ಬೆಂಗಳೂರು: ಇತ್ತೀಚೆಗೆ ಕೇರಳದಲ್ಲಿ ಕಾಣಿಸಿಕೊಂಡಿರುವ “ನಿಪ’ ವೈರಸ್ ಹರಡುವಿಕೆಗೆ ಸಂಬಂಧಿಸಿದ ಉಹಾಪೂಹ ಗಳು ಇದೀಗ ಮಾವಿನ ಹಣ್ಣಿನ ರಫ್ತು ವಹಿವಾಟಿನ ಮೇಲೆ ಪ್ರಭಾವ ಬೀರಿದ್ದು, ದೇಶದಿಂದ ಮಾವು ರಫ್ತು ಬಹುತೇಕ ಸ್ಥಗಿತಗೊಂಡಿದೆ! ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಮಾವಿನ ಹಣ್ಣುಗಳಿಗೆ ಭಾರಿ ಬೇಡಿಕೆಯಿದೆ. ಆದರೆ ಹಕ್ಕಿಗಳು ತಿಂದ ಹಣ್ಣು ಸೇವಿಸಿದರೆ ನಿಪ ವೈರಸ್ ಹರಡುತ್ತದೆ ಎಂಬ ವದಂತಿ ಕೊಲ್ಲಿ ರಾಷ್ಟ್ರಗಳನ್ನೂ ತಲುಪಿದೆ.
ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಭಾರತ ದಿಂದ ರಫ್ತಾಗುವ ಮಾವಿನ ಹಣ್ಣುಗಳನ್ನು ಅನುಮಾನದಿಂದ ನೋಡಲಾಗುತ್ತಿದೆ. ಪರಿಣಾಮ, ಬೇಡಿಕೆ ಕುಸಿದಿದೆ. ದುಬೈ ಸೇರಿ ಇತರ ಕೊಲ್ಲಿ ರಾಷ್ಟ್ರಗಳು ಮಾವಿನ ಹಣ್ಣಿಗೆ ಭಾರತವನ್ನೇ ಅವಲಂಬಿಸಿವೆ.
ಪ್ರತಿ ವರ್ಷ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಂದ ಅರಬ್ ರಾಷ್ಟ್ರಗಳಿಗೆ ಮಾವು ರಫ್ತಾಗುತ್ತಿದೆ. ಆದರೆ, ಇತ್ತೀಚೆಗೆ ಕೇರಳದಲ್ಲಿ ಕಾಣಿಸಿಕೊಂಡಿರುವ ನಿಪ ಸೋಂಕು, ಹಕ್ಕಿ ತಿಂದ ಹಣ್ಣುಗಳಿಂದಲೇ ಬರುತ್ತಿದೆ ಎಂಬ ವದಂತಿಯಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ದಿಢೀರ್ ಕುಸಿದಿದ್ದು, ತಾತ್ಕಾಲಿಕವಾಗಿ ರಪ್ತು ಸ್ಥಗಿತಗೊಂಡಿದೆ. ಬಾದಾಮಿ, ಆಲ್ಫಾನ್ಸೋ , ಅಮ್ರಪಾಲಿ, ಮಲಗೋವಾ, ಮಲ್ಲಿಕಾ, ರಸಪುರಿ, ನೀಲಂ, ಕಾಲಾಪಾಡ್, ಸಿಂಧೂರ ಸೇರಿದಂತೆ ನಾನಾ ತಳಿಯ ಮಾವು ದುಬೈ , ಕುವೈತ್, ಕತಾರ್, ಯುಎಇ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಿಗೆ ರಫ್ತಾಗುತ್ತವೆ.
ಕಳೆದ ಮಾರ್ಚ್ ಅಂತ್ಯದವರೆಗೂ ಸುಮಾರು 889 ಟನ್‌ನಷ್ಟು ಮಾವು ವಿದೇಶಕ್ಕೆ ರಫ್ತಾಗಿತ್ತು. ಇದರಲ್ಲಿ ಬಾದಾಮಿ ಮಾವಿಗೆ ಅಗ್ರಸ್ಥಾನ. ಹಾಗಾಗಿ ಈ ಋತುಮಾನದಲ್ಲಿ ಉತ್ತಮ ವಹಿವಾಟು ನಿರೀಕ್ಷಿಸಲಾಗಿತ್ತು ಎಂದು ಮಾವು ಅಭಿವೃದ್ಧಿ ನಿಗಮದ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.
