ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಮಂಗಳೂರಿನಲ್ಲಿ ಐದು ದಿನಗಳ ಕಾಲ ಆಯೋಜಿಸಲಾಗಿರುವ ಎರಡನೇ ಆವೃತ್ತಿಯ ಸ್ಟ್ರೀಟ್ ಫುಡ್ ಫಿಯೆಸ್ಟಕ್ಕೆ ಬುಧವಾರ ಚಾಲನೆ ದೊರೆಯಿತು.
ಉದ್ಘಾಟನೆ ನಡೆಸಿ ಮಾತನಾಡಿದ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ , ಮಂಗಳೂರಿನಲ್ಲಿ ಆಹಾರ ಉತ್ಸವ ಆಯೋಜನೆ ಮಾಡುವ ಮೂಲಕ ಎಲ್ಲಾ ರೀತಿಯ ಆಹಾರವನ್ನು ಸಾರ್ವಜನಿಕರಿಗೆ ಆಸ್ವಾಧಿಸಲು ಅವಕಾಶ ನೀಡಲಾಗಿದೆ ಎಂದು ಹಾರೈಸಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿದರು.ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ಕಳೆದ ವರ್ಷದ ಸ್ಟ್ರೀಟ್ ಫುಡ್ ಫಿಯೆಸ್ಟ ನಾಲ್ಕು ಲಕ್ಷ ಮಂದಿಯನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು. ಸ್ಟ್ರೀಟ್ ಫುಡ್ ಫಿಯೆಸ್ಟದಲ್ಲಿ ಸುಮಾರು 160 ಕ್ಕೂ ಹೆಚ್ಚಿನ ಸಸ್ಯಾಹಾರಿ ಮತ್ತು ಮಾಂಸಾಹಾರಿ ಮಳಿಗೆಗಳಿವೆ. ಕರಾವಳಿ ವಸ್ತು ಪ್ರದರ್ಶನ ಮೈದಾನದಿಂದ ನಾರಾಯಣ ಗುರು ವೃತ್ತ, ಮಣ್ಣಗುಡ್ಡ ಗುರ್ಜಿ ವೃತ್ತ, ಕೆನರಾ ಉರ್ವದವರೆಗೆ ಪ್ರತಿ ದಿನ ಸಂಜೆ 4ರಿಂದ ರಾತ್ರಿ 10.30 ರವರೆಗೆ (ಕೊನೆಯ ಮೂರು ದಿನ, ಶುಕ್ರವಾರ ಶನಿವಾರ ಮತ್ತು ರವಿವಾರ ಮಧ್ಯಾಹ್ನ2 ಗಂಟೆಯಿಂದ ರಾತ್ರಿ 10.30ರವರೆಗೆ ) ಸ್ಟ್ರೀಟ್ ಫುಡ್ ಫಿಯೆಸ್ಟಾ ನಡೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪಮೇಯರ್ ಸುನೀತಾ, ಜಿಲ್ಲಾ ಪಂಚಾಯತ್ ಸಿಇಒ ಡಾ| ಆನಂದ್, ಮಾಜಿ ಮೇಯರ್ಗಳಾದ ಪ್ರೇಮಾನಂದ ಶೆಟ್ಟಿ, ಜಯಾನಂದ ಅಂಚನ್, ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಪ್ರತಿಷ್ಠಾನದ ಅಧ್ಯಕ್ಷ ದಿವಾಕರ ಪಾಂಡೇಶ್ವರ, ಉದಯ ಪೂಜಾರಿ, ಯತೀಶ್ ಬಕಂಪಾಡಿ, ಡಾ| ರಾಘವೇಂದ್ರ ಹೊಳ್ಳ, ನರೇಶ್ ಶೆಣೈ ಸಹಿತ ಮತ್ತಿತರರು ಇದ್ದರು.
ಆರ್ ಜೆ ಕಿರಣ್ ನಿರೂಪಿಸಿದರು.