Advertisement

ಮಂಗಳೂರು -ಸುಬ್ರಹ್ಮಣ್ಯ: ರೈಲ್ವೇ ಹಳಿ ವಿದ್ಯುದ್ದೀಕರಣ…ನೈಋತ್ಯ ರೈಲ್ವೇ ವಲಯದ ಬಹು ನಿರೀಕ್ಷಿತ ಯೋಜನೆ

01:17 AM Jan 03, 2023 | Team Udayavani |

ಮಂಗಳೂರು : ನೈಋತ್ಯ ರೈಲ್ವೇ ವಲಯದ ಮೈಸೂರು ವಿಭಾಗದ ಬಹುನಿರೀಕ್ಷಿತ ಹಳಿ ವಿದ್ಯುದ್ದೀಕರಣ ಯೋಜನೆಯ ಭಾಗವಾಗಿ ಮಂಗಳೂರಿನಿಂದ ಸುಬ್ರಹ್ಮಣ್ಯದ ವರೆಗಿನ ಕಾಮಗಾರಿಗೆ ಚಾಲನೆ ದೊರೆತಿದೆ.

Advertisement

ಮಂಗಳೂರಿನಲ್ಲಿ ಈಗಾಗಲೇ ದಕ್ಷಿಣ ರೈಲ್ವೇ ಹಾಗೂ ಕೊಂಕಣ ರೈಲ್ವೇಗೆ ಸಂಬಂಧಿಸಿದ ವಿದ್ಯುದ್ದೀಕರಣ ಕಾಮಗಾರಿಗಳು ಪೂರ್ಣಗೊಂಡಿದ್ದು, ವಿದ್ಯುತ್‌ ಚಾಲಿತ ರೈಲುಗಳು ಸಂಚರಿಸುತ್ತಿವೆ. ಇದೀಗ ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗವೂ ರೈಲು ಹಳಿ ವಿದ್ಯುದ್ದೀಕರಣಕ್ಕೆ ಒಳಗಾಗುತ್ತಿದೆ.

ಮಂಗಳೂರಿನ ಪಡೀಲ್‌- ಕಣ್ಣೂರಿನಲ್ಲಿ ನೈಋತ್ಯ ರೈಲ್ವೇ ಸರಹದ್ದು ಆರಂಭವಾಗುವ ಸ್ಥಳದಿಂದ ಹಳಿಯ ಬದಿಯಲ್ಲಿ ವಿದ್ಯುತ್‌ ಕಂಬ (ಓವರ್‌ ಹೆಡ್‌ ಕೇಬಲ್‌ ಪೋಲ್‌)ಗಳನ್ನು ಕಾಂಕ್ರೀಟ್‌ ಅಡಿಪಾಯ ನಿರ್ಮಿಸಿ ಅಳವಡಿಸಲಾಗುತ್ತಿದೆ. ಈಗಾಗಲೇ ಸುಮಾರು 20ಕ್ಕೂ ಅಧಿಕ ಕಂಬಗಳನ್ನು ಹಾಕಲಾಗಿದೆ.

ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಮಂಗಳೂರು ಮತ್ತು ಸುಬ್ರಹ್ಮಣ್ಯ ನಡುವಿನ ಸುಮಾರು 85 ಕಿ.ಮೀ. ಮಾರ್ಗದ ರೈಲ್ವೇ ಮಾರ್ಗ ವಿದ್ಯುದ್ದೀಕರಣ ನಡೆಯಲಿದೆ. ಈ ಸಂಬಂಧ ರೈಲ್‌ ಇಂಡಿಯಾ ಟೆಕ್ನಿಕಲ್‌ ಆ್ಯಂಡ್‌ ಇಕನಾಮಿಕ್‌ ಸರ್ವಿಸ್‌ ಲಿ. (ರೈಟ್ಸ್‌)ಸಂಸ್ಥೆ ಕಳೆದ ಮಾರ್ಚ್‌ನಲ್ಲೇ ಟೆಂಡರ್‌ ಆಹ್ವಾನಿಸಿತ್ತು. ಇದರಲ್ಲಿ ವಿದ್ಯುದ್ದೀಕರಣ, ಸಿಗ್ನಲಿಂಗ್‌, ಸಿವಿಲ್‌ ಎಂಜಿನಿಯರಿಂಗ್‌ ಮೊದಲಾದ ಕಾಮಗಾರಿಗಳು ನಡೆಯಲಿವೆ. ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.

