Advertisement
ವಿ.ವಿ. ವ್ಯಾಪ್ತಿಯಲ್ಲಿ 35 ಸರಕಾರಿ ಕಾಲೇಜು ಇವೆ. ಸುಮಾರು 600 ರಷ್ಟು ಅತಿಥಿ ಉಪನ್ಯಾಸಕ ಹುದ್ದೆಗಳಿವೆ. ಕರಾವಳಿಯ ಸರಕಾರಿ ಕಾಲೇಜಿನಲ್ಲಿ ಖಾಯಂ ಉಪ ನ್ಯಾಸಕರ ಕೊರತೆ ಶೇ. 50ಕ್ಕೂ ಅಧಿಕ ಇದ್ದು, ಅತಿಥಿ ಉಪನ್ಯಾಸಕರು ಅನಿವಾರ್ಯ. ಕಾಲೇಜು ಆರಂಭವಾಗಿ ವಾರ ಕಳೆದರೂ ಅತಿಥಿ ಉಪನ್ಯಾಸಕರು ಬಂದಿಲ್ಲ.
2023-24ನೇ ಸಾಲಿನಲ್ಲಿ ಸರಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿದ ಅನಂತರ ಉಳಿದ ಕಾರ್ಯಭಾರಕ್ಕೆ ಅನುಗುಣವಾಗಿ ಅತಿಥಿ ಉಪನ್ಯಾಸಕರನ್ನು ಆನ್‌ಲೈನ್ ಕೌನ್ಸೆಲಿಂಗ್ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಿಕೊಳ್ಳಲು ಸರಕಾರ ತಿಳಿಸಿದೆ. ಆ. 25ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಸೆ. 2ರ ವರೆಗೆ ನಡೆಯಲಿದೆ. ಸೆ. 4ರಂದು ರಾಜ್ಯವ್ಯಾಪಿ ಮೆರಿಟ್ ಪಟ್ಟಿ ಪ್ರಕಟಿಸಲಾಗುತ್ತದೆ. ತಾತ್ಕಾಲಿಕ ಕಾರ್ಯಭಾರ ಹಾಗೂ ಕೌನ್ಸೆಲಿಂಗ್‌ಗಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಸೆ. 8ರಂದು ಪ್ರಕಟಿಸಲಾಗುತ್ತದೆ. ಸೆ. 11ರಿಂದ 15ರ ವರೆಗೆ ಮೆರಿಟ್ ಪಟ್ಟಿಯನ್ವಯ ಕಾಲೇಜು ಆಯ್ಕೆ ಕೌನ್ಸೆಲಿಂಗ್ ನಡೆಯಲಿದೆ. ಸೆ. 16ರಂದು ಕೌನ್ಸೆಲಿಂಗ್‌ನಲ್ಲಿ ಕಾಲೇಜು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುತ್ತದೆ. ಬಳಿಕವಷ್ಟೇ ಅತಿಥಿ ಉಪನ್ಯಾಸಕರು ಕಾಲೇಜಿಗೆ ಆಗಮಿಸಲಿದ್ದಾರೆ. ಒಂದು ವೇಳೆ 2ನೇ ಹಂತದ ಕೌನ್ಸೆಲಿಂಗ್ ನಡೆಯಲಿದ್ದರೆ ಅತಿಥಿ ಉಪನ್ಯಾಸಕರಿಗಾಗಿ ಸೆಪ್ಟಂಬರ್ ಕೊನೆಯವರೆಗೂ ಕಾಯಬೇಕು! ಈ ಮಧ್ಯೆ ಮಂಗಳೂರಿನ ನಾಲ್ಕು ಕಾಲೇಜುಗಳಲ್ಲಿ ಮೌಲ್ಯಮಾಪನ ನಡೆಯುತ್ತಿರುವ ಕಾರಣ ಅಲ್ಲಿ ತರಗತಿ ಆರಂಭ ಕಷ್ಟವಾಗಿದೆ. ಜತೆಗೆ ಮಂಗಳೂರು ವಿ.ವಿ. ಅಡಿಯಲ್ಲಿರುವ 6 ಘಟಕ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ಸಂದರ್ಶನ ಮಾಡಲಾಗಿದೆಯಾದರೂ ಇದರ ನೇಮಕಾತಿಯನ್ನು ವಿ.ವಿ. ಅಂತಿಮ ಮಾಡಿಲ್ಲ.
Related Articles
ಅತಿಥಿ ಉಪನ್ಯಾಸಕರನ್ನು 2023-24ನೇ ಶೈಕ್ಷಣಿಕ ಸಾಲಿನ ಮುಕ್ತಾಯದವರೆಗೆ ಅಥವಾ 10 ತಿಂಗಳಿಗೆ ಮಾತ್ರ “ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ’ ಮುಂದುವರಿಸಿ ಬಳಿಕ ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಸರಕಾರ ಸೂಚಿಸಿದೆ. ಇದರಿಂದ ಮಂಗಳೂರು ವ್ಯಾಪ್ತಿಯ ಅತಿಥಿ ಉಪನ್ಯಾಸಕರಿಗೆ ನಷ್ಟವಾಗುತ್ತಿದೆ ಎಂಬುದು ಉಪನ್ಯಾಸಕರ ಅಳಲು.
Advertisement
ಮಂಗಳೂರು ವ್ಯಾಪ್ತಿಯಲ್ಲಿ ಇತರವಿ.ವಿ.ಗಳ ವೇಳಾಪಟ್ಟಿಗಿಂತ ಸುಮಾರು 2 ತಿಂಗಳ ಮೊದಲೇ (ಜು. 13) ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಇದರ ಬದಲು ರಾಜ್ಯದ ಎಲ್ಲ ವಿ.ವಿ.ಗಳ ವ್ಯಾಪ್ತಿಯ ಅತಿಥಿ ಉಪನ್ಯಾಸಕರನ್ನು ಒಂದೇ ದಿನಾಂಕದಂದು ಬಿಡುಗಡೆಗೊಳಿಸಬೇಕು’ ಎನ್ನುತ್ತಾರೆ ಅತಿಥಿ ಉಪನ್ಯಾಸಕರ ಸಂಘದಅಧ್ಯಕ್ಷ ಧೀರಜ್ ಕುಮಾರ್. ಆನ್‌ಲೈನ್ ಕೌನ್ಸೆಲಿಂಗ್ ಮೂಲಕ ಅತಿಥಿ ಉಪನ್ಯಾಸಕರ ಆಯ್ಕೆ ಆರಂಭಿಸಲಾಗಿದೆ. ರಾಜ್ಯದ ಇತರ ವಿ.ವಿ.ಗಳ ವ್ಯಾಪ್ತಿಯಲ್ಲಿ ಕಾಲೇಜು ಆರಂಭ ತಡವಾಗಿದೆ. ಆದರೆ ಮಂಗಳೂರು ವ್ಯಾಪ್ತಿಯಲ್ಲಿ ಆ. 23ರಿಂದ ಆರಂಭವಾದ ಕಾರಣ ಕೌನ್ಸೆಲಿಂಗ್ ಬೇಗನೆ ಆರಂಭಿಸಲಾಗಿದ್ದು, ಒಂದೆರಡು ವಾರದಲ್ಲಿ ಇದು ಅಂತಿಮವಾಗಲಿದೆ.
-ರಾಮೇಗೌಡ,
ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ
ಪ್ರಾದೇಶಿಕ ಕಚೇರಿ-ಮಂಗಳೂರು -ದಿನೇಶ್ ಇರಾ