Advertisement

ಮಂಗಳೂರು/ಉಡುಪಿ: ಬಿಸಿಲ ನಡುವೆಯೂ ಪ್ರವಾಸಿಗರ ದಂಡು, ಚಾರಣಕ್ಕೆ ಸದ್ಯ ಅವಕಾಶವಿಲ್ಲ

06:07 PM Mar 24, 2023 | Team Udayavani |

ಮಹಾನಗರ: ಸದ್ಯ ದೇಶದಲ್ಲಿ “ಬಿಸಿಲ ನಾಡು’ ಎಂದು ಹೆಸರು ಪಡೆದಿರುವ ಮಂಗಳೂರು ಅಥವಾ ಕರಾವಳಿ ಪ್ರದೇಶಕ್ಕೆ, ಉರಿಬಿಸಿಲ ನಡುವೆಯೂ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲಿ ವ್ಯತ್ಯಯವಾಗಿಲ್ಲ. ಕರಾವಳಿಯ ಪ್ರಮುಖ ಪ್ರವಾಸಿ ಆಕ ರ್ಷಣೆಯಾದ ಬೀಚ್‌, ಧಾರ್ಮಿಕ ಸ್ಥಳಗಳು, ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರ ದಂಡು ಕಂಡುಬರುತ್ತಿದೆ.

Advertisement

ಬಿಸಿಲಿನಿಂದ ಪ್ರವಾಸಿ ಚಟುವಟಿಕೆಗಳಿಗೆ ಸದ್ಯಕ್ಕಂತೂ ಹಿನ್ನಡೆಯಾಗಿಲ್ಲ ಎನ್ನುವುದು ಪ್ರವಾಸೋದ್ಯಮ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮಾತು. ಕರಾವಳಿಯಲ್ಲಿ ಸಾಮಾನ್ಯವಾಗಿ ಮಳೆಗಾಲದ ಕೆಲವು ತಿಂಗಳನ್ನು ಹೊರತುಪಡಿಸಿದಂತೆ ಪ್ರವಾಸೋದ್ಯಮ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಮುಖ್ಯವಾಗಿ ದ.ಕ. ಜಿಲ್ಲೆಯ ಸುಬ್ರಹ್ಮಣ್ಯ, ಧರ್ಮಸ್ಥಳ, ಉಡುಪಿಯ ಕೊಲ್ಲೂರು ದೇವಸ್ಥಾನ, ಶ್ರೀ ಕೃಷ್ಣ ಮಠಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು, ಸದ್ಯ ಹೊರ ರಾಜ್ಯಗಳಿಂದ ಬರುವವರ ಸಂಖ್ಯೆಯೇ ಅಧಿಕ. ಅಲ್ಲಿಂದ ಬೇರೆ ದೇವಸ್ಥಾನಗಳು, ಬೀಚ್‌, ಇತರ ಪ್ರವಾಸಿ ತಾಣಗಳಿಗೂ ಭೇಟಿ ನೀಡುತ್ತಾರೆ. ಸದ್ಯ ಪ್ರವಾಸಿ ತಾಣ ವ್ಯಾಪ್ತಿಯ ಹೆದ್ದಾರಿ, ನಗರ ವ್ಯಾಪ್ತಿಯ ರಸ್ತೆಗಳಲ್ಲಿ ವಾರಾಂತ್ಯ ದಿನಗಳಲ್ಲಿ ಹೆದ್ದಾರಿಯಲ್ಲಿ ದಟ್ಟಣೆ ಉಂಟಾಗುವುದು ಸಾಮಾನ್ಯವಾಗಿದೆ.

ಚಾರಣಕ್ಕೆ ಸದ್ಯ ಅವಕಾಶವಿಲ್ಲ
ನಿತ್ಯ ಹರಿದ್ವರ್ಣದ ಕಾಡುಗಳನ್ನು ಹೊಂದಿರುವ ಪಶ್ಚಿಮಘಟ್ಟದ ತಪ್ಪಲಿನ ವಿವಿಧ ಬೆಟ್ಟಗಳಿಗೆ ಚಾರಣ ಹೋಗುವವರ ಸಂಖ್ಯೆ ಇತ್ತೀಚಿನ ದಿನಗಳ ವರೆಗೂ ಇತ್ತು. ಕಳೆದ ಹದಿನೈದು ದಿನಗಳ ಹಿಂದೆ ಅಲ್ಲಲ್ಲಿ ಕಾಡ್ಗಿಚ್ಚು ಉಂಟಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಚಾರಣಿಗರಿಗೆ ಅವಕಾಶ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಚಾರಣಿಗರ ಸಂಖ್ಯೆಯಲ್ಲಿ ಕಡಿಮೆ ಯಾಗಿದೆ. ಇನ್ನೊಂದೆಡೆ ಘಟ್ಟದ ತಪ್ಪಲಿನಲ್ಲೂ ತಾಪಮಾನದಲ್ಲಿ ವಿಪರೀತ ಏರಿಕೆಯಾಗಿದೆ. ಮಳೆ ಆರಂಭವಾದರೆ
ಮತ್ತೆ ಚಾರಣಿಗರ ಸಂಖ್ಯೆಯಲ್ಲಿ ಏರಿಕೆಯಾಗಲಿದೆ.

