ಮಂಗಳೂರು: ಕೊನೆಗೂ ಶೂನ್ಯ ಬಡ್ಡಿದರದ ಅಲ್ಪಾವಧಿ ಬೆಳೆ ಸಾಲ ಹಾಗೂ ಶೇ. 3 ಬಡ್ಡಿದರದ ಮಧ್ಯಮಾವಧಿ/ದೀರ್ಘಾವಧಿ ಸಾಲದ ಮಿತಿಯನ್ನು ಅನುಕ್ರಮವಾಗಿ 3ರಿಂದ 5 ಲಕ್ಷ ರೂ.ಗೆ ಹಾಗೂ 10ರಿಂದ 15 ಲಕ್ಷ ರೂ.ಗೆ ಸರಕಾರ ವಿಸ್ತರಣೆ ಮಾಡಿದೆ.
ಈ ಮೂಲಕ ಲಕ್ಷಾಂತರ ಕೃಷಿಕರಿಗೆ ಹಾಲಿ ಕೃಷಿ ಋತುವಿನಲ್ಲಿಯೇ ಕೃಷಿ ವಿಸ್ತರಣೆ, ಯಾಂತ್ರೀಕರಣ ಮತ್ತಿತರ ಅಗತ್ಯಗಳಿಗಾಗಿ ನೆರವು ದೊರಕಿದಂತಾಗಿದೆ.
ಈ ಶೂನ್ಯ ಬಡ್ಡಿದರದ ಸಾಲವಂತೂ ಕರಾವಳಿಯಲ್ಲಿ ಬಹುತೇಕ ಕೃಷಿಕರಿಗೆ ನೆರವಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿತ್ತು. 1-4-2023ರಿಂದ 31-03-2024 ರ ಸಾಲಿನಲ್ಲಿ ಸಾಲ ಪಡೆದವರಿಗೆ ಮಾತ್ರ ಈ ಬಡ್ಡಿದರಗಳು ಅನ್ವಯವಾಗುತ್ತವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಈ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾದ ಈ ಸಾಲದ ಮಿತಿ ವಿಸ್ತರಣೆ ಇದುವರೆಗೆ ಅನುಷ್ಠಾನಗೊಳ್ಳದಿರುವ ಬಗ್ಗೆ ಉದಯವಾಣಿ ಸೆ.10ರಂದು ಮುಖಪುಟದಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.