Advertisement
ಹೀಗೆ ಬೆಳೆಯುತ್ತಿದಂತೆ ಮುಂದೆ ಮರಗಳ ಹೆಸರಿನ ಪಟ್ಟಿ ಮಾಡುತ್ತಾ ಮಾವಿನ ಮರದ ಸೇರ್ಪಡೆ ಆಗುತ್ತದೆ. ಪದ್ಯಕ್ಕೆ ಬರುವುದಾದರೆ “ಹತ್ತು ಹತ್ತು ಇಪ್ಪತ್ತು, ತೋಟಕೆ ಹೋದನು ಸಂಪತ್ತು’ ಎಂಬ ಪದ್ಯದಲ್ಲಿ ಪುಟ್ಟ ಹುಡುಗ ತೋಟಕ್ಕೆ ನುಗ್ಗಿ ಮಾವಿನ ಹಣ್ಣ ನ್ನು ಕೀಳುವಸಾಹಸ ಮಾಡುವ ಪದ್ಯದಲ್ಲಿ ಸಂಖ್ಯೆಗಳ ಪರಿಚಯವು ಮಾವಿನ ಹಣ್ಣಿನ ಆಸೆಯೊಂದಿಗೆ ಸೇರಿ ಹೋಗಿದೆ.
Related Articles
Advertisement
ಬಯಕೆ ಹುಟ್ಟಿಸುವುದು ಇದೇ ಮಾವು! : ಮಗುವಿಗೆ ಹಲ್ಲು ಬರುವ ಮುನ್ನವೇ, ಮಾವಿನ ಸವಿ ನಾಲಿಗೆಗೆ ತಲುಪಿರುತ್ತದೆ. ವಿಟಮಿನ್ ಎ, ಫೈಬರ್,ಪೊಟಾಸಿಯಂ ಹಾಗೂಇನ್ನೂ ಹಲವು ಪೌಷ್ಟಿಕಾಂಶಗಳು ಈ ಹಣ್ಣಿನಲ್ಲಿ ಹೇರಳವಾಗಿ ಇರುವುದರಿಂದ ವೈದ್ಯರು ಇದನ್ನು ಮಕ್ಕಳಿಗೆ ಚಿಕ್ಕವರಿರುವಾಗಲೇ ತಿನ್ನಿಸಬಹುದು ಎಂದು ಹೇಳುತ್ತಾರೆ. ಬೆಳೆಯುತ್ತಾ ಇದೇ ಹಣ್ಣಿನ ಸೀಕರ್ಣೆ, ಮಿಲ್ಕ್ ಶೇಕ್, ಬರ್ಫಿ ಹೀಗೆ ಹತ್ತು ಹಲವು ಮಾವಿನ ತಿನಿಸುಗಳು ಪ್ರಿಯವಾಗಿ ಬಿಡುತ್ತದೆ. ಪಾಯಸ, ಕೋಸಂಬರಿ, ಚಿತ್ರಾನ್ನದಿಂದ ಹಿಡಿದು ಐಸ್‌ಕ್ರೀಮ್ ತನಕ ಮಾವಿನಕಾಯಿ, ಹಣ್ಣಿನ ಬಳಕೆ ಮಾಡಬಹುದು. ಮಾವಿನ ಕಾಯಿಗೆ ಉಪ್ಪು, ಖಾರ ಹಚ್ಚಿ ಶಾಲಾ, ಕಾಲೇಜುಗಳ ಮುಂದೆ ಗಾಡಿಗಳಲ್ಲಿ ಮಾರುತ್ತಿದ್ದರೆ ನಮಗೆ ಬಾಯಲ್ಲಿ ನೀರೂರುವುದಂತೂ ಖಂಡಿತ. ಮಾವಿನ ಚಾಕಲೇಟ್, ಮ್ಯಾಂಗೋ ಟಾಫಿಸ್ ಚೀಪಿ ತಿನ್ನಲು ಚಂದ. ಬಸುರಿಯರಿಗೆ ಬಯಕೆ ಹುಟ್ಟಿಸುವುದು ಇದೇ ಮಾವಲ್ಲವೇ? ಉಪ್ಪಿನ ಕಾಯಿಗಳಲ್ಲೂ ಇದರದ್ದೇ ಕಾರುಬಾರು.
ಮಾವಿನ ಎಲೆಗಳು ಶುಭ ಸಮಾರಂಭಗಳಲ್ಲಿ ಕಳಶಕ್ಕೆ ಸೇರಿ, ಮನೆಯ ಮುಂದಿನ ತೋರಣವಾಗಿ, ಚಪ್ಪರದಲ್ಲಿಯೂ ಶೋಭಿಸುತ್ತವೆ. ಮಾವಿನ ಮರದ ತೊಗಟೆ, ಹೂ, ಎಲೆ, ಹಣ್ಣು, ಬೀಜ ಎಲ್ಲದರಲಿಯೂ ಔಷಧೀಯ ಗುಣಗಳಿದ್ದು ಆಯುರ್ವೇದ ಔಷಧಗಳಲ್ಲಿ ಬಳಕೆಯಾಗುತ್ತದೆ. ಬಾದಾಮಿ, ರಸಪುರಿ, ತೋತಾಪುರಿ, ಮಲ್ಲಿಕಾ, ಮಲಗೋವಾ, ನೀಲಂ, ಸಿಂಧು, ಆಮ್ರಪಾಲಿ..ಹೀಗೆ ಹಲವಾರು ಮಾವಿನ ಹಣ್ಣಿನ ತಳಿಗಳಿದ್ದು, ಪ್ರತಿಯೊಂದೂ ತನ್ನದೇ ಆದ ರುಚಿ ಹೊಂದಿರುತ್ತದೆ. ಒಟ್ಟಿನಲ್ಲಿ ಎರಡನೇ ಕಲ್ಪವೃಕ್ಷ ಮಾವಿನ ಮರ ಎಂದರೆ ಅತಿಶಯೋಕ್ತಿ ಆಗಲಾರದು.
-ಶ್ರೀಲಕ್ಷ್ಮೀ