Advertisement

Mangaluru: ಮುಗಿಯುತ್ತಿಲ್ಲ ಕಾಮಗಾರಿ…ಪ್ರವಾಸಿ ತಾಣಗಳ ಅಭಿವೃದ್ಧಿಯ ಆಮೆ ನಡಿಗೆ!

01:43 PM Jan 17, 2024 | Team Udayavani |

ಮಹಾನಗರ: ಪ್ರವಾಸೋದ್ಯಮ ಅಭಿವೃದ್ದಿಗಾಗಿ ಸರಕಾರ ರೂಪಿಸುವ ಯೋಜನೆಗಳ ಪ್ರಗತಿ ಆಮೆಗತಿಯಲ್ಲಿದೆ. ಪ್ರವಾಸೋದ್ಯಮ ಪೂರಕವಾದ ಹಲವು ಯೋಜನೆಗಳನ್ನು ಸರಕಾರ ಘೋಷಿಸಿದ್ದರೂ, ಕೆಲವು ಯೋಜನೆಗೆ ಅನುದಾನ ನೀಡದೆ- ನೀಡಿ ದರೂ ಅದನ್ನು ಬಳಕೆ ಮಾಡಲು ಉತ್ಸಾಹ ತೋರದೆ ನಿರ್ಲಕ್ಷ್ಯ ವಹಿಸಿದಂತಿದೆ!

Advertisement

ದ.ಕ. ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಮೂಲಸೌಲಭ್ಯ ಅಭಿವೃದ್ದಿಗಾಗಿ ಒಟ್ಟು 66 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಇದಕ್ಕೆ ಅಂದಾಜು ಮೊತ್ತ 3160.52 ಲಕ್ಷ ರೂ.ಆದರೆ ಈವರೆಗೆ ಬಿಡುಗಡೆಯಾದ ಅನುದಾನ 2112.73 ಲಕ್ಷ ರೂ.ಮಾತ್ರ. ಈ ಕಾರಣದಿಂದ ಕೆಲವು ಯೋಜನೆ ಜಿಲ್ಲೆಯಲ್ಲಿ ಪೂರ್ಣವಾಗಿದ್ದರೆ, ಉಳಿದಂತೆ ಶೇ.60ರಷ್ಟು “ಕಾಮಗಾರಿ ಪ್ರಗತಿ ಯಲ್ಲಿದೆ’ ಎಂಬ ಉತ್ತರದಲ್ಲಿದೆ. ಉಳಿದವು “ಟೆಂಡರ್‌ ಪ್ರಕ್ರಿಯೆಯಲ್ಲಿದೆ’, “ಅಂದಾಜು ಪಟ್ಟಿ ಸಿದ್ದವಾಗಿದೆ’ ಎಂಬ ಉತ್ತರ ಲಭಿಸುತ್ತಿದ್ದರೆ, ಕೆಲವು ಇನ್ನಷ್ಟೇ ಪ್ರಾರಂಭವಾಗಬೇಕಿದೆ!

2018ರಿಂದ 2022ರವರೆಗೆ ಸರಕಾರ ಮಂಜೂರಾತಿ ನೀಡಿದ ಹಲವು ಯೋಜನೆಗಳು ಇನ್ನೂ ಕುಂಟುತ್ತಾ ಸಾಗುತ್ತಿದೆ. ಈ ಪೈಕಿ ಮಂಗಳೂರು, ಉಳ್ಳಾಲ, ಮೂಡುಬಿದಿರೆ, ಮೂಲ್ಕಿ ವ್ಯಾಪ್ತಿಯ ಯೋಜನೆಗಳು ಹಲವುವಿದೆ. ಮಂಗಳೂರಿನ ಸುಲ್ತಾನ್‌ಬತ್ತೇರಿ ಕೋಟೆಯನ್ನು ಸಂಪರ್ಕಿಸುವ ರಸ್ತೆ ಅಭಿವೃದ್ದಿ ಕಾಮಗಾರಿಗೆ 2017-18ರಲ್ಲಿ ಮಂಜೂರಾತಿ ದೊರೆತರೂ 125 ಲಕ್ಷ ರೂ.ಗಳ ಪೈಕಿ 50 ಲಕ್ಷ ರೂ. ಮಾತ್ರ ಬಿಡುಗಡೆಯಾಗಿ, ಈಗಲೂ ಯೋಜನೆ “ಪ್ರಗತಿಯಲ್ಲಿದೆ’!

ಉಳ್ಳಾಲ ಚೀರುಂಭ ಭಗವತೀ ದೇವಸ್ಥಾನ ಬಳಿ ಯಾತ್ರಿ ನಿವಾಸ, ಮಂಜನಾಡಿ ದರ್ಗಾದ ಬಳಿ ಯಾತ್ರಿ ನಿವಾಸ ನಿರ್ಮಾಣ, ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಮೂಲ ಸೌಕರ್ಯ ಅಭಿವೃದ್ದಿಯೂ ಪ್ರಗತಿಯಲ್ಲೇ ಇದೆ. ಇಂಟರ್‌ಲಾಕ್‌ ಕೆಲಸ ಇಲ್ಲಿ ಪೂರ್ಣವಾಗಿದ್ದರೂ, ಶೌಚಾಲಯ ಕೆಲಸ ಪ್ರಗತಿಯಲ್ಲಿದೆ.

