ಮಂಗಳೂರು: ಕರ್ನಾಟಕ ಸರಕಾರದ ಈ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯ ಎಂಜಿನಿಯರಿಂಗ್ ಮತ್ತು ಬಿ – ಫಾರ್ಮ ವಿಭಾಗಗಳಲ್ಲಿ ಮಂಗಳೂರು ಎಕ್ಸ್‌ಪರ್ಟ್ ವಿಜ್ಞಾನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರತೀಕ್ ನಾಯಕ್ ಅವರು ಪ್ರಥಮ ರ್‍ಯಾಂಕ್ ಗಳಿಸಿದ್ದಾರೆ.
ಅವರು ಮಂಗಳೂರಿನ ಕೊಟ್ಟಾರದ ವಾಣಿಜ್ಯೋದ್ಯಮಿ ಮಿತ್ತಬೈಲು ಶ್ರೀಕಾಂತ್ ನಾಯಕ್ ಹಾಗೂ ಸಂಗೀತಾ ನಾಯಕ್ ಅವರ ಪುತ್ರ. ಪ್ರತೀಕ್ ನಾಯಕ್ ಈಗಾಗಲೇ ಕಾಮೆಡ್ ಕೆ ಪರೀಕ್ಷೆಯಲ್ಲಿ 13ನೇ ಹಾಗೂ ಜೆಇಇ ಮೈನ್‌ನಲ್ಲಿ 1,672ನೇ ರ್‍ಯಾಂಕ್ ಗಳಿಸಿದ್ದು ಜೆಇಇ ಅಡ್ವಾನ್ಸ್ ಪರೀಕ್ಷೆ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಪಿಯುಸಿ ಪರೀಕ್ಷೆಯಲ್ಲಿ ಪಿಸಿಎಂಎಸ್ ವಿಷಯ ತೆಗೆದುಕೊಂಡಿದ್ದು 578 ಅಂಕ ಗಳಿಸಿದ್ದಾರೆ. ಸಹೋದರಿ ಪ್ರತಿಭಾ ನಾಯಕ್ ಅವರು ನಗರದ ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ 3 ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು ಎಕ್ಸ್‌ಪರ್ಟ್ ಕೋಚಿಂಗ್ ಕ್ಲಾಸ್‌ನ ವಿದ್ಯಾರ್ಥಿನಿಯಾಗಿದ್ದರು.
ಮೊದಲ 10ರಲ್ಲಿ ರ್‍ಯಾಂಕ್ ನಿರೀಕ್ಷೆ ಇತ್ತು: ಪ್ರತೀಕ್
ಸಿಇಟಿಯಲ್ಲಿ ಮೊದಲ 10 ರ್‍ಯಾಂಕ್‌ಗಳಲ್ಲಿ ಸ್ಥಾನದ ನಿರೀಕ್ಷೆ ಇತ್ತು. ಆದರೆ ಮೊದಲ ರ್‍ಯಾಂಕ್ ಬಂದಿರುವುದು ಅತೀವ ಸಂತೋಷ ತಂದಿದೆ. ನನ್ನ ಶ್ರಮದ ಜತೆಗೆ ಹೆತ್ತವರ ಪ್ರೋತ್ಸಾಹ, ಎಕ್ಸ್‌ಪರ್ಟ್‌ನ ಶಿಕ್ಷಣ ಮತ್ತು ಮಾರ್ಗದರ್ಶನ ಈ ಸಾಧನೆಗೆ ಕಾರಣವಾಗಿದೆ. ಅವರೆಲ್ಲರಿಗೂ ತುಂಬಾ ಆಭಾರಿಯಾಗಿದ್ದೇನೆ ಎಂದು ಪ್ರತೀಕ್ ನಾಯಕ್ ಸಂತಸ ಹಂಚಿಕೊಂಡಿದ್ದಾರೆ. ಕಾಲೇಜಿನಲ್ಲಿ ವಿದ್ಯಾಭ್ಯಾಸದ ಜತೆಗೆ 4 ತಾಸುಗಳ ವ್ಯಾಸಂಗ ಮಾಡುತ್ತಿದ್ದೆ. ಜತೆಗೆ ಇದಕ್ಕೆ ಸಂಬಂಧಪಟ್ಟಂತೆ ಕೆಲವು ಪುಸ್ತಕಗಳನ್ನು ಓದುತ್ತಿದ್ದೆ. ನನಗೆ ಓದು ಎಂದೂ ಹೊರೆಯಾಗಿಲ್ಲ. ಓದನ್ನು ಆನಂದಿಸಿದಾಗ ಅದು ಹೊರೆಯಾಗಿ ಕಾಣುವುದಿಲ್ಲ. ಬಾಸ್ಕೆಟ್‌ಬಾಲ್ ನನ್ನ ಪ್ರೀತಿಯ ಕ್ರೀಡೆ. ಆದರೆ ವಿದ್ಯಾಭ್ಯಾಸದ ದೃಷ್ಟಿಯಿಂದ ಪಿಯುಸಿಯ 2 ವರ್ಷಗಳ ಅವಧಿಯಲ್ಲಿ ಅದಕ್ಕೆ ವಿದಾಯ ಹೇಳಿ ನನ್ನ ಎಲ್ಲ ಗಮನವನ್ನು ಓದಿಗೆ ಮೀಸಲಿರಿಸಿದ್ದೆ ಎಂದವರು ವಿವರಿಸುತ್ತಾರೆ.
