Advertisement

ಮಾವಿನ ಕಾಲ

08:15 AM Feb 09, 2018 | |

ನನ್ನ ಮನದಂಗಳದಲ್ಲಿ ನೆನಪಿನ ಮಾಮರ ಹೂಬಿಟ್ಟಿದೆ. ಅಲ್ಲೆಲ್ಲ ಹೊಸ ಹೂಗಳ ಘಮಲು ತುಂಬಿದೆ. ದುಂಬಿಗಳ ಝೇಂಕಾರ, ಕೋಗಿಲೆಯ ಕೂಜನ ನನ್ನ ಹೃದಯದಲ್ಲಿ ಮಾರ್ದನಿಸುತ್ತಿದೆ. ಆ ನನ್ನ ಬಾಲ್ಯಕಾಲಕ್ಕೆ ಮನಸ್ಸು ಧುಮುಕಿ ಈಜಿ ತಲುಪಿದಾಗ ನೆನಪಿನ ಸುರುಳಿ ಬಿಚ್ಚುತ್ತದೆ. ಆ ಶುಭ್ರ ಬೇಸಿಗೆ ಕಾಲದ ಬೆಳಕು ಮನದ ದುಗುಡದ ಕತ್ತಲನ್ನು ಹೊಡೆದೋಡಿಸುತ್ತದೆ. 

Advertisement

ಈ ವರ್ಷ ಬಹುಶಃ ಮಾವಿನ ಮರದ ಫ‌ಸಲು ಬಹಳವಿರಬಹುದು. ಎಲ್ಲಿ ನೋಡಿದರಲ್ಲಿ ಎಲೆ ಕಾಣದಷ್ಟು ದಟ್ಟವಾಗಿ ಮಾವಿನಮರಗಳು ಹೂಬಿಟ್ಟಿವೆ. ನಾನು ನಿತ್ಯ ಸಾಗುವ ದಾರಿಯಲ್ಲಿ ಹೀಗೆ ಹಲವಾರು ಮಾವಿನ ಮರಗಳು ಎದುರಾಗುತ್ತವೆ. ಮಾವಿನ ಹೂಗಳ ಆ ವಿಶೇಷ ಪರಿಮಳ, ಪೂರ್ತಿ ಹೂಗಳಿಂದ ತುಂಬಿದ ಮಾಮರದ ಸೌಂದರ್ಯ ನನ್ನನ್ನು ಬಹುವಾಗಿ ಸೆಳೆಯುವಾಗ ನನ್ನ ದ್ವಿಚಕ್ರ ವಾಹನದ ವೇಗವನ್ನು ತಗ್ಗಿಸುತ್ತಾ, ಮಾವಿನೊಂದಿಗಿನ ನನ್ನ ನಂಟಿನ ಹಳೆಯ ಸ್ಮರಣೆಗಳನ್ನು ಮೆಲುಕು ಹಾಕುತ್ತ ಸಾಗುತ್ತೇನೆ. ನನ್ನ ತವರುಮನೆಯ ಜಮೀನಿನಲ್ಲಿ ಹಲವು ಮಾವಿನ ಮರಗಳಿದ್ದವು. ನಾವು ಶಾಲೆಗೆ ಹೋಗುವ ದಾರಿಯಲ್ಲಿ ಮಾವಿನ ಮರ ಹೂಬಿಟ್ಟದ್ದನ್ನು ನೋಡುವಾಗ ಬಂದು ಅಮ್ಮನಿಗೆ ಹೇಳುತ್ತಿ¨ªೆವು. ಕೆಲವು ಮಾವಿನಮರಗಳು ಸ್ವಲ್ಪ ಬೇಗ ಹೂಬಿಡುತ್ತವೆ. “”ನಮ್ಮ ಮಾವಿನಮರಗಳಲ್ಲೂ ಹೂ ಅರಳಲು ಶುರುವಾಗಿರಬಹುದು. ಹೋಗಿ ನೋಡಿ. ಒಂದು ವೇಳೆ ಮರ ಚಿಗುರಿದ್ದರೆ ಈ ಸಲ ಅದು ಹೂಬಿಡಲಿಕ್ಕಿಲ್ಲ” ಎಂದು ತಮ್ಮ ಅನುಭವದ ಮಾತನ್ನು ಹೇಳುತ್ತಿದ್ದರು. ನಮ್ಮ ದೈನಂದಿನ ತಪಾಸಣೆಯ ಫ‌ಲವಾಗಿ ಮೊದಲು ಅರಳಿದ ಹೂಗೊಂಚಲಿನಿಂದ ಕೊನೆಗೆ ಅರಳಿದ ಗೊಂಚಲ ತನಕ ಎಲ್ಲವೂ ನಮಗೆ ಚಿರಪರಿಚಿತವಾಗಿಬಿಡುತ್ತಿದ್ದವು. ಹೂವರಳಿದ್ದು ಖಚಿತವಾದ ನಂತರ ನಮ್ಮ ಕಣ್ಣುಗಳೆಂಬ ಸೂಕ್ಷ್ಮದರ್ಶಕಗಳು ಅದರಲ್ಲಿ ಮೂಡುವ ಹೀಚಿಗಾಗಿ ಹುಡುಕುತ್ತಿದ್ದವು. ಸಣ್ಣ ಸಣ್ಣ ಮಿಡಿಗಳು ಮೂಡಿದಾಗ ಒಂದಾದರೂ ನಮಗೆ ಸಿಗಲಿ ಎಂಬ ಪ್ರಾರ್ಥನೆ ಆರಂಭವಾಗುತ್ತಿತ್ತು. ಅದು ಮಾವಿನಕಾಯಿ ಎಂದು ಉಳಿದವರಿಗೆ ಅರ್ಥವಾಗದಷ್ಟು ಸಣ್ಣ ಕಾಯಿ ಉದುರಿ ಕೆಳಗೆ ಬಿದ್ದಾಗ ಅದನ್ನು ಹೆಕ್ಕಿ ರುಚಿ ನೋಡುತ್ತಿದ್ದವು. ಅದರ ಒಳಗಿನ ಗೊರಟು ಬಲಿಯುವವರೆಗಿನ ವಿವಿಧ ಹಂತಗಳ ಮಾವಿನಕಾಯಿಗಳನ್ನು ಕಲ್ಲೆಸೆದು ಬೀಳಿಸಿ, ಉಪ್ಪು ಹಚ್ಚಿಯೋ, ಹಚ್ಚದೆಯೋ ತಿನ್ನುತ್ತಿದ್ದೆವು. 