ರೆಸಾರ್ಟ್‌-ಲಾಡ್ಜ್ ಬುಕ್ಕಿಂಗ್‌ ಕಡಿಮೆ
ಒಂದೊಡೆ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದರೂ ಲಾಡ್ಜ್ – ರೆಸಾರ್ಟ್‌ಗಳ ಬುಕ್ಕಿಂಗ್‌ನಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡು ಬಂದಿಲ್ಲ. ಕಾರ್ಪೋರೆಟ್‌ ಸಂಸ್ಥೆಗಳ ಬುಕ್ಕಿಂಗ್‌ ಹೊರತು ಪಡಿಸಿ ದಂತೆ ಪ್ರವಾಸಿಗರ ಬುಕ್ಕಿಂಗ್‌ ಕಡಿಮೆ ಇವೆ. ಕಾರ್ಪೋರೆಟ್‌ ಸಂಸ್ಥೆಗಳ ಪ್ರತಿ ನಿಧಿಗಳೂ ತಮ್ಮ ಮೀಟಿಂಗ್‌ ಬಳಿಕ ಪ್ರವಾಸಿತಾಣಗಳಿಗೆ ಒಂದು ಸುತ್ತು ಹಾಕಿಯೇ ತೆರಳುತ್ತಾರೆ. ಪಿಯುಸಿ, ಎಸೆಸೆಲ್ಸಿ ಪರೀಕ್ಷೆಗಳು ಮುಗಿದ ಬಳಿಕ ಅಂದಾಜು ಎಪ್ರಿಲ್‌ನಲ್ಲಿ ಮತ್ತೆ ಹೊಟೇಲ್‌ ರೂಂಗಳು ಭರ್ತಿಯಾಗುತ್ತವೆ. ಸದ್ಯ ವಾರಾಂತ್ಯದಲ್ಲಿ ಎರಡು ದಿನ ಬಂದು ಹೋಗುವವರು ಹೆಚ್ಚು ಎನ್ನುತ್ತಾರೆ ಖಾಸಗಿ ಐಶಾರಾಮಿ ಹೊಟೇಲ್‌ ಒಂದರ ಪ್ರಮುಖರು.

ಬೀಚ್‌ಗಳಲ್ಲಿ ಬೆಳಗ್ಗಿನಿಂದಲೇ ಜನ
ಬೀಚ್‌ಗಳನ್ನು ನೋಡಿದಾಗ ಎಷ್ಟು ಮಂದಿ ಪ್ರವಾಸಿಗರು ಬರುತ್ತಾರೆ ಎನ್ನುವುದನ್ನು ತಿಳಿಯಬಹುದು. ಬಿಸಿಲ ಧಗೆಯಿದ್ದರೂ ಬೆಳಗ್ಗಿನಿಂದಲೇ ಬೀಚ್‌ಗಳಲ್ಲಿ ಜನ ಸಂದಣಿ ಕಂಡು ಬರುತ್ತಿದೆ. ಪರೀಕ್ಷೆಗಳು ಮುಗಿದ ಬಳಿಕ ಕರಾವಳಿಯತ್ತ ಪ್ರವಾಸಿಗರ ಸಂಖ್ಯೆ ಯಲ್ಲಿ ಇನ್ನಷ್ಟು ಏರಿಕೆ ಕಾಣಬಹುದು. ಈ ಬಾರಿಯ ಬೇಸಗೆ ರಜಾ ಸೀಸನ್‌ನಲ್ಲಿ ಚುನಾವಣೆ ಇದ್ದರೂ ಮತದಾನ ನಡೆಯುವ ದಿನಗಳಂದು ರಾಜ್ಯದ ಪ್ರವಾಸಿಗರ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆ ಯಾಗಬಹುದು. ಆದರೆ ಹೊರ ರಾಜ್ಯದಿಂದ ಬರುವವರ ಸಂಖ್ಯೆಯಲ್ಲಿ ಕಡಿಮೆಯಾಗದು ಎನ್ನುತ್ತಾರೆ ಪ್ರವಾಸೋದ್ಯಮ ಚಟುವಟಿಕೆಗಳ ಸಂಘಟಕ ಯತೀಶ್‌ ಬೈಕಂಪಾಡಿ.

Advertisement

ಪ್ರವಾಸಿಗರ ಸಂಖ್ಯೆ ಇಳಿಕೆಯಾಗಿಲ್ಲ
ಬಿಸಿಲ ನಡುವೆಯೂ ಕರಾವಳಿ ಭಾಗಕ್ಕೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ. ವಾರಾಂತ್ಯ ದಿನಗಳಲ್ಲಿ ದೇವಸ್ಥಾನ, ಬೀಚ್‌ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಮಕ್ಕಳಿಗೆ ಪರೀಕ್ಷೆಗಳಿದ್ದರೂ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ . ಪರೀಕ್ಷೆಗಳು ಮುಗಿದ ಬಳಿಕ ಮತ್ತಷ್ಟು ಹೆಚ್ಚಳವಾಗಬಹುದು.
-ಮಾಣಿಕ್ಯ,
ಉಪನಿರ್ದೇಶಕರು, ದ.ಕ. ಪ್ರವಾಸೋದ್ಯಮ ಇಲಾಖೆ

ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next