Advertisement

Mangaluru; ಶಾರದಾ ಪೀಠಕ್ಕಾಗಿ ಎಲ್‌ಒಸಿ ದಾಟಲೂ ಸಿದ್ಧ

12:27 AM Jan 25, 2024 | Team Udayavani |

ಮಂಗಳೂರು: ಭಾರತ -ಪಾಕ್‌ ಗಡಿಯಲ್ಲೇ ಇರುವ ಕಾಶ್ಮೀರದ ತೀತ್ವಾಲ್‌ನಲ್ಲಿ ಶಾರದಾ ದೇವಿಯ ಮಂದಿರ ನಿರ್ಮಾಣಗೊಂಡಿರುವುದು ನಮ್ಮ ಭಾಗ್ಯ. ಆದರೆ ಸಮಸ್ತ ಹಿಂದೂಗಳ ಮಕುಟವಾಗಿರುವ ಶಾರದಾ ಪೀಠಕ್ಕೆ ಮುಕ್ತಿ ದೊರಕಿಸಬೇಕು, ಸರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳದೆ ಹೋದರೆ ನಾವೇ ಶ್ರದ್ಧಾಳುಗಳು ಸೇರಿಕೊಂಡು ನಿಯಂತ್ರಣ ರೇಖೆ ಎಲ್‌ಒಸಿ (ಗಡಿ) ದಾಟಿ ಮಂದಿರದತ್ತ ಸಾಗಲಿದ್ದೇವೆ…

Advertisement

ಕಾಶ್ಮೀರದ ಶಾರದಾ ಪೀಠ ಸಂರಕ್ಷಣ ಸಮಿತಿಯ ಸಂಸ್ಥಾಪಕ, ರವೀಂದರ್‌ ಪಂಡಿತ ಅವರ ಖಚಿತ ಮಾತುಗಳಿವು.

ಹಲವು ವರ್ಷಗಳಿಂದ ಶಾರದಾ ಪೀಠಕ್ಕೆ ಭಾರತೀಯರೂ ತೆರಳುವಂತಹ ಅವಕಾಶಕ್ಕಾಗಿ ಹೋರಾಡುತ್ತಿರುವವರು. ತಮ್ಮ ಊರಿನಲ್ಲೇ ನೆಲೆ ಕಳೆದುಕೊಂಡ ಕಾಶ್ಮೀರಿ ಪಂಡಿತರ ಪರವಾಗಿ ಅಭಿಯಾನದಲ್ಲಿ ತೊಡಗಿಕೊಂಡಿರುವ ಅವರು ಮಂಗಳೂರು ಲಿಟ್‌ ಫೆಸ್ಟ್‌ನಲ್ಲಿ ಭಾಗವಹಿಸಲು ಆಗಮಿಸಿದ್ದರು. ಅವರು ಉದಯವಾಣಿ ಜತೆಗೆ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಶಾರದಾ ಪೀಠ, ಸರಕಾರದ ಯತ್ನ ಸಾಲದು
ಶಾರದಾ ಪೀಠಕ್ಕೆ ನಮಗೆ ಪ್ರವೇಶ ಸಿಗಬೇಕು, ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಪ್ರಯತ್ನ ಸಾಲದು. ಕೇಂದ್ರದ ಮೇಲೆ ನಾವು ನಿರಂತರ ಒತ್ತಡ ಹೇರಬೇಕಿದೆ. ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಇರುವಂತಹ ಈ ಶಾರದಾ ಪೀಠ ಎಲ್ಲ ಹಿಂದೂಗಳಿಗೆ ಪವಿತ್ರ, ಅಲ್ಲಿ ಈಗ ಪಾಕ್‌ ಸೇನೆಯವರು ಕಾಫಿ ಶಾಪ್‌ ತೆರೆಯುತ್ತಿರುವುದು ಅಕ್ಷಮ್ಯ. ಅದನ್ನು ವಿರೋಧಿಸಿ ಪಾಕ್‌ ಪ್ರಧಾನಿ, ಪಿಒಕೆಯ ಪ್ರಧಾನಿಗೆ ಪತ್ರ ಬರೆದಿದ್ದೇನೆ, ಆದರೆ ಪ್ರಯೋಜನವಾಗಿಲ್ಲ. ಕೇಂದ್ರ ಸರಕಾರ ಇದನ್ನು ಉನ್ನತ ಮಟ್ಟದಲ್ಲಿ ತಡೆಯಬೇಕಿದೆ.

