Advertisement

Mangaluru: ಹಳೆಯ ಕಾಲದ ಕಥೆ ಹೇಳಿದ ಚಿತ್ರಗಳು, ಸಾಂಸ್ಕೃತಿಕ ಚಿತ್ರಣ

03:18 PM Dec 01, 2024 | Team Udayavani |

ಸ್ಟೇಟ್‌ಬ್ಯಾಂಕ್‌: ಬ್ರಿಟೀಷರ ಕಾಲದಲ್ಲಿ ಕಲೆಕ್ಟರ್‌ ಆಫೀಸ್‌ ಎಂದೇ ಕರೆಯಲ್ಪಡುತ್ತಿದ್ದ ಹಲವು ದಶಕಗಳ ಇತಿಹಾಸವುಳ್ಳ ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ವನ್ನು ಸಂರಕ್ಷಿಸುವ ಹಾಗೂ ಈ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಎರಡು ದಿನಗಳ ಅಪರೂಪದ ‘ಪಾರಂಪರಿಕ ಉತ್ಸವ’ ವನ್ನು ದ.ಕ. ಜಿಲ್ಲಾಡಳಿತ ಆಯೋಜಿಸಿದ್ದು ಶನಿವಾರ ಬೆಳಗ್ಗೆ ಚಾಲನೆ ದೊರೆಯಿತು.

Advertisement

ಶ್ರೀನಿವಾಸ್‌ ಸ್ಕೂಲ್‌ ಆಫ್ ಆರ್ಕಿಟೆಕ್ಚರ್‌, ಚಾವಡಿ, ಬಾಸೆಲ್‌ ಮಿಷನ್‌, ಆರ್ಟ್‌ ಕೆನರಾ, ಕಲ್ಲಡ್ಕ ಮ್ಯೂಸಿಯಂ, ಕೆನರಾ ಚೇಂಬರ್‌ ಮುಂತಾದ ಸಂಸ್ಥೆಗಳು ಕಾರ್ಯಕ್ರಮಕ್ಕೆ ಸಹಯೋಗ ನೀಡಿವೆ. ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಚಿತ್ರ ಸ್ಪರ್ಧೆಯಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಹಲವು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.

ಕರಾವಳಿಯ ಕಸುಬು, ಕಲೆ, ಬದುಕನ್ನು ಬಿಂಬಿಸುವ ಕಲಾಕೃತಿಗಳ ಪ್ರದರ್ಶನ, ಸಂಗೀತ ಸಂಜೆ, ಗುಂಪು ಚರ್ಚೆ, ಶಾಲಾ ವಿದ್ಯಾರ್ಥಿಗಳಿಗೆ ಚಿತ್ರ ರಚನೆ ಸ್ಪರ್ಧೆ ಕಾರ್ಯಕ್ರಮದ ಮುಖ್ಯ ಆಕರ್ಷಣೆ ಯಾಗಿತ್ತು. ಜಿಲ್ಲೆಯ ಹಳೆಯ ನೆನಪನ್ನು ಮನನ ಮಾಡಲು ಅನುಕೂಲವಾಗುವ ಛಾಯಾಚಿತ್ರಗಳು ಕಾರ್ಯಕ್ರಮದಲ್ಲಿ ಗಮನಸೆಳೆಯಿತು. ಹಿಂದಿನ ಕಾಲದ ಹುಲಿವೇಷ, ನಾನಾ ಸಾಂಸ್ಕೃತಿಕ ಚಿತ್ರಣ ವಿವಿಧ ಕಥೆ ಹೇಳುವಂತಿದೆ. ಯಾಸೀರ್‌ ಕಲ್ಲಡ್ಕ ಅವರ ಸಂಗ್ರಹದ ದೇಶ ವಿದೇಶದ ಬಗೆ ಬಗೆಯ ನಾಣ್ಯ, ನೋಟುಗಳು ವಿಶೇಷ ಕುತೂಹಲ ಹುಟ್ಟಿಸುವಂತಿದೆ.

ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ, ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಅಪರ ಜಿಲ್ಲಾಧಿಕಾರಿ ಸಂತೋಷ್‌ ಕುಮಾರ್‌, ಮಂಗಳೂರು ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ರಾಜು ಕೆ., ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ ರಶ್ಮಿ , ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ| ವಿ.ಕರಿಕಾಳನ್‌ ಉಪಸ್ಥಿತರಿದ್ದರು.

ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟೀಷ್‌ ಅಧಿಕಾರಿಗಳಿಗೆ ಇದು ಕಚೇರಿಯಾಗಿತ್ತು. ಇಂದಿಗೂ ಈ ಕಟ್ಟಡವು ಸುಭದ್ರವಾಗಿದೆ ಹಾಗೂ ಜಿಲ್ಲೆಯ ಆಡಳಿತ ಕ್ಷೇತ್ರದ ಭವ್ಯ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿದೆ. ಈ ಕಟ್ಟಡದ ಪಾರಂಪರಿಕ ಹಾಗೂ ಭವ್ಯ ಇತಿಹಾಸವನ್ನು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪಾರಂಪರಿಕ ಸಪ್ತಾಹ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇಂದೂ ಕೂಡ ಕಾರ್ಯಕ್ರಮ ನಡೆಯಲಿದೆ.

Advertisement

ಡಿಸಿ ಪತ್ನಿ ಸಾರಥ್ಯ
ಈ ಎಲ್ಲ ಪರಿಕಲ್ಪನೆಯು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರ ಪತ್ನಿ ಆರ್ಕಿಟೆಕ್ಟ್ ಆಗಿರುವ ಅಶ್ವಿ‌ನಿ ಅವರಿಂದ ಮೂಡಿಬಂದಿದೆ. ಪಾರಂಪರಿಕ ಕಟ್ಟಡಕ್ಕೆ ಹೊಸ ಕಲಾ ಲೋಕ ಮೂಡಿಸುವ ನಿಟ್ಟಿನಲ್ಲಿ ಅಶ್ವಿ‌ನಿ ಅವರ ಕೈಚಳಕ ಬಹುಮುಖ್ಯವಾಗಿತ್ತು. ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದೆ. ಆಡಳಿತ ವ್ಯವಸ್ಥೆ ಹಾಗೂ ಕಲಾ ವಿಭಾಗದ ಸರ್ವರ ಸಹಕಾರದಿಂದ ಇದು ಅತ್ಯಪೂರ್ವವಾಗಿ ಮೂಡಿಬರುವಂತಾಯಿತು ಎಂದು ಅಶ್ವಿ‌ನಿ ಅವರು ಉದಯವಾಣಿ ಸುದಿನಕ್ಕೆ ಪ್ರತಿಕ್ರಿಯಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಹಳೆ ಕಟ್ಟಡವು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಸುಂದರವಾದ ಪರಿಸರದಲ್ಲಿ ಇದೆ. ಈ ಕಟ್ಟಡವನ್ನು ಪಾರಂಪರಿಕ ಕಟ್ಟಡವಾಗಿ ಉಳಿಸುವ ಹಾಗೂ ಬಳಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಈ ಕಟ್ಟಡದಲ್ಲೇ ಈ ಬಾರಿ ಪಾರಂಪರಿಕ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿದೆ.
-ಮುಲ್ಲೈ ಮುಗಿಲನ್‌, ದ.ಕ. ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next