Advertisement
ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯ ಉದ್ಯೋಗಿಗಳಾದ ಅಜಯ್ (25) ಮತ್ತು ಸಂತೋಷ್ (25) ಮೃತಪಟ್ಟವರು. ಅವರೊಂದಿಗೆ ಈಜಲು ತೆರಳಿದ್ದ ಮೋಕ್ಷಿತ್ ಹಾಗೂ ಶ್ರೇಯಸ್ ಅಪಾಯದಿಂದ ಪಾರಾಗಿದ್ದಾರೆ.
ಈ ನಾಲ್ವರ ಸ್ನೇಹಿತ ಅರ್ಜುನ್ ಅವರ ಅಕ್ಕನ ಮದುವೆ ಅ. 27ರಂದು ಬ್ರಹ್ಮಾವರದಲ್ಲಿ ನಡೆಯಲಿದ್ದು, ಅದಕ್ಕಾಗಿ ಇವರು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮುಗಿಸಿ ಅ. 25ರಂದು ಸಂಜೆ ಕುಂದಾಪುರಕ್ಕೆ ಆಗಮಿಸಿದ್ದರು. ಅ. 25ರ ರಾತ್ರಿ ಬ್ರಹ್ಮಾವರದಲ್ಲಿ ಮೆಹಂದಿ ಕಾರ್ಯಕ್ರಮ ಮುಗಿಸಿ ರಾತ್ರಿ ಬೀಜಾಡಿ ಕಡಲ ತೀರದಲ್ಲಿರುವ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಅ. 26ರ ಬೆಳಗ್ಗೆ 9 ಗಂಟೆಯ ಸುಮಾರಿಗೆ ಸಮೀಪದ ಬೀಚ್‌ಗೆ ಅಜಯ್, ಸಂತೋಷ್, ಮೋಕ್ಷಿತ್ ಹಾಗೂ ಶ್ರೇಯಸ್ ಈಜಲು ತೆರಳಿದ್ದರು. ಅಲೆಗಳ ಅಬ್ಬರಕ್ಕೆ ಸಿಲುಕಿ ಅಜಯ್ ಹಾಗೂ ಸಂತೋಷ್ ನೀರಲ್ಲಿ ಮುಳುಗಲಾರಂಭಿಸಿದ್ದು, ಇದನ್ನು ಕಂಡ ಮೋಕ್ಷಿತ್ ಅವರು ಸಂತೋಷ್‌ರನ್ನು ಮೇಲಕ್ಕೆಳೆದು ತಂದರು. ಅಷ್ಟರೊಳಗೆ ಅಜಯ್ ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಅಸ್ವಸ್ಥಗೊಂಡಿದ್ದ ಸಂತೋಷ್‌ನನ್ನು ಪರೀಕ್ಷಿಸಿದ ವೈದ್ಯರು ಅದಾಗಲೇ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
Related Articles
Advertisement
ಅಜಯ್ ಅವರ ಮಾವ ಆನಗಳ್ಳಿಯ ನಿವಾಸಿ ಪ್ರಕಾಶ್ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಕುಂದಾಪುರ ಪೊಲೀಸ್ ವೃತ್ತ ನಿರೀಕ್ಷಕ ನಂಜಪ್ಪ, ಎಸ್‌ಐ ಪುಷ್ಪಾ, ಸಿಬಂದಿ ಭೇಟಿ ನೀಡಿದರು.
ಎಚ್ಚರಿಕೆ ನೀಡಿದರೂ ನಿರ್ಲಕ್ಷ್ಯ ರಜಾ ದಿನಗಳಲ್ಲಿ ಕಡಲ ತಡಿಗೆ ಆಗಮಿಸುವ ಪ್ರವಾಸಿಗರು ಸ್ಥಳೀಯರು ಎಚ್ಚರಿಕೆ ನೀಡಿದರೂ ಸಮುದ್ರಕ್ಕೆ ಈಜಲು ತೆರಳುವುದರಿಂದ ನೀರು ಪಾಲಾಗುತ್ತಿರುವುದು ಕಂಡು ಬಂದಿದೆ. ರೆಸಾರ್ಟ್ ಮಾಲಕರು ಕೂಡ ಅಲ್ಲಿ ತಂಗುವ ಪ್ರತಿಯೋರ್ವ ಪ್ರವಾಸಿಗರಿಗೆ ಸಮುದ್ರಕ್ಕಿಳಿಯದಂತೆ ಸೂಚನೆ ನೀಡಿದರೂ ಸಾಹಸಕ್ಕಿಳಿದು ಜೀವ ಕಳೆದುಕೊಳ್ಳುತ್ತಿರುವ ಇಂತಹ ವಿದ್ಯಮಾನಕ್ಕೆ ಕಡಿವಾಣ ಹೇರಲು ಸಂಬಂಧ ಇಲಾಖೆಗಳ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಊರವರು ಆಗ್ರಹಿಸಿದ್ದಾರೆ. 4 ತಿಂಗಳೊಳಗೆ 2ನೇ ಘಟನೆ
ಬೀಜಾಡಿ ಬೀಚ್‌ನಲ್ಲಿ 4 ತಿಂಗಳಲ್ಲಿ ದೂರದ ಊರಿನಿಂದ ಬಂದ ಪ್ರವಾಸಿಗರು ಈಜಲು ತೆರಳಿ ಸಾವನ್ನಪ್ಪಿದ ಎರಡನೇ ಪ್ರಕರಣ ಇದಾಗಿದೆ. ಕಳೆದ ಜೂನ್‌ನಲ್ಲಿ ಸ್ನೇಹಿತನ ಮದುವೆಗೆಂದು ಬೀಜಾಡಿಗೆ ಬಂದಿದ್ದ ಬೆಂಗಳೂರು ತಿಪಟೂರು ಮೂಲದ ಟಿ.ಆರ್. ಯೋಗೀಶ್ (23) ಹಾಗೂ ಆತನ ಸ್ನೇಹಿತ ಸಂದೀಪ್ (24) ಬೀಜಾಡಿ ಬೀಚ್‌ಗೆ ವಿಹಾರಕ್ಕೆಂದು ತೆರಳಿದ್ದ ವೇಳೆ ಕಡಲಿನ ಅಲೆಗಳ ಅಬ್ಬರಕ್ಕೆ ಸಿಲುಕಿದ್ದು, ಈ ಪೈಕಿ ಸಂದೀಪ್ ಅವರನ್ನು ಸ್ಥಳೀಯರು ಪಾರು ಮಾಡಿದ್ದರು. ಯೋಗೀಶ್ ಸಾವನ್ನಪ್ಪಿದ್ದರು.