ತೀತ್ವಾಲ್‌ನಲ್ಲಿ ಶಾರದಾ ಮಂದಿರ
ಕಾಶ್ಮೀರದ ತೀತ್ವಾಲ್‌ನ ಮಿಲಿಟರಿ ವಲಯದಲ್ಲಿ ಶಾರದಾ ಮಂದಿರವನ್ನು ಕಳೆದ ವರ್ಷ ಜೂ. 5ರಂದು ಶೃಂಗೇರಿಯ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರು ಉದ್ಘಾಟಿಸಿದ್ದಾರೆ. ಕೇವಲ 9 ತಿಂಗಳಲ್ಲಿ ಶಾರದಾ ಮಂದಿರ ಸಮಿತಿಯ ಖರ್ಚುವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಇದಕ್ಕೆ ಪಂಚಲೋಹದ ವಿಗ್ರಹ ಹಾಗೂ ಗ್ರಾನೈಟನ್ನು ಶೃಂಗೇರಿ ಮಠದ ಸ್ವಾಮೀಜಿಯವರು ದಾನವಾಗಿ ನೀಡಿದ್ದಾರೆ. ಈ ಮಂದಿರಕ್ಕೆ //epass.kupwara.co.in/apply ಮೂಲಕ ಪಾಸ್‌ ಪಡೆದು ತೆರಳಬಹುದು. ಯಾತ್ರಿಕರಿಗೆ ಬೇಕಾದ ವಸತಿ ಸೌಲಭ್ಯಗಳೂ ಅಲ್ಲಿವೆ.

Advertisement

ಕಾಶ್ಮೀರ ಇನ್ನೂ ಭಾರತ ಪರವಾಗಿ ಇಲ್ಲ
370ನೇ ವಿಧಿ ರದ್ದುಗೊಳಿಸಿದ ಭಾರತ ಸರಕಾರದ ಕ್ರಮ ನಿಜಕ್ಕೂ ಬಹಳ ಕ್ರಾಂತಿಕಾರಿಯಾಗಿದ್ದು. ರಾಷ್ಟ್ರೀಯ -ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪ್ರಭಾವ ಬೀರಿದೆ. ಆದರೆ ಕಾಶ್ಮೀರದಲ್ಲಿ ಇನ್ನೂ ಆಗಬೇಕಾದ್ದು ಬಹಳಷ್ಟಿದೆ. ನಾನು ಅಲ್ಲಿಯವನಾಗಿ ಕಂಡಿರುವುದೇನೆಂದರೆ ಪಾಕಿಸ್ಥಾನ ಪರವಾದವರ ಸಂಖ್ಯೆ ಇನ್ನಿಲ್ಲವಾಗಿದೆ, ಆದರೆ ಇನ್ನೂ ಭಾರತ ವಿರೋಧಿ ಧ್ವನಿ ಶೇ. 20ರಷ್ಟಿದೆ. ಇನ್ನುಳಿದವರು ಭಾರತದ ಪರವಾಗಿಯಂತೂ ಇಲ್ಲ. ಇವರನ್ನು ಮುಖ್ಯವಾಹಿನಿಗೆ ತರುವಂತಹ ಕೆಲಸ ಆಗಬೇಕು. ಇದಕ್ಕೆ ತುಂಬಾ ಸಮಯ ಬೇಕಾಗಬಹುದು. ಕೇವಲ ಅಭಿವೃದ್ಧಿ ಕೆಲಸದಿಂದ ಅದು ಆಗುವಂಥದ್ದಲ್ಲ. ಸಾಂಸ್ಕೃತಿಕವಾಗಿ ಆಗಬೇಕಾದ ಕೆಲಸವದು.

-ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next