ಆಗ ಶಾಲೆಗೆ ಹೋಗುವ ಮಕ್ಕಳ ಚೀಲಗಳಲ್ಲಿ ಇಂತಹ ಮಿಡಿ ಮಾವಿನಕಾಯಿಗಳು ಹಾಗೂ ಒಂದು ಬ್ಲೇಡ್‌ ಇರುತ್ತಿತ್ತು. ಪ್ರಥಮವಾಗಿ ಸ್ವಲ್ಪ ದೊಡ್ಡಗಾತ್ರದ ಮಾವಿನಕಾಯಿ ತಂದು, ಬ್ಲೇಡಿನಿಂದ ಅದನ್ನು ಸಣ್ಣ ಚೂರುಮಾಡಿ ಹಂಚಿದವರು ಕ್ಲಾಸಿನ ಹೀರೋ ಅನಿಸಿಕೊಳ್ಳುತ್ತಿದ್ದರು. ಅವರಿಗೆ ಸ್ವಾಭಾವಿಕವಾಗಿ ಗೆಳೆಯರ ಸಂಖ್ಯೆ ಹೆಚ್ಚುತ್ತಿತ್ತು. ಶಿಕ್ಷಕರು ತರಗತಿಗೆ ಬಂದಾಗ ಮೂಗಿನಹೊಳ್ಳೆ ಅಗಲಮಾಡಿ ಪರಿಮಳ ಗುರುತಿಸಿ, ಮಾವಿನಕಾಯಿ ತಂದವರು ಯಾರೆಂದು ವಿಚಾರಿಸುತ್ತಿದ್ದರು. ತಿನ್ನಲು ಜೊತೆಗಿದ್ದ ಗೆಳೆಯರ ಬಳಗ ಈಗ ತೆಪ್ಪಗಿರುತ್ತಿತ್ತು. ಆದರೂ ಮಾವಿನಕಾಯಿ ತರಗತಿಗೆ ತರುವವರ ಸಂಖ್ಯೆ ಕಡಿಮೆಯಾಗುವ ಬದಲು ಹೆಚ್ಚುತ್ತಿತ್ತು. ಕೆಲವು ಶಿಕ್ಷಕಿಯರು ಮಕ್ಕಳಿಂದ ಒಂದೆರಡು ಮಾವಿನಕಾಯಿ ಪಡೆದು ಚಟ್ನಿಗೆಂದು ತೆಗೆದುಕೊಂಡು ಹೋಗುತ್ತಿದ್ದುದೂ ಇದೆ. 

