ಕೊಪ್ಪಳ: ಬಿಸಿಲ ನಾಡು ಜಿಲ್ಲೆಯಲ್ಲಿ ಮಾವು ಕ್ಷೇತ್ರ ಕ್ರಮೇಣ ವಿಸ್ತರಣೆಯಾಗುತ್ತಿದೆ. ಮಾವು ಮೇಳ, ರೈತರಿಗೆ ತರಬೇತಿ, ಜಾಗೃತಿ, ಮಾರುಕಟ್ಟೆ ವ್ಯವಸ್ಥೆ ಪರಿಣಾಮದಿಂದಾಗಿ ರೈತರು ಮಾವು ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ.
ಹೌದು. ಜಿಲ್ಲೆಯಲ್ಲಿ ಮಾವು ಕ್ಷೇತ್ರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಜಿಲ್ಲೆಯಲ್ಲಿ ಎರಡು ದಶಕದ ಹಿಂದೆ ಹೆಚ್ಚೆಚ್ಚು ಮಳೆಯಾಗುತ್ತಿದ್ದವು. ಹಾಗಾಗಿ ಕೆಲವು ಭಾಗವು ಹಚ್ಚ ಹಸಿರಿನಿಂದ ಕೂಡಿ ತೋಟಗಾರಿಕೆ ಕ್ಷೇತ್ರವು ಉತ್ತಮವಾಗಿತ್ತು. ಆದರೆ ಕ್ರಮೇಣ ಮಳೆ ಕಡಿಮೆಯಾಗುತ್ತಿದ್ದಂತೆ ಭೂಮಿ ಬರಡಾಗ ತೊಡಗಿತು. ಬೆಳೆದ ಬೆಳೆಗೆ ಮಾರುಕಟ್ಟೆ ಮಾಹಿತಿ ಕೊರತೆಯಿಂದಾಗಿ, ಸಾರಿಗೆ ಸಮಸ್ಯೆಯಿಂದಾಗಿ ಮಾವು ಬೆಳೆಯುವುದನ್ನು ಕಡಿಮೆ ಮಾಡಿದ್ದರು. ಆದರೆ 2015ರಿಂದ ಈಚೆಗೆ ಜಿಲ್ಲೆಯಲ್ಲಿ ಮತ್ತೆ ಮಾವು ಕ್ಷೇತ್ರದಲ್ಲಿ ಹೆಚ್ಚು ಬದಲಾವಣೆ ಕಂಡು ಬಂದಿದೆ.
2015-16ನೇ ಸಾಲಿನಲ್ಲಿ ಜಿಲ್ಲೆಯಲ್ಲಿನ ಮಾವು ಬೆಳೆಯುವ ಕ್ಷೇತ್ರವು 1600 ಹೆಕ್ಟೇರ್ ಪ್ರದೇಶ ಇತ್ತು. ಆಗ ಮಾವು ಬೆಳೆದರೆ ಸರಿಯಾದ ಮಾರುಕಟ್ಟೆಯ ವ್ಯವಸ್ಥೆ ಸಿಗುತ್ತಿರಲಿಲ್ಲ. ಬೆಲೆಯೂ ದೊರೆಯುತ್ತಿರಲಿಲ್ಲ. ಮಾಹಿತಿಯ ಕೊರತೆಯೂ ಅಧಿಕವಾಗಿತ್ತು. ಬೆಳೆದ ಮಾವು ಹೇಗೆಲ್ಲಾ ಸಂರಕ್ಷಣೆ ಮಾಡಬೇಕು ಎನ್ನುವ ಸಮಸ್ಯೆಯೂ ಎದುರಾಗುತ್ತಿತ್ತು. ಆದರೆ ತೋಟಗಾರಿಕೆ ಇಲಾಖೆಯು ಕ್ರಮೇಣ ಜಿಲ್ಲೆಯಲ್ಲಿ ರೈತರನ್ನು ವಲಯವಾರು ಗುರುತು ಮಾಡಿ, ಯಾವ ಭೂಮಿಗೆ ತಕ್ಕಂತೆ ಯಾವ ಬೆಳೆಯನ್ನು ಬೆಳೆದರೆ ಸೂಕ್ತ ಎನ್ನುವ ಮಾಹಿತಿ ಆಧರಿಸಿ, ರೈತರಲ್ಲಿ ಮಾವು ಬೆಳೆದರೆ ಹಲವು ರೀತಿಯ ಅನುಕೂಲ ದೊರೆಯಲಿದೆ ಎನ್ನುವ ಜಾಗೃತಿ ಮೂಡಿಸಿದ ಪರಿಣಾಮ ಮಾವು ಕ್ಷೇತ್ರವು ಕ್ರಮೇಣ ವಿಸ್ತರಣೆ ಆಗುತ್ತಿದೆ. ಪ್ರಸ್ತುತ 3 ಸಾವಿರ ಹೆಕ್ಟೇರ್ ಪ್ರದೇಶದ ಗಡಿ ದಾಟಿದೆ.
