ಮಂಗಳೂರು: ಸುಸಂಸ್ಕೃತ ಪರಂಪರೆ ಹೊಂದಿರುವ ತುಳುನಾಡಿನಲ್ಲಿ ಕಂಬಳ್ಳೋತ್ಸವ ಸಮಾಜದ ಎಲ್ಲರನ್ನೂ ಒಂದೆಡೆ ಸೇರಿಸಿ ಹಬ್ಬದ ವಾತಾವರಣ ಸೃಷ್ಟಿಸಿದೆ. ತುಳುನಾಡಿನ ಸಂಭ್ರಮ, ಸಂಸ್ಕೃತಿ, ಸಾಮರಸ್ಯವನ್ನು ಎಲ್ಲ ಕಡೆ ಬಿತ್ತರಿಸುವ ಉತ್ಸವೂ ಹೌದು ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯ ರಾಮ – ಲಕ್ಷ್ಮಣ ಜೋಡುಕರೆಯಲ್ಲಿ ಕ್ಯಾ| ಬೃಜೇಶ್ ಚೌಟ ಅವರ ಸಾರಥ್ಯದಲ್ಲಿ ಮಂಗಳೂರು ಕಂಬಳ ಸಮಿತಿ ವತಿಯಿಂದ ಶನಿವಾರ 7ನೇ ವರ್ಷದ ಹೊನಲು ಬೆಳಕಿನ ಮಂಗಳೂರು ಕಂಬಳದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
“ಎಂಕ್ಲೆನ್ ತುಳುನಾಡ್‌ಡ್ ಕಂಬಳ್ಳೋತ್ಸವ ಆವೊಂದುಂಡು…..ತೂದು ಮಸ್ತ್ ಖುಷಿ ಆಂಡ್’ ಎಂದು ತುಳುವಿನಲ್ಲಿ ಮಾತು ಆರಂಭಿಸಿದ ಅವರು, ಕಾರಣಾಂತರದಿಂದ ಸ್ಥಗಿತಗೊಂಡಿದ್ದ ಉತ್ಸವ ಮತ್ತೆ ಆರಂಭವಾಗಿದೆ. ತುಳುನಾಡಿನ ಈ ಕ್ರೀಡೆ ರಾಜ್ಯದ ಸಾಮಾಜಿಕ – ಸಾಂಸ್ಕೃತಿಕ ಉತ್ಸವವಾಗಿ ಜನಪ್ರಿಯತೆ ಗಳಿಸಿದೆ ಎನ್ನುವುದು ಸಂತೋಷದ ವಿಚಾರ ಎಂದರು.
ಯುವಕರ ಶೌರ್ಯ ಧೈರ್ಯದ ಸಂಕೇತ
ಸಂಸದ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ಮಾತನಾಡಿ, ಯುವಕರ ಶೌರ್ಯ, ಧೈರ್ಯ, ತಾಕತ್ತನ್ನು ಗೌರವಿಸಿದ ಕ್ರೀಡೆ ಕಂಬಳ. ಬೆಂಗಳೂರಿಗೂ ಕಂಬಳ ಕಾಲಿಟ್ಟಿರುವುದು ಸಂಸ್ಕೃತಿಯ ನಿರಂತರತೆಗೆ ಅಜರಾಮರತೆಗೆ ಸಾಕ್ಷಿಯಾಗಿದೆ ಎಂದರು.
ಕಂಬಳದ ಗೌರವಾಧ್ಯಕ್ಷ, ಎಂಆರ್‌ಜಿ ಗ್ರೂಪ್ ಸಿಎಂಡಿ ಕೆ. ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಎಸ್.ಎಲ್.ಭೋಜೇಗೌಡ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಾಜಿ ಶಾಸಕ ಪ್ರಭಾಕರ ಬಂಗೇರ, ಎಂಆರ್‌ಜಿ ಗ್ರೂಪ್ ಆಡಳಿತ ನಿರ್ದೇಶಕ ಗೌರವ್ ಶೆಟ್ಟಿ, ನಿಟ್ಟೆ ವಿವಿ ಸಹಕುಲಾಧಿಪತಿ ವಿಶಾಲ್ ಹೆಗ್ಡೆ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಕೋಶಾಧಿಕಾರಿ ಸಾಯಿ ಪ್ರಸಾದ್, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಪ್ರಮುಖರಾದ ರವಿಶಂಕರ್ ಮಿಜಾರ್, ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ವಿಕಾಸ್ ಪುತ್ತೂರು, ಉಪೇಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕ್ಯಾ| ಬೃಜೇಶ್ ಚೌಟ ಅವರು ಪ್ರಸ್ತಾವಿಸಿ ಸ್ವಾಗತಿಸಿದರು. ಮಂಗಳೂರು ಕಂಬಳದಲ್ಲಿ ಈ ಬಾರಿ 170 ಜತೆ ಕೋಣಗಳು ಭಾಗವಹಿಸಿವೆ. ಕಲರ್ ಕೂಟ ಚಿತ್ರ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.