ಕಾಡುಮಾವಿನಕಾಯಿ ಉಪ್ಪಿನಕಾಯಿ ಮಾಡುವ ಮಿಡಿ ಮಾವಿನಕಾಯಿಯ ಹದಕ್ಕೆ ಬಂದಾಗ ಅಮ್ಮ-ಅಜ್ಜಿ ಎಲ್ಲ ಕೆಲಸದವರನ್ನು ಮರಕ್ಕೆ ಹತ್ತಿಸಿ ಮಾವಿನಕಾಯಿ ಕೊಯ್ಯಿಸುತ್ತಿದ್ದರು. ಕೆಳಗೆ ಬಿದ್ದ ಮಾವಿನಕಾಯಿಗಳನ್ನು ಹೆಕ್ಕುವ ಕೆಲಸ ನಾವು ಮಕ್ಕಳದ್ದು. ಅದನ್ನು ಬುಟ್ಟಿಯಲ್ಲೋ ಗೋಣಿಯಲ್ಲೋ ತುಂಬಿಸಿ ತಂದಾಗ ಕೆಳಗೆ ಬಿದ್ದು ಒಡೆದದ್ದನ್ನೆಲ್ಲಾ ಬೇರ್ಪಡಿಸಿ ಇಟ್ಟು ಒಳ್ಳೆಯದ್ದನ್ನೆಲ್ಲಾ ತೊಟ್ಟು ತೆಗೆದು, ಒರೆಸಿ ಇಡಲು ನಾವು ಸಹಕರಿಸುತ್ತಿದ್ದೆವು. ಮಾವಿನ ತೊಟ್ಟು ಮುರಿಯುವ ರಭಸಕ್ಕೆ ಅದರ ಸೊನೆ ಕಣ್ಣಿಗೆ ಬೀಳಿಸಿಕೊಳ್ಳಬೇಡಿ ಎಂದು ಅಜ್ಜಿ ಎಚ್ಚರಿಸುತ್ತಿದ್ದರು. ತೊಳೆದು ಒರೆಸಿ ಒಣಗಿಸಿ ತಂದ ಭರಣಿಗಳಲ್ಲಿ ಮಾವಿನಕಾಯಿಗಳನ್ನು ಹಾಕಿ ಉಪ್ಪು ಹಾಕಿ, ಮುಚ್ಚಳ ಮುಚ್ಚಿ ಬಟ್ಟೆಯಿಂದ ಅದರ ಬಾಯಿ ಕಟ್ಟಿ ಇಡುತ್ತಿದ್ದರು. ಕೆಲದಿನಗಳ ಬಳಿಕ ಅದಕ್ಕೆ ಮಸಾಲೆ ಅರೆದು ಸೇರಿಸುತ್ತಿದ್ದರು. ಆ ಉಪ್ಪಿನಕಾಯಿ ವರ್ಷಪೂರ್ತಿ ಇರುತ್ತಿತ್ತು. ಅಲ್ಲದೇ ಅದು ಹಾಳಾಗುತ್ತಲೂ ಇರಲಿಲ್ಲ. ಈಗಲೂ ಆ ರುಚಿ ನೆನೆಯುವಾಗ ಬಾಯಲ್ಲಿ ನೀರೂರುತ್ತದೆ. ನಮ್ಮ ಮನೆಯ ವಠಾರದ ಮಾವಿನಮಿಡಿಯಲ್ಲದೇ ಮನೆಸಮೀಪದ ಕಾಡಿನಿಂದಲೂ  ಮಿಡಿ ತಂದು ಉಪ್ಪಿನಕಾಯಿ ಹಾಕುತ್ತಿದ್ದೆವು. ಹುರಿದ ಹುಡಿಹಾಕಿ ಮಾಡುವ ಈ ಉಪ್ಪಿನಕಾಯಿ ಅಲ್ಲದೇ ತಕ್ಷಣದ ಬಳಕೆಗಾಗಿ ಮಾಡುವ ಹಸಿ ಹುಡಿಯ ಉಪ್ಪಿನಕಾಯಿಯೂ ಇತ್ತು. ದೊಡ್ಡ ಮಾವಿನಕಾಯಿಗಳನ್ನು ಅತಿ ಸಣ್ಣ ಹೋಳುಗಳನ್ನಾಗಿ ಮಾಡಿ ಹಾಕಿದ ಈ ಉಪ್ಪಿನಕಾಯಿ ತುಂಬಾ ದಿನ ಇಟ್ಟುಕೊಳ್ಳಲು ಬಾರದಿದ್ದರೂ ತನ್ನ ರುಚಿಗೆ ಸರಿಸಾಟಿ ಬೇರೆಯಿಲ್ಲ ಎನಿಸಿಕೊಂಡಿದ್ದರಿಂದ ನಮ್ಮ ಫೇವರಿಟ್‌ ಆಗಿತ್ತು. ಈ ದಿಢೀರ್‌ ಉಪ್ಪಿನಕಾಯಿಯನ್ನು ನಾವು ಒಂದು ಸಣ್ಣ ಬೌಲಿನಷ್ಟನ್ನು ಒಮ್ಮೆಲೇ ತಿನ್ನುತ್ತಿದ್ದುದೂ ಇದೆ. ಮಾವಿನಕಾಯಿಯನ್ನು ಸಣ್ಣ ಹೋಳುಗಳನ್ನಾಗಿ ಮಾಡಿ ತಯಾರಿಸುವ ಪದಾರ್ಥವನ್ನೂ ನಾವು ಇಷ್ಟಪಡುತ್ತಿದ್ದೆವು. ಆದರೆ ದಿನಗಳೆದಂತೆ ಬಹುತೇಕ ಎಲ್ಲಾ ಸಾಂಬಾರುಗಳೂ ಹಲಸಿನ ಬೀಜ, ಮಾವಿನ ಹೋಳು ಇತ್ಯಾದಿಗಳನ್ನೇ ಮೂಲವಸ್ತುವನ್ನಾಗಿ ಹೊಂದಿದಾಗ, “ಸಾಕಪ್ಪಾ ಸಾಕು ಈ ಮಾವಿನಕಾಲ’ ಎನ್ನುತ್ತಿದ್ದುದೂ ಇದೆ. ಈ ಮಾವಿನಕಾಯಿಗಳು ಮಾಗಿ ಹಣ್ಣಾಗಲು ಪ್ರಾರಂಭಿಸುವಾಗ ಅದರಿಂದ ವಿವಿಧ ಗೊಜ್ಜು, ಸಾಂಬಾರುಗಳು ತಯಾರಾಗುತ್ತಿದ್ದವು. ಮಾವು ಹಣ್ಣಾದರೆ ಮತ್ತೆ ನಮಗೆಲ್ಲಾ ಊಟ ಬೇಕೆಂದಿರಲಿಲ್ಲ. ನಮ್ಮ ಮನೆಯಲ್ಲೇ ಹಲವು ತರಹದ ಮಾವಿನಮರಗಳಿದ್ದರೂ ನಮ್ಮ ನೆಂಟರಿಷ್ಟರ, ನೆರೆಮನೆಯವರ ಮಾವಿನಮರಗಳಿಂದಲೂ ಬಿದ್ದ ಹಣ್ಣುಗಳನ್ನು ಹೆಕ್ಕಲು ನಾಮುಂದು ತಾಮುಂದು ಎಂದು ಓಡುತ್ತಿದ್ದೆವು.

