ಮಂಗಳೂರು: ಭಾರತ್ ಸ್ಕೌಟ್ಸ್ ಗೈಡ್ಸ್‌ನಿಂದ ಕರ್ನಾಟಕದಲ್ಲಿ ಏರ್ ಸ್ಕೌಟ್ಸ್, ಸೀ ಸ್ಕೌಟ್ಸ್ ಮತ್ತು ರೂರಲ್ ಸ್ಕೌಟ್ಸ್ ತರಬೇತಿ ಆರಂಭಿಸಿ ರಾಷ್ಟ್ರದ ಕೇಂದ್ರವನ್ನಾಗಿಸಲಿದೆ ಎಂದು ಭಾರತೀಯ ಸ್ಕೌಟ್ಸ್-ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ದ.ಕ. ಜಿಲ್ಲಾ ಸಂಸ್ಥೆ ವತಿಯಿಂದ ನಡೆದ ವಿಶ್ವ ಸಾಂಸ್ಕೃತಿಕ ಜಾಂಬೂರಿ 2022-23ರ ನೆನಪಿಗಾಗಿ ಪಿಲಿಕುಳದಲ್ಲಿ ನಿರ್ಮಿಸಿದ ಕಟ್ಟಡದ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಚ್‌ಎಎಲ್ ಬೆಂಗಳೂರಿನಲ್ಲಿ ಈಗಾಗಲೇ ಏರ್ ಸ್ಕೌಟ್ಸ್ ತರಬೇತಿ ಆರಂಭಗೊಂಡಿದ್ದು, 100 ಮಂದಿ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಮಂಗಳೂರಿನಲ್ಲಿ ಸೀ ಸ್ಕೌಟ್ಸ್ ತರಬೇತಿ ಸದ್ಯದಲ್ಲೇ ಆರಂಭಗೊಳ್ಳಲಿದ್ದು, ಮುಂಬಯಿಯ ಅಧಿಕಾರಿಗಳು ತರಬೇತಿ ನೀಡಲಿದ್ದಾರೆ. ಇಲ್ಲಿ ನೌಕಾಸೇನೆ, ಪ್ರವಾಹದಿಂದ ರಕ್ಷಣೆ ಸಹಿತ ವಿವಿಧ ವಿಷಯಗಳ ಬಗ್ಗೆ ವಿಶೇಷ ತರಬೇತಿ ನೀಡಲಾಗುವುದು. ಪ್ರಥಮವಾಗಿ ಶಿಕ್ಷಕರಿಗೆ ಬಳಿಕ ವಿದ್ಯಾರ್ಥಿಗಳಿಗೂ ಕ್ಯಾಂಪ್ ರೀತಿ ತರಬೇತಿ ನೀಡಲಾಗುತ್ತದೆ. ಇದಾದ ಬಳಿಕ ಗ್ರಾಮೀಣ ಭಾಗದ ಕೃಷಿ, ಅಲ್ಲಿನ ಚಟುವಟಿಕೆ ಬಗ್ಗೆ ಅರಿವು ಮೂಡಿಸಲು ರೂರಲ್ ಸ್ಕೌಟ್ಸ್ ಆರಂಭ ಮಾಡುತ್ತೇವೆ. ಇನ್ನೂ ಜಾಗ ಅಂತಿಮಗೊಂಡಿಲ್ಲ ಎಂದರು.
ಸಂಸದ ನಳಿನ್ ಕುಮಾರ್ ಕಟೀಲು ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಜಿಲ್ಲಾ ಆಯುಕ್ತ ಮೋಹನ ಆಳ್ವರ ನೇತೃತ್ವದಲ್ಲಿ ಸ್ಕೌಟ್ಸ್ ಗೈಡ್ಸ್‌ಗೆ ಸಂಬಂಧಿಸಿ ಉತ್ತೇಜನ, ಹಲವು ಅಭಿವೃದ್ಧಿ ಕೆಲಸ ನಡೆದಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಪಾಳು ಬಿದ್ದ ಜಾಗದಲ್ಲಿ ಸುಸಜ್ಜಿತ ಭವನ ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಕಟ್ಟಡದಿಂದ ಈ ಭಾಗದ ಸಾರ್ವಜನಿಕರಿಗೆ ಲಾಭ ವಾಗಲಿದೆ ಎಂದರು.
ಮೇಯರ್ ಸುಧೀರ್ ಶೆಟ್ಟಿ, ಮಾಜಿ ಸಚಿವ ನಾಗರಾಜ ಶೆಟ್ಟಿ, ಮೂಡುಶೆಡ್ಡೆ ಗ್ರಾ.ಪಂ. ಅಧ್ಯಕ್ಷ ಅನಿಲ್ ಕುಮಾರ್, ಉದ್ಯಮಿ ಶಶಿಧರ ಶೆಟ್ಟಿ, ಅದಾನಿ ಸಂಸ್ಥೆಯ ಕಿಶೋರ್ ಆಳ್ವ, ಗಂಗಪ್ಪ ಗೌಡ, ರಾಧಾ ವೆಂಕಟೇಶ್, ರಾಮಲತಾ ಉಪಸ್ಥಿತರಿದ್ದರು.
ಭಾರತ್ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಡಾ| ಎಂ. ಮೋಹನ ಆಳ್ವ ಪ್ರಸ್ತಾವನೆಗೈದು, ಭಾರತ್ ಸ್ಕೌಟ್ಸ್ ಗೈಡ್‌ನಲ್ಲಿ ದ.ಕ. ಜಿಲ್ಲೆ ಕೆಲವು ವರ್ಷಗಳಿಂದ ರಾಜ್ಯದಲ್ಲೇ ಮೊದಲನೇ ಸ್ಥಾನದಲ್ಲಿದೆ. 6 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು, 25 ಸಾವಿರಕ್ಕೂ ಹೆಚ್ಚಿನ ಶಿಕ್ಷಕರು ತೊಡಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಚಟುವಟಿಕೆಗಳಿಗೆ ಕ್ಯಾಂಪ್ ಮಾಡಲು ಸೂಕ್ತ ಸಭಾಂಗಣ ಇರಲಿಲ್ಲ. ಈಗ 1.5 ಕೋಟಿ ರೂ. ವೆಚ್ಚದಲ್ಲಿ ಪಿಲಿಕುಳದಲ್ಲಿ ನಿರ್ಮಾಣಗೊಂಡಿದೆ. 1,500ಕ್ಕೂ ಹೆಚ್ಚಿನ ಮಂದಿಗೆ ಅನುಕೂಲವಾಗಲಿದೆ ಎಂದು ಹೇಳಿದರು.