ಕುಟುಂಬ ನಿರಾಶ್ರಿತವಾಗಿದೆ. ಮನೆ ಬೀಳುತ್ತಿರುವ ಶಬ್ದ ಕೇಳಿದ್ದರಿಂದ ಮನೆಯಲ್ಲಿದ್ದವರು ಹೊರಗೆ ಬಂದಿದ್ದರಿಂದ ಯಾವುದೇ ಅಪಾಯವಾಗಿಲ್ಲ.
ನಗರಸಭೆ ಸದಸ್ಯ ಭೇಟಿ: ಸ್ಥಳಕ್ಕೆ ಭೇಟಿ ನೀಡಿದ ವಾರ್ಡ್ ಸದಸ್ಯ ತಸ್ರೀಫ್ ಇಬ್ರಾಹಿಂ, ನಗರಸಭೆ ಆಡಳಿತ ತಕ್ಷಣ ಮನೆ ಬಿದ್ದ ಕುಟುಂಬಗಳಿಗೆ ಪರಿಹಾರ ಕೊಡಬೇಕು. ಕಳೆದ ವರ್ಷ ಮನೆ ಬಿದ್ದವರಿಗೆ ಈತನಕ ಪರಿಹಾರ ಕೊಡಲಿಲ್ಲ. ನಗರಸಭೆ ಆಡಳಿತ ಇಂತಹ ಸಂದರ್ಭದಲ್ಲಿ ಸಂತ್ರಸ್ತರ ಪರವಾಗಿ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ.