Advertisement

Mangaluru; ಸಿಡಿಲಿಗೆ ಉತ್ತರ ಪ್ರದೇಶದ ಕಾರ್ಮಿಕ ಸಾವು

12:27 AM May 24, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಗುರುವಾರವೂ ಮಳೆ ಮುಂದುವರಿದಿದೆ. ಮಂಗಳೂರು ನಗರದಲ್ಲಿ ಸಿಡಿಲು ಬಡಿದು ಉತ್ತರ ಪ್ರದೇಶದ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ಜಪ್ಪಿನಮೊಗರು ಬಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ರಾಜ್‌ಕುಮಾರ್‌ ಚೌಧರಿ ಮೃತಪಟ್ಟವರು.

Advertisement

ಮನೆಯ ಬಳಿಯ ನಡೆದುಕೊಂಡು ಬರುತ್ತಿರುವ ವೇಳೆ ಅವರಿಗೆ ಸಿಡಿಲು ಬಡಿದಿದೆ. ತತ್‌ಕ್ಷಣ ಆಸ್ಪತ್ರೆಗೆ ಕೊಂಡೊಯ್ದರೂ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಗುರುವಾರ ಮೃತದೇಹವನ್ನು ಮಂಗಳೂರು ವಿಮಾನ ನಿಲ್ದಾಣದ ಮೂಲಕ ಹುಟ್ಟೂರಿಗೆ ಕಳುಹಿಸಲಾಯಿತು.

ಮುಂದುವರಿದ ಮಳೆ
ದ.ಕ. ಜಿಲ್ಲೆಯ ಕೆಲವು ಕಡೆಗಳಲ್ಲಿ ಸಂಜೆ ಬಳಿಕ ಮಳೆಯಾಗಿದೆ. ಸೆಕೆ ಮತ್ತು ಮೋಡದ ವಾತಾವರಣ ಇತ್ತು. ನಗರದಲ್ಲಿ 30.6 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 2.9 ಡಿ.ಸೆ. ಉಷ್ಣಾಂಶ ಕಡಿಮೆ ಇತ್ತು. 26 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.

ಸಿಡಿಲಿನಿಂದ ಹಸು ಸಾವು
ಉಡುಪಿ ಜಿಲ್ಲೆಯ ಮಲ್ಪೆ, ಉಡುಪಿ, ಮಣಿಪಾಲ ಭಾಗದಲ್ಲಿ ಗುರುವಾರ ಬಿಸಿಲು ಮೋಡ ಕವಿದ ವಾತಾವರಣದ ನಡುವೆ ಸಾಧಾರಣ ಮಳೆ ಸುರಿದಿದೆ. ಬುಧವಾರ ತಡರಾತ್ರಿ, ಗುರುವಾರ ಹಲವೆಡೆ ಉತ್ತಮ ಮಳೆಯಾಗಿದೆ. ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದ ವಸಂತ ದೇವಾಡಿಗ ಅವರ ಹಸು ಸಿಡಿಲು ಬಡಿದು ಮೃತಪಟ್ಟಿದೆ.

4 ದಿನ ಎಲ್ಲೋ ಅಲರ್ಟ್‌
ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಏಳುವ ಸಾಧ್ಯತೆ ಇದ್ದು, ನಾಲ್ಕು ದಿನ ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಮುಂದಿನ 48 ಗಂಟೆಗಳಲ್ಲಿ ರಾಜ್ಯದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಚಂಡಮಾರುತದ ಪರಿಚಲನೆ ಕೇರಳದ ಕೆಳ ಮತ್ತು ಮಧ್ಯಮ ಉಷ್ಣ ವಲಯದ ಮಟ್ಟದಲ್ಲಿದೆ. ಅದರ ಪ್ರಭಾವ ಮೇ 24ರಿಂದ 29ರ ವರೆಗೆ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. 40ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next