Advertisement
ಮಾವು ಮೇಳ/ಮಾವು ಜಾತ್ರೆಯಲ್ಲಿ ರಾಜ್ಯದ ಧಾರವಾಡ, ಕೊಪ್ಪಳ, ಚಿತ್ರದುರ್ಗ, ದಾವಣಗೆರೆ ನೆರೆಯ ಆಂಧ್ರದ ಅನಂತಪುರ ಜಿಲ್ಲೆ ಸೇರಿ ವಿವಿಧ ಜಿಲ್ಲೆಗಳಿಂದ ಸುಮಾರು 55-60 ಮಾವು ಬೆಳೆಯುವ ರೈತರು ಮೇಳದಲ್ಲಿ ಭಾಗವಹಿಸಿದ್ದರು. ಮೇಳದಲ್ಲಿ ವಿವಿಧ ರೀತಿಯ ಸುಮಾರು 308 ಮಾವುಗಳನ್ನು ಪ್ರದರ್ಶನಕ್ಕಿಟ್ಟಿದ್ದು, ಗ್ರಾಹಕರ ಗಮನ ಸೆಳೆಯಲಾಯಿತು. ಈ ಪೈಕಿ ಅಂದಾಜು 10-12 ತಳಿಗಳ ಮಾವುಗಳನ್ನು ಮಾರಾಟಕ್ಕೆ ಇಡಲಾಗಿದ್ದು, ನಗರದ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶರಣಪ್ಪ ಎಸ್.ಭೋಗಿ ತಿಳಿಸಿದರು.
Related Articles
Advertisement
ಮೂರು ದಿನಗಳ ಮಾವು ಮೇಳಕ್ಕೆ ಗ್ರಾಹಕರು, ನಗರದ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಒಂದೆಡೆಯಾದರೆ, ರಾಜ್ಯಮಟ್ಟದ ಮೇಳದಲ್ಲಿ ಗಣಿನಾಡು ಬಳ್ಳಾರಿ ಜಿಲ್ಲೆಯ ಐದು ತಾಲೂಕುಗಳಿಂದ ಒಬ್ಬ ರೈತರು ಸಹ ಭಾಗವಹಿಸದಿರುವುದು ಜಿಲ್ಲೆಯ ಮಟ್ಟಿಗೆ ಬೇಸರ ಮೂಡಿಸಿದೆ. ಇನ್ನು ನೆರೆಯ ವಿಜಯನಗರ ಜಿಲ್ಲೆಯಿಂದ ಇಬ್ಬರು ರೈತರು ಬಂದಿದ್ದರಾದರೂ, ಮೂರು ದಿನಗಳಿಗೆ ಬೇಕಾಗುವಷ್ಟು ಹಣ್ಣುಗಳು ಇಲ್ಲದಿರುವುದರಿಂದ ಎರಡನೇ ದಿನಕ್ಕೆ ಖಾಲಿಮಾಡಿಕೊಂಡು ತೆರಳಿದ್ದಾರೆ. ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕು ಮೆನೆದಾಳ ಗ್ರಾಮದ ರೈತ ಗವಿಸಿದ್ದಪ್ಪ ಕೇಸರಿ ತಳಿಯ 2 ಟನ್ ಮಾವನ್ನು ಕಿಲೋ 100 ರೂ.ಗೆ ಮಾರಾಟ ಮಾಡಿದ್ದಾರೆ. ಕಮಲಾಪುರದ ರೈತ ಪ್ರಶಾಂತ್ ಸಿಂಗ್ 8 ಕ್ವಿಂಟಲ್ ಮಾರಾಟ ಮಾಡಿದ್ದಾರೆ. ಆದರೆ, ಮೂರು ದಿನಗಳ ಮೇಳದಲ್ಲಿ ಹಣ್ಣುಗಳ ಬಣ್ಣಕ್ಕೆ ಮಾರುಹೋಗಿದ್ದ ಗ್ರಾಹಕರು, ರಸಾಯನಿಕ ಬಣ್ಣರಹಿತ ಹಣ್ಣುಗಳ ಬಗ್ಗೆ ನಿರಾಸಕ್ತಿ ಹೊಂದಿದ್ದು ಗಮನಾರ್ಹ.
ಬಳ್ಳಾರಿಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಮೂರು ದಿನಗಳ ಮಾವುಮೇಳ/ಮಾವು ಜಾತ್ರೆಯಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೆರೆಯ ಆಂಧ್ರದ ಅನಂತಪುರ ಜಿಲ್ಲೆ ಸೇರಿ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳ 55-60 ರೈತರು ಮೇಳದಲ್ಲಿ ಭಾಗವಹಿಸಿದ್ದು, ಮೂರು ದಿನಗಳಲ್ಲಿ ಸುಮಾರು 85ಕ್ಕೂ ಹೆಚ್ಚು ಟನ್ ಮಾರಾಟವಾಗಿದ್ದು, 1.15 ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆದಿದೆ. ವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಮಾವು ಬೆಳೆ ಕಡಿಮೆ ಇರುವುದರಿಂದ ರೈತರು ಭಾಗವಹಿಸಿಲ್ಲ. -ಶರಣಪ್ಪ ಎಸ್.ಭೋಗಿ, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಬಳ್ಳಾರಿ.