Advertisement
ಕ್ರಿಕೆಟ್, ಫುಟ್ಬಾಲ್, ಕಬಡ್ಡಿ ಮತ್ತಿತರ ಆಟಗಳು, ಸ್ವಾತಂತ್ರ್ಯ ದಿನ, ಪ್ರಜಾತಂತ್ರ ದಿನ, ರಾಜ್ಯೋತ್ಸವ ದಿನ ಸಹಿತ ರಾಷ್ಟ್ರೀಯ ಹಬ್ಬಗಳು ಜರಗುವುದು ಈ ಅಂಗಣದಲ್ಲಿಯೇ. ಚುನಾವಣೆ ಬಂತೆಂದರೆ ದೇಶದ ಬಹು ಮಂದಿ ಪ್ರಧಾನಿಗಳು ಇಲ್ಲಿ ಪ್ರಚಾರ ಭಾಷಣ ಅಥವಾ ಅಭಿವೃದ್ಧಿ ರ್ಯಾಲಿಗಳಲ್ಲಿ ಭಾಗವಹಿಸುತ್ತಾರೆ, ಅಂತೆಯೇ ರಾಷ್ಟ್ರೀಯ ನಾಯಕರು ಕೂಡ.
ಈ ಮೈದಾನ್‌ಮೂಲತಃಮಂಗಳೂರಿನ ಒಂದು ಕ್ರೈಸ್ತ ಕುಟುಂಬದ ಮೂಲದಲ್ಲಿದ್ದು, ಅವರು ಈ 24.14 ಎಕ್ರೆ ಜಮೀನನ್ನು 1907ರಲ್ಲಿ ಕೇವಲ ಕ್ರೀಡಾ ಉದ್ದೇಶಕ್ಕೆ ಮಾತ್ರ ಬಳಸಬೇಕು ಎಂಬ ಶರತ್ತು ವಿಧಿಸಿ ಆಗಿನ ಮದ್ರಾಸ್ ಪ್ರಾಂತದ ಆಡಳಿತಕ್ಕೆ ದಾನಪತ್ರವಾಗಿ ನೀಡಿದ್ದರು. ಮುಂದೆ ಅದು ಆಗಿನ ಮಂಗಳೂರು ನಗರಸಭೆಯ ವ್ಯಾಪ್ತಿಗೆ ಬಂತು. ಉಳಿದದ್ದೆಲ್ಲ ಇತಿಹಾಸ. ಪ್ರಧಾನಿಗಳ ಆದ್ಯತೆ
ದೇಶದ ಪ್ರಧಾನಿಗಳು ಈ ತಾಣವನ್ನು ಸಾರ್ವಜನಿಕ ಸಭೆಗಳಿಗೆ ಪ್ರಥಮ ಆಯ್ಕೆಯಾಗಿ ಮೆಚ್ಚುಗೆಯಿಂದ ಆರಿಸಿಕೊಂಡಿರುವ ಪರಂಪರೆಯಿದೆ. ಜವಾಹರಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯಿ, ರಾಜೀವ್ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ವಿ. ಪಿ. ಸಿಂಗ್, ದೇವೇಗೌಡ, ಚಂದ್ರಶೇಖರ್, ಐ. ಕೆ. ಗುಜ್ರಾಲ್ ಸಹಿತ ಪ್ರಧಾನಿಗಳು ಈ ಮೈದಾನ್ ಅಥವಾ ಪಕ್ಕದ ಪುರಭವನ ಸಹಿತ ಪ್ರದೇಶಗಳಲ್ಲಿ ಸಭೆಗಳಲ್ಲಿ ಭಾಗವಹಿಸಿದ್ದರು. ಕಳೆದ ಚುನಾವಣೆ ವೇಳೆ ಇಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿ ಈವರೆಗೆ ಅತೀ ಹೆಚ್ಚು ಅಭಿಮಾನಿಗಳು ಸಾಕ್ಷಿಯಾದ ಬೃಹತ್ ಕಾರ್ಯಕ್ರಮವಾಗಿತ್ತು.