461 ಕೋ. ರೂ. ಯೋಜನೆಯ ಭಾಗ
ಮಂಗಳೂರು -ಹಾಸನ- ಮೈಸೂರು ನಡುವಿನ ಒಟ್ಟು 300 ಕಿ.ಮೀ. ಮತ್ತು ಅರಸೀಕರೆ-ಹಾಸನ ನಡುವಿನ 47 ಕಿ.ಮೀ. ಉದ್ದದ ರೈಲು ಮಾರ್ಗವನ್ನು ವಿದ್ಯುದ್ದೀಕರಣ ಮಾಡಲು ಉದ್ದೇಶಿಸಲಾಗಿದೆ. ಒಟ್ಟು 461 ಕೋಟಿ. ರೂ. ಮೊತ್ತದ ಈ ಯೋಜನೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು-ಚಿಕ್ಕಮಗಳೂರು ನಡುವಿನ‌ 45 ಕಿ.ಮೀ. ರೈಲ್ವೇ ಹಳಿಯ ವಿದ್ಯುದ್ದೀಕರಣವೂ ಸೇರಿದೆ. ವಿವಿಧ ಹಂತಗಳಲ್ಲಿ ಈ ಕಾಮಗಾರಿ ಕೈಗೊಳ್ಳಲು ರೈಟ್ಸ್‌ ಸಂಸ್ಥೆ ಉದ್ದೇಶಿಸಿದೆ.

Advertisement

ಸವಾಲಿನಿಂದ ಕೂಡಿದ ಕೆಲಸ
ಮಂಗಳೂರು-ಮೈಸೂರು ನಡುವಿನ ಕಾಮಗಾರಿಯಲ್ಲಿ ಸುಬ್ರಹ್ಮಣ್ಯ ರೋಡ್‌-ಸಕಲೇಶಪುರ ನಡುವಿನ ಪಶ್ಚಿಮ ಘಟ್ಟದ ಒಳಗಿನ 55 ಕಿ.ಮೀ. ರೈಲು ಮಾರ್ಗ ಹೆಚ್ಚು ಸವಾಲಿನಿಂದ ಕೂಡಿದ್ದಾಗಿದೆ. ಹಸುರು ಹಾದಿ ಎಂದು ಕರೆಯಲಾಗುವ ಈ ಮಾರ್ಗದಲ್ಲಿ 57 ಸುರಂಗ, 109 ಸಣ್ಣ ಮತ್ತು ದೊಡ್ಡ ಸೇತುವೆಗಳು ಸಿಗುತ್ತವೆ. ಸಕಲೇಶಪುರ ಸಮುದ್ರ
ಮಟ್ಟದಿಂದ 906 ಮೀ. ಎತ್ತರದಲ್ಲಿದ್ದರೆ, ಸುಬ್ರಹ್ಮಣ್ಯ 120 ಮೀ. ಎತ್ತರದಲ್ಲಿದೆ. ಘಟ್ಟದ ಕಿರಿದಾದ ಹಾದಿಯಲ್ಲಿ ವಿದ್ಯುತ್‌ ಕಂಬಗಳು, ಕೇಬಲ್‌ಗ‌ಳನ್ನು ಅಳವಡಿಸುವುದು ಸಹಿತ ಎಂಜಿನಿಯರಿಂಗ್‌ ಕಾಮಗಾರಿ ಬಹು ಸವಾಲಿನಿಂದ ಕೂಡಿದ್ದಾಗಿದೆ.

ಮಂಗಳೂರು-ಮೈಸೂರು ರೈಲ್ವೇ ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಈಗಾಗಲೇ ಆರಂಭವಾಗಿದೆ. ರೈಟ್ಸ್‌ ಸಂಸ್ಥೆಯವರು ಇದರ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಈಗಾಗಲೇ ವಿವಿಧ ಹಂತಗಳಲ್ಲಿ ಕಾಮಗಾರಿ ನಡೆಯುತ್ತಿದೆ. ವಿವಿಧೆಡೆ ಭೇಟಿ ನೀಡಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದ್ದೇನೆ.
– ರಾಹುಲ್‌ ಅಗರ್ವಾಲ್‌ ಮೈಸೂರು ವಿಭಾಗೀಯ ರೈಲ್ವೇ ಪ್ರಬಂಧಕ

– ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next