ನಮ್ಮ ಮಾವಿನಪುರಾಣ ಮುಗಿಯುವಂಥದ್ದಲ್ಲ. ಈಗ ಮಾವಿನಮರಗಳು ಹೂಬಿಟ್ಟಾಗ ನನಗಾಗುವ ಸಂಭ್ರಮ ಇಂದಿನ ಮಕ್ಕಳಲ್ಲಿ ಕಾಣುತ್ತಿಲ್ಲ. ಮಾವಿನಮಿಡಿಗಾಗಿ ಅದರ ಬುಡದಲ್ಲಿ ಹುಡುಕಲು, ಕಲ್ಲೆಸೆದು ಮಾವಿನಕಾಯಿ ಬೀಳಿಸಿ, ಅದನ್ನು ಹೋಳುಮಾಡಿ, ಉಪ್ಪು, ಮೆಣಸಿನಹುಡಿ ಬೆರೆಸಿ ತಿನ್ನಲು ಈಗಿನ ತಲೆಮಾರಿಗೆ ಅಂತಹ ಉತ್ಸಾಹ ಕಾಣುತ್ತಿಲ್ಲ. ಆದರೆ, ನಾನು ಹಾಗೂ ನನ್ನ ಸರೀಕರಿಗೆ ಈಗಲೂ ಆ ಉತ್ಸಾಹ, ಆಸೆ ಖಂಡಿತ ಉಳಿದಿದೆ. ಹುಳಿ ಮಾವಿನಕಾಯಿ ತಿಂದು ಹಲ್ಲು ಹುಳಿಯಾಗಿ ಜುಮ್ಮೆನ್ನುವ ಆ ಸುಖ ನಿಜಕ್ಕೂ ಮರೆಯುವಂಥದ್ದಲ್ಲ ಅಲ್ಲವೇ?

Advertisement

ಜೆಸ್ಸಿ ಪಿ. ವಿ.

Advertisement

Udayavani is now on Telegram. Click here to join our channel and stay updated with the latest news.

Next