ವಾಮಂಜೂರು ಪರಾರಿಯ ಶ್ರೀ ಕೋರ್ದಬ್ಬು, ಚಾಮುಂಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ಮೂಲಸೌಲ ಭ್ಯ ವ್ಯವಸ್ಥೆ ಕಲ್ಪಿಸುವ ಯೋಜನೆ, ಇರಾ ಗ್ರಾಮದ ಶ್ರೀ ಸೋಮನಾಥೇಶ್ವರ ಸೇವಸ್ಥಾನದಲ್ಲಿ ಮೂಲ ಸೌಕರ್ಯವೂ ಪ್ರಗತಿಯಲ್ಲೇ ಇದೆ!

Advertisement

ಪ್ರಾರಂಭವೇ ಆಗಿಲ್ಲ!
ಸಸಿಹಿತ್ಲು ಕಡಲ ತೀರದಲ್ಲಿ ವಿವಿಧ ಪ್ರವಾಸಿ ಮೂಲಸೌಲಭ್ಯ ಅಭಿವೃದ್ಧಿ ಒಳಗೊಂಡ ಜಿ.ಎಲ್‌. ಆರ್‌ ಘಟಕ ಸ್ಥಾಪನೆ ಹಾಗೂ
ಇತರ ಸೌಲಭ್ಯ ಅಭಿವೃದ್ದಿಗೆ 536 ಲಕ್ಷ ರೂ. ಅಂದಾಜಿಸಲಾಗಿತ್ತು. ಇದು ಇನ್ನೂ ಶುರು ಕಂಡಿಲ್ಲ. ಜತೆಗೆ ಕಡಲ ತೀರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಬೀದಿ ದೀಪ ಅಳವಡಿಕೆಯೂ ಬಾಕಿಯಾಗಿದೆ.

ಇಲ್ಲಿ ಮೂಲ ಸೌಲಭ್ಯದ ಕೊರತೆ ಇದೆ. ನಿರ್ವಹಣೆ ಇಲ್ಲದೆ ಸೊರಗಿದೆ. ಜತೆಗೆ ಕಡಲ್ಕೊರತೆ ಆಗಿ ತೀರ ಪ್ರದೇಶ ಕೊಚ್ಚಿ ಹೋಗಿದೆ. ಜತೆಗೆ, 2023-24ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಉಲ್ಲೇಖಿಸಿದ ಸಸಿಹಿತ್ಲು ಕಡಲ ತೀರವನ್ನು ಅಂತಾರಾಷ್ಟ್ರೀಯ ಸರ್ಫಿಂಗ್ ತಾಣವಾಗಿ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಗೊಳಿಸುವ ಯೋಜನೆ‌ ಪ್ರಾರಂಭಕ್ಕೆ ಇನ್ನೆಷ್ಟು ಸಮಯ ಬೇಕಾಗಬಹುದೋ!

ಮರೋಳಿ ಶ್ರೀ ಸೂರ್ಯ ನಾರಾಯಣ ಕ್ಷೇತ್ರದಲ್ಲಿ ಮೂಲ ಸೌಕರ್ಯ ಅಭಿವೃದ್ದಿ ಹಾಗೂ ಮಂಗಳಾದೇವಿಯಲ್ಲಿ ಕಾಯ್ದಿರಿಸಿದ
ಜಾಗದಲ್ಲಿ ಯಾತ್ರಿ ನಿವಾಸ ನಿರ್ಮಾಣ ಪ್ರಾರಂಭವಾಗಿಲ್ಲ.

ಶೀಘ್ರ ಮುಕ್ತಾಯ
ಪ್ರವಾಸಿ ತಾಣಗಳ ಅಭಿವೃದ್ಧಿ ಯೋಜನೆಯಡಿ ಈಗಾಗಲೇ ಮಂಜೂರಾದ ಕಾಮಗಾರಿಗಳ ಪೈಕಿ ಹಲವು ಪೂರ್ಣಗೊಂಡಿವೆ. ಕೆಲವು ಕಾಮಗಾರಿಗಳು ಪ್ರಗತಿಯಲ್ಲಿದೆ. ಉಳಿದ ಯೋಜನೆಗಳು ಸರಕಾರದ, ತಾಂತ್ರಿಕ ಒಪ್ಪಿಗೆಯ ಮೂಲಕ ಆರಂಭಿಸುವ ಪ್ರಕ್ರಿಯೆ ನಡೆಯುತ್ತಿದೆ. ಬಾಕಿ ಕಾಮಗಾರಿಯನ್ನು ಶೀಘ್ರದಲ್ಲಿ ಮುಗಿಸಲು ಕ್ರಮ ಕೈಗೊಳ್ಳಲಾಗುವುದು.
ಮಾಣಿಕ್ಯ, ಉಪನಿರ್ದೇಶಕರು,
ಪ್ರವಾಸೋದ್ಯಮ ಇಲಾಖೆ-ದ.ಕ

*ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next