Advertisement

ಮಾವು ಮೇಳಕ್ಕೆ ಪಾಲಿಕೆಯಿಂದ ಉಚಿತ ಸ್ಥಳಾವಕಾಶ

12:24 PM May 24, 2017 | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಉದ್ಯಾನಗಳು ಹಾಗೂ ಮೈದಾನಗಳಲ್ಲಿ ಮಾವು ಮೇಳ ಆಯೋಜಿಸಲು ಉಚಿತ ಸ್ಥಳಾವಕಾಶ ಒದಗಿಸುವುದಾಗಿ ಮೇಯರ್‌ ಜಿ.ಪದ್ಮಾವತಿ ಭರವಸೆ ನೀಡಿದ್ದಾರೆ.

Advertisement

ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್‌ನ 112ನೇ ವರ್ಷಾಚರಣೆ “ಕ್ಲಬ್‌ ಡೇ’ ಅಂಗವಾಗಿ ಕೆಜಿಎಸ್‌ ಕ್ಲಬ್‌ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಆಹಾರ ಮತ್ತು ಮಾವು, ಹಲಸು ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಹಕರಿಗೆ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಒದಗಿಸುವ ಜತೆಗೆ, ಮಾವು ಬೆಳೆಗಾರರ ಅಭಿವೃದ್ಧಿಗಾಗಿ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಮಾವು ಮೇಳ ಆಯೋಜಿಸುತ್ತಿರುವುದು ಸ್ವಾಗತಾರ್ಹ.

ಪ್ರಸ್ತುತ ದಿನಗಳಲ್ಲಿ ಕೆಲವೆಡೆ ರಾಸಾಯನಿಕ ಬಳಸಿ ಹಣ್ಣು ಮಾಡಿದ ಮಾವು ಮಾರಾಟ ಮಾಡುತ್ತಿದ್ದು, ಅದನ್ನು ತಿಂದ ಗ್ರಾಹಕರ ಆರೋಗ್ಯಕ್ಕೆ ಮಾರಕವಾಗುತ್ತಿದೆ. ಈ ನಿಟ್ಟಿನಲ್ಲಿ ಮಾವು ನಿಗಮವು ರೈತರು ಬೆಳೆದ ಮಾವನ್ನು ನೇರವಾಗಿ ಅತೀ ಕಡಿಮೆ ದರದಲ್ಲಿ ಗ್ರಾಹಕರಿಗೆ ಸಿಗುವಂತೆ ವ್ಯವಸ್ಥೆ ಮಾಡುತ್ತಿರುವುದು ಸ್ವಾಗತಾರ್ಹ ಎಂದರು.

ಅತೀ ಹೆಚ್ಚು ಜನಸಂದಣಿ ಇರುವ ಬಿಬಿಎಂಪಿ ವ್ಯಾಪ್ತಿಯ ಪಾರ್ಕ್‌ಗಳು, ಮೈದಾನಗಳನ್ನು ಗುರುತಿಸಿ ಮೇಳ ಮಾಡಲು ನಿಗಮ ಮುಂದೆ ಬಂದರೆ, ಉಚಿತವಾಗಿ ಅವಕಾಶವನ್ನು ಪಾಲಿಕೆ ನೀಡಲಿದೆ. ಅದಕ್ಕಾಗಿ ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ರೈತರ ಅಭಿವೃದ್ಧಿಗಾಗಿ ಪಾಲಿಕೆ ತನ್ನ ಕೈಲಾದ ನೆರವು ನೀಡಲಿದೆ ಎಂದು ಹೇಳಿದರು. 

Advertisement

ರಾಜ್ಯ ಮಾವು ಅಭಿವೃದ್ಧಿ ನಿಗಮ ಅಧ್ಯಕ್ಷ ಎಲ್‌.ಗೋಪಾಲಕೃಷ್ಣ ಮಾತನಾಡಿ, ಮಾವು ಬೆಳೆಗಾರರಿಗೆ ಉಚಿತವಾಗಿ ಮಳಿಗೆಗಳನ್ನು ಹಾಕಿಕೊಡಲಾಗುತ್ತದೆ. ಕೆಲವು ಬಿಬಿಎಂಪಿ ಮೈದಾನಗಳಲ್ಲಿ ಮೇಳ ನಡೆಸಲು ಸ್ಥಳಾವಕಾಶ ಕೇಳಿದಾಗ ಅಧಿಕಾರಿಗಳು ಪಾಲಿಕೆಗೆ ಇಂತಿಷ್ಟು ಶುಲ್ಕ ಪಾವತಿಸಬೇಕು ಎಂದು ಹೇಳಿದ್ದರು. ಮೇಯರ್‌ ಅವರು ಉಚಿತವಾಗಿ ಮೇಳ ನಡೆಸಲು ಜಾಗ ನೀಡುವ ಭರವಸೆ ನೀಡಿದ್ದು ಅಭಿನಂದನೀಯ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಮಾವು ಅಭಿವೃದ್ಧಿ ನಿಗಮ ಅಧ್ಯಕ್ಷ ಪಿ.ರಾಜಕುಮಾರ್‌, ಸಂಬಾರ ಅಭಿವೃದ್ಧಿ ನಿಗಮ ಅಧ್ಯಕ್ಷ ಶಶಿಕಲಾ ಕವಲಿ, ಕೆಜಿಎಸ್‌ ಕ್ಲಬ್‌ ಅಧ್ಯಕ್ಷ ಆರ್‌.ಶ್ರೀನಿವಾಸ್‌, ಗೌರವ ಕಾರ್ಯದರ್ಶಿ ಬಿ.ಎಸ್‌.ಸುಂದರಮೂರ್ತಿ, ಖಜಾಂಚಿ ಬನವಾಸಿ ಎಸ್‌.ಎಂ.ಕೃಷ್ಣಮೂರ್ತಿ, ಮಾವು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕದಿರೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಸಿರಿಧಾನ್ಯ, ಜೇನೂ ಲಭ್ಯ
ಮಾವು ಅಭಿವೃದ್ದಿ ನಿಗಮದಿಂದ 5 ಮಳಿಗೆಗಳ ಪೈಕಿ ನಾಲ್ಕರಲ್ಲಿ ಮಾವು ಹಾಗೂ ಒಂದು ಮಳಿಗೆಯಲ್ಲಿ ಹಲಸು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಉಳಿದ ನಾಲ್ಕು ಮಳಿಗೆಯಲ್ಲಿ ಸಿರಿಧಾನ್ಯ, ಜೇನು ಹಾಗೂ ಉತ್ತಮ ಕರ್ನಾಟಕ ಶೈಲಿಯ ಖಾದ್ಯ ಮಳಿಗೆಗಳಿವೆ. ಇಲ್ಲಿಯೂ ಮಾವು ಖರೀದಿಗೆ ಶೇ.10ರಷ್ಟು ರಿಯಾಯಿತಿ ನೀಡಲಾಗಿದೆ. ಮೇ 23ರಿಂದ 25ರವರೆ ಮೇಳ ನಡೆಯಲಿದೆ.ಮೇಯರ್‌ ಜಿ.ಪದ್ಮಾವತಿ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next