ಸ್ಥಳೀಯವಾಗಿ ತಗ್ಗದ ಬೇಡಿಕೆ: ಒಂದೆಡೆ ವಿದೇಶಿಗರು ನಿಪ ಭಯದಿಂದ ಮಾವಿನ ಹಣ್ಣುಗಳಿಂದ ದೂರ ಉಳಿದಿದ್ದರೆ, ಇತ್ತ ನಾಡಿನ ಮಾವು ಪ್ರಿಯರಿಗೆ ನಿಪ ಸೋಂಕಿನ ಭೀತಿಯಿಲ್ಲ. ಸಸ್ಯಕಾಶಿ ಲಾಬ್‌ಲಾಗ್‌ನಲ್ಲಿ ಮಾವು ಮಾರಾಟ ಉತ್ತಮವಾಗಿದೆ. ಮೇ 25ರಿಂದೀಚೆಗೆ ಲಾಲ್‌ಬಾಗ್‌ನಲ್ಲಿ 510 ಟನ್ ಮಾವು ಮಾರಾಟವಾಗಿದ್ದು, 3.60 ಕೋಟಿ ರೂ. ವಹಿವಾಟು ನಡೆದಿದೆ. ಇದರಲ್ಲಿ ಆಲ್ಫಾನ್ಸೋ 208 ಟನ್, ಮಲ್ಲಿಕಾ 87 ಟನ್, ರಸಪುರಿ 53.12 ಟನ್, ಸಿಂಧೂರ 36.64 ಟನ್, ಮಲಗೋವಾ 28.02 ಟನ್, ಸಕ್ಕರೆ ಗುತ್ತಿ 21.37 ಟನ್, ತೋತಾಪುರಿ 21.98 ಟನ್ ಹಾಗೂ ಇತರೆ ತಳಿಯ ಮಾವು ಸುಮಾರು 53.87 ಟನ್‌ನಷ್ಟು ಮಾರಾಟವಾಗಿದೆ ಎಂದು ರಾಜ್ಯ ಮಾವು ಅಭಿವೃದ್ಧಿ ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಸಿ.ಜಿ.ನಾಗರಾಜ್ ಹೇಳಿದ್ದಾರೆ.
ಹಾಪ್‌ಕಾಮ್ಸ್‌ನಲ್ಲೂ ಮಾರಾಟ ಜೋರು: ಲಾಲ್‌ಬಾಗ್ ಮಾತ್ರವಲ್ಲದೇ ಹಾಪ್‌ಕಾಮ್ಸ್ ಮಳಿಗೆಗಳಲ್ಲೂ ಮಾವು ಮಾರಾಟ ಅಬಾಧಿತವಾಗಿ ನಡೆದಿದೆ. ನಗರದ 325 ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಇತ್ತೀಚಿನವರೆಗೆ 203 ಟನ್
ಮಾವು ಮಾರಾಟವಾಗಿದೆ. ಜುಲೈವರೆಗೂ ಮಾರಾಟ ಮೇಳ ಮುಂದುವರಿಯಲಿದ್ದು, ಒಂದು ಸಾವಿರ ಟನ್ ಮಾವು ಮಾರಾಟ ಮಾಡುವ ಗುರಿಯನ್ನು ಹಾಪ್‌ಕಾಮ್ಸ್ ಹೊಂದಿದೆ. ಮಾವು ಮೇಳ ಆರಂಭವಾದಾಗಿನಿಂದ ಈವರೆಗೆ ಬಾದಾಮಿ 63 ಟನ್, ರಸಪುರಿ 60 ಟನ್, ಸಿಂಧೂರ 20, ಆಲ್ಫಾನ್ಸೋ 25 ಟನ್, ಮಲಗೋವಾ 10 ಟನ್, ಮಲ್ಲಿಕಾ 16 ಟನ್ ಮಾವಿನ ಹಣ್ಣು ಮಾರಾಟವಾಗಿದೆ ಎಂದು ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ, ರಾಮನಗರ ಸೇರಿದಂತೆ ಇತರೆಡೆಯ ರೈತರಿಂದ ಮಾವು ಖರೀದಿಸಲಾಗುತ್ತದೆ. ಸ್ಥಳೀಯ ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ದರಕ್ಕೆ ಮಾವು ಖರೀದಿಸಿ ರೈತರನ್ನು ಉತ್ತೇಜಿಸಲಾಗುತ್ತಿದೆ. ಬೇಡಿಕೆಯ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ ಸಿಟಿಯ ಇನ್ಪೋಸಿಸ್ ಆವರಣ, ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕಾ ಟೌನ್‌ಶಿಪ್ ಪ್ರಾಧಿಕಾರದ (ಇಎಲ್ ಸಿಟಿಎ) ಆವರಣದಲ್ಲಿ ಹಾಪ್‌ಕಾಮ್ಸ್ ಮಳಿಗೆ ತೆರೆಯಲಾಗಿದ್ದು, ಉತ್ತಮ ವಹಿವಾಟು ನಡೆದಿದೆ ಎಂದು ತಿಳಿಸಿದರು.
ನಿಪ ಸೋಂಕಿನ ಬಗೆಗಿನ ವದಂತಿ ಇದ್ದರೂ ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಮಾವು ಮಾರಾಟದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಮುಂದೆಯೂ ಪರಿಣಾಮ ಬೀರುವ ಸಾಧ್ಯತೆ ಕಡಿಮೆ. ಯಾವುದೇ ಕಾರಣಕ್ಕೂ ರೈತರಿಗೆ ನಷ್ಟವಾಗಬಾರದು ಎಂಬುದು ನಮ್ಮ ಕಾಳಜಿ.
ಚಂದ್ರೇಗೌಡ, ಹಾಪ್‌ಕಾಮ್ಸ್ ಅಧ್ಯಕ್ಷ
ದೇವೇಶ ಸೂರಗುಪ್ಪ