Related Articles
Advertisement
ಪುರಭವನ, ಬಸ್ ನಿಲ್ದಾಣಗಳು, ಜಿಲ್ಲಾಧಿಕಾರಿ ಕಚೇರಿ, ಪೊಲೀಸ್ ಆಯುಕ್ತರ ಕಚೇರಿ, ಆರ್‌ಟಿಒ ಸಹಿತ ವಿವಿಧ ಸರಕಾರಿ ಇಲಾಖೆಗಳ ಕಚೇರಿಗಳು, ಸ್ಥಳೀಯಾಡಳಿತ ಸಂಸ್ಥೆಗಳ ಕಚೇರಿಗಳು, ರಾಷ್ಟ್ರೀಕೃತ ಬ್ಯಾಂಕ್‌ಗಳು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳೆಲ್ಲ ಸುತ್ತಮುತ್ತಲಿರುವುದು ಉಲ್ಲೇಖನೀಯ.
ಇತಿಹಾಸದ ಮತ್ತು ಆಡಳಿತಾತ್ಮಕವಾದ ಮತ್ತು ಸಾಂಸ್ಕೃತಿಕವಾದ ಬಹು ಮಹತ್ವದ ಪ್ರದೇಶವಿದು. ಮೈದಾನಿನೊಳಗೆ ಪುಟ್ಟ ಉದ್ಯಾನವನವನ್ನೂ ನಿರ್ಮಿಸಲಾಗಿದೆ. ಸಂಜೆಯ ನಡಿಗೆಯವರು, ಲೋಕಾಭಿರಾಮ ಮಾತುಕತೆಯವರಿಗೂ ಕೂಡ ಇದು ಮೆಚ್ಚಿನ ಪ್ರದೇಶ.
ಹಿಂದೂ ಯುವಸೇನೆಯ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಹಿತ ಬಹು ಪ್ರಮುಖವಾದ ಧಾರ್ಮಿಕ ಉತ್ಸವಗಳು ಕೂಡ ಇಲ್ಲಿ ನಡೆಯುತ್ತದೆ. ಈಗಿನ ಭೌಗೋಳಿಕ ಸ್ವರೂಪದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕಾಸರಗೋಡು ಮತ್ತು ಕೊಡಗು ಜಿಲ್ಲೆಗಳಿಗೆ ಅನಾದಿ ಕಾಲದಿಂದಲೂ ಇದು ಮುಖ್ಯ ತಾಣ. ಸಮೀಪದಲ್ಲಿಯೇ ಮೀನುಗಾರಿಕ ಬಂದರು ಕೂಡ ಇರುವುದು ಮತ್ತು ಹಳೆಯ ಬಂದರಿನ ಅಸ್ತಿತ್ವ ವ್ಯಾಪಾರ ವ್ಯವಹಾರಗಳಿಗೂ ಪೂರಕವಾಗಿದೆ.
ಅಂದಹಾಗೆ ಮೂಲತಃ ಈ ಮೈದಾನಿನ ಹೆಸರು ಕೇಂದ್ರ ಮೈದಾನ್ ಅಥವಾ ಸೆಂಟ್ರಲ್ ಮೈದಾನ್. 1951ರ ಡಿಸೆಂಬರ್‌ನಲ್ಲಿ ಇಲ್ಲಿಗೆ ಆಗಮಿಸಿದ ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಈ ಅಂಗಣದ ಕ್ರೀಡಾ ಪೆವಿಲಿಯನ್ ಉದ್ಘಾಟಿಸಿದರು. ಆ ಬಳಿಕ ಇದು ನೆಹರೂ ಮೈದಾನ್ ಎಂದು ನಾಮಕರಣಗೊಂಡಿತು. ಆದರೆ ಇಂದಿಗೂ ಕೆಲವು ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಈ ಪ್ರದೇಶವನ್ನು ಕೇಂದ್ರ ಮೈದಾನ್ ಎಂಬುದಾಗಿಯೇ ಉಲ್ಲೇಖೀಸುತ್ತಾರೆ.
ಮನೋಹರ ಪ್ರಸಾದ್