ಮಾವು ಮೇಳದ ಪರಿಣಾಮ: ತೋಟಗಾರಿಕೆ ಇಲಾಖೆಯು ಜಿಲ್ಲೆಯಲ್ಲಿ ನಿರಂತರ ಮಾವು ಮೇಳ ಆಯೋಜನೆ ಮಾಡುತ್ತಾ ರೈತರಿಗೆ ಮಾವು ಮೇಳದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುತ್ತಿದೆ. ಇದರಿಂದ ರೈತ ತಾನು ಬೆಳೆದ ಮಾವನ್ನು ನೇರವಾಗಿ ಗ್ರಾಹಕನಿಗೆ ಮಾರಾಟಕ್ಕೂ ಅವಕಾಶ ಕಲ್ಪಿಸಿಕೊಟ್ಟಿತು. ಇದರಿಂದಾಗಿ ಮಧ್ಯವರ್ತಿಗಳ ಹಾವಳಿಯಿಲ್ಲದೇ ರೈತರಿಗೆ ನೇರವಾಗಿ ಲಾಭ ದೊರೆಯುವಂತಾಗಿದೆ. ಇದು ರೈತರಿಗೆ ತುಂಬಾ ಅನುಕೂಲವಾಗುತ್ತಿದೆ. ವಿವಿಧ ಯೋಜನೆಯಲ್ಲಿ ಮಾವು ಬೆಳೆಯಲು ಸಹಾಯಧನ ವಿತರಿಸುವುದು, ರೈತರಿಗೆ ತರಬೇತಿ ಕೊಡಿಸುವುದು. ಮಾವು ಬೆಳೆದು ಯಶಸ್ವಿಯಾದ ರೈತರ ಜಮೀನಿಗೆ ಭೇಟಿ ನೀಡಿ ಆತನ ಅನುಭವ ಪಡೆಯುವುದು, ಅದನ್ನು ಇತರೆ ರೈತರಿಗೆ ತಿಳಿಸುವ ವ್ಯವಸ್ಥೆ ಮಾಡಿಸಿತು.
ಮಾರಾಟಗಾರರಿಗೆ ಲಿಂಕ್ ಕಲ್ಪಿಸುವುದು: ಜಿಲ್ಲೆಯಲ್ಲಿ ಮಾವು ಬೆಳೆಯಲು ಹೆಚ್ಚೆಚ್ಚು ರೈತರು ಆಸಕ್ತಿ ತೋರುತ್ತಾರೆ. ಆದರೆ ಬೆಳೆದಂತಹ ಮಾವು ಹೇಗೆ ಮಾರಾಟ ಮಾಡಬೇಕು? ಎಲ್ಲಿ ಮಾರಾಟ ಮಾಡಬೇಕು? ಯಾರಿಗೆಲ್ಲಾ ಮಾರಾಟ ಮಾಡಬೇಕು ಎನ್ನುವುದೇ ದೊಡ್ಡ ಸಮಸ್ಯೆಯಾಗಿತ್ತು. ಈ ಸಮಸ್ಯೆ ಅರಿತಿರುವ ಇಲಾಖೆಯು ಮುಂಬೈ ಸೇರಿದಂತೆ ಪ್ರತಿಷ್ಠಿತ ಪಟ್ಟಣಗಳಿಂದ ದೊಡ್ಡ ದೊಡ್ಡ ವ್ಯಾಪಾರಸ್ಥರನ್ನು ಜಿಲ್ಲೆಗೆ ಆಹ್ವಾನಿಸಿ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ರೈತರಿಗೆ ಸಂಪರ್ಕ ಕಲ್ಪಿಸಿಕೊಟ್ಟಿತು. ಇದರಿಂದ ನೇರವಾಗಿ ರೈತರು ಅವರೊಂದಿಗೆ ವಹಿವಾಟು ಮಾಡಲಾರಂಭಿಸಿದ್ದು, ಮತ್ತಷ್ಟು ಅನುಕೂಲವಾಯಿತು. ಇದರಿಂದ ಮಾವು ಬೆಳೆಯಲು ಹೆಚ್ಚು ಆಸಕ್ತಿ ದೊರೆಯಿತು.
