ಮಂಗಳೂರು: ಕರಾವಳಿಯಾದ್ಯಂತ ರವಿವಾರ ಆಟಿ ಅಮಾವಾಸ್ಯೆಯನ್ನು ಆಚರಿಸಲಾಯಿತು. ಹೆಚ್ಚಿನ ಮನೆಗಳಲ್ಲಿ ಬೆಳಗ್ಗೆಯೇ ಹಾಲೆ ಮರದ ತೊಗಟೆಯ ಕಷಾಯ ಸೇವಿಸಿದರು.
ದೇವಾಲಯಗಳು, ಸಂಘ- ಸಂಸ್ಥೆ ಗಳಿಂದಲೂ ಹಾಲೆ ಮರದ ತೊಗಟೆಯ ಕಷಾಯವನ್ನು ಸಾರ್ವಜನಿಕವಾಗಿ ವಿತರಿಸಲಾಯಿತು. ಕಷಾಯ ಸೇವಿಸಿದ ಬಳಿಕ ಹೆಚ್ಚಿನ ಕಡೆಗಳಲ್ಲಿ ಮೆಂತೆ ಗಂಜಿ ತಯಾರಿಸಿ ಸೇವಿಸುವ ಸಂಪ್ರದಾಯವೂ ಜಿಲ್ಲೆಯಲ್ಲಿ ಇದೆ.
ಬಂಟ್ವಾಳ ತಾಲೂಕಿನ ಪುರಾಣ ಪ್ರಸಿದ್ಧ ದೇವಸ್ಥಾನಗಳಾದ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನ ಮತ್ತು ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನಗಳಲ್ಲಿ ಆಟಿ ಅಮಾವಾಸ್ಯೆ ಪ್ರಯುಕ್ತ ಸಾವಿರಾರು ಭಕ್ತರು ಭೇಟಿ ನೀಡಿ ತೀರ್ಥಸ್ನಾನಗೈದು ದೇವರ ದರ್ಶನ ಪಡೆದರು. ಆಟಿ ಅಮಾವಾಸ್ಯೆ ನಿಮಿತ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು. ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನ, ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಕ್ಷೇತ್ರ ಸಹಿತ ಕೆಲವೊಂದು ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿತ್ತು.
ಉಡುಪಿ ಜಿಲ್ಲೆಯಲ್ಲಿ
ಜಿಲ್ಲೆಯ ವಿವಿಧೆಡೆ ಆಟಿ ಅಮಾವಾಸ್ಯೆ ಆಚರಿಸಲಾಯಿತು. ಮುಂಜಾನೆ ಹಾಲೆ ಮರದ ಕಷಾಯವನ್ನು ತಯಾರಿಸಿ ದೇವರಿಗೆ ಸಮರ್ಪಿಸಲಾಯಿತು. ದೇವಸ್ಥಾನಗಳಲ್ಲಿ ದೇವರಿಗೆ ನೈವೇದ್ಯ ಸಲ್ಲಿಸಿದ ಬಳಿಕ ಭಕ್ತರಿಗೆ ಕಷಾಯ ವಿತರಿಸಲಾಯಿತು. ಮನೆಗಳಲ್ಲಿ, ವಿವಿಧ ಸಂಘ, ಸಂಸ್ಥೆ ವತಿಯಿಂದ ಆಟಿ ಅಮವಾಸ್ಯೆ ಆಚರಣೆ ನಡೆಯಿತು, ಸಾರ್ವಜನಿಕ ಆಟಿ ಕಷಾಯವನ್ನು ವಿತರಿಸಿ, ಮೆಂತೆ ಪಾಯಸ ನೀಡಿದರು. ಭಕ್ತರು ವಿವಿಧ ದೇವಸ್ಥಾನಗಳಲ್ಲಿ ತೀರ್ಥಸ್ನಾನ ಮಾಡಿದರು.