ಇನ್ನು ಮಾವು ಬೆಳೆಯು ದೀರ್ಘಕಾಲಿಕ ಬೆಳೆಯಾಗಿದೆ. ನಿರಂತರ ಕೂಲಿ ಕಾರ್ಮಿಕರ ವೆಚ್ಚದ ಹೊರೆಯಿಲ್ಲ. ಗಿಡಗಳ ಪೋಷಣೆ ಮಾಡುವುದು. ಅವುಗಳಿಗೆ ಔಷಧ ಸಿಂಪರಣೆ, ಗೊಬ್ಬರ ಸೇರಿ ನೀರುಣಿಸುವ ಕಾಯಕ ಮಾಡಬೇಕು. ಗಾಳಿ, ಮಳೆಯಿಂದ ರಕ್ಷಣಾ ವ್ಯವಸ್ಥೆಗೆ ವೈಜ್ಞಾನಿಕ ವಿಧಾನ ಅಳವಡಿಕೆ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚು ಕೇಸರ್ ತಳಿ ಮಾವು ಬೆಳೆಯುತ್ತಿದ್ದು, ಕೂಲಿ ಸಮಸ್ಯೆ, ಇತರೆ ವೆಚ್ಚದ ಹೊರೆ ಕಡಿಮೆಯಾಗಿ ಒಂದೇ ಬಾರಿಗೆ ಇಳುವರಿಯ ಲಾಭ ನಮ್ಮ ಕೈ ಸೇರಲಿದೆ ಎನ್ನುವುದು ರೈತರ ಲೆಕ್ಕಾಚಾರವಾಗಿದೆ.
ಒಟ್ಟಿನಲ್ಲಿ ಜಿಲ್ಲೆಯಲ್ಲಿ ಮಾವು ಬೆಳೆಯು ರೈತರ ಸಂಖ್ಯೆಯು ಕೇವಲ ನಾಲ್ಕೈದು ವರ್ಷದಲ್ಲಿ ಏರಿಕೆಯತ್ತ ಸಾಗುತ್ತಿದೆ. ಹೊಸ ಹೊಸ ವಿಧಾನ ತಿಳಿದು ರೈತರೇ ಹೆಚ್ಚು ಆಸಕ್ತಿ ವಹಿಸಿ ಮಾವು ಬೆಳೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
ಜಿಲ್ಲೆಯಲ್ಲಿ ಕಳೆದ ನಾಲ್ಕೈದು ವರ್ಷಗಳಲ್ಲಿ ಮಾವು ಬೆಳೆಯುವ ಕ್ಷೇತ್ರವು ಇಮ್ಮಡಿ ಆಗಿದೆ. 2016ರ ಅವಧಿಯಲ್ಲಿ 1600 ಹೆಕ್ಟೇರ್ ಪ್ರದೇಶವಿದ್ದ ಮಾವು ಕ್ಷೇತ್ರ ಪ್ರಸ್ತುತ 3 ಸಾವಿರ ಹೆಕ್ಟೇರ್ ಪ್ರದೇಶ ದಾಟುತ್ತಿವೆ. ನಾವು ನಿರಂತರವಾಗಿ ಮಾಡುತ್ತಿರುವ ಮಾವು ಮೇಳ, ತರಬೇತಿ ಸೇರಿ ಜಾಗೃತಿ ಹಾಗೂ ಮಾರುಕಟ್ಟೆಯ ವ್ಯವಸ್ಥೆ, ಮಾರಾಟಗಾರರ ಲಿಂಕ್ ಕಲ್ಪಿಸುತ್ತಿರುವುದು ರೈತರಿಗೆ ಹೆಚ್ಚು ಅನುಕೂಲವಾಗುತ್ತಿದೆ. ವಿವಿಧ ಯೋಜನೆಯಲ್ಲೂ ಅವರಿಗೆ ಸಹಾಯಧನ ಸಿಗುತ್ತಿದೆ. ಕೇಸರ್ ಬೆಳೆಯನ್ನೇ ಹೆಚ್ಚು ಬೆಳೆಯಲಾಗುತ್ತಿದೆ. ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ. –
ಕೃಷ್ಣ ಉಕ್ಕುಂದ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ, ಕೊಪ್ಪಳ
-ದತ್ತು ಕಮ್ಮಾರ