ಸಂಭ್ರಮದ ಕ್ಷಣ: ಹೆತ್ತವರು
ಸಿಇಟಿಯಲ್ಲಿ ಪ್ರಥಮ ರ್‍ಯಾಂಕ್ ಪಡೆದಿರುವ ಪುತ್ರನ ಸಾಧನೆ ನಮ್ಮ ಪಾಲಿಗೆ ಅತ್ಯಂತ ಸಂಭ್ರಮದ ಕ್ಷಣ. ತುಂಬಾ ಖುಷಿಯಾಗಿದೆ. ಆತನ ಸಾಧನೆಗೆ ಅಭಿನಂದಿಸುತ್ತಾ ಇದರಲ್ಲಿ ಮಹತ್ತರ ಪಾತ್ರ ವಹಿಸಿದ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆ, ಮುಖ್ಯಸ್ಥರಾದ ಪ್ರೊ| ನರೇಂದ್ರ ಎಲ್. ನಾಯಕ್, ಉಷಾಪ್ರಭಾ ನಾಯಕ್, ಬೋಧಕ ವರ್ಗಕ್ಕೆ ಆಭಾರಿಯಾಗಿಧಿದ್ದೇವೆ.
Related Articles
ಮುಂದಿನ ಕೋರ್ಸ್ ಆಯ್ಕೆಯನ್ನು ಆತನಿಗೇ ಬಿಟ್ಟಿದ್ದೇವೆ ಎಂದು ತಂದೆ ಮಿತ್ತಬೈಲು ಶ್ರೀಕಾಂತ್ ನಾಯಕ್ ಹಾಗೂ ತಾಯಿ ಸಂಗೀತಾ ನಾಯಕ್ ಹೇಳಿದ್ದಾರೆ.
ಶ್ರಮಕ್ಕೆ ಸಂದ ಜಯ: ಪ್ರೊ| ನಾಯಕ್
ಶ್ರಮ ಏವ ಜಯತೇ ಕಾಲೇಜಿನ ಧ್ಯೇಯವಾಕ್ಯ. ಈಗಾಗಲೇ ಎಕ್ಸ್‌ಪರ್ಟ್ ಪ.ಪೂ. ಕಾಲೇಜು ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸಾಧನೆ ಮಾಡಿದೆ. ಇದೀಗ ಸಿಇಟಿಯಲ್ಲೂ ಪ್ರಥಮ ರ್‍ಯಾಂಕ್ ಗಳಿಸುವ ಮೂಲಕ ಸಾಧನೆಯ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ. ಇದು ವಿದ್ಯಾರ್ಥಿ ಮತ್ತು ಕಾಲೇಜಿನ ಶ್ರಮಕ್ಕೆ ಸಂದ ಜಯ. ವಿದ್ಯಾರ್ಥಿ ಪ್ರತೀಕ್, ಅತನ ಹೆತ್ತವರು, ಬೋಧಕವರ್ಗವನ್ನು ಅಭಿನಂದಿಸುತ್ತಿದ್ದೇನೆ ಎಂದು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ| ಎಲ್. ನರೇಂದ್ರ ನಾಯಕ್ ಹೇಳಿದ್ದಾರೆ.
ಉಪಾಧ್ಯಕ್ಷೆ ಉಷಾಪ್ರಭಾ ನಾಯಕ್, ಕಾಲೇಜಿನ ಪ್ರಾಂಶುಪಾಲ ಪ್ರೊ| ರಾಮಚಂದ್ರ ಭಟ್, ಅಂಕುಶ್ ಎನ್. ನಾಯಕ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಕಾಲೇಜಿನ ಮುಂಭಾಗದಲ್ಲಿ ಜಮಾಯಿಸಿ ಸಿಹಿತಿಂಡಿ ಹಂಚಿ ಸಂಭ್ರಮಿಸಿದರು.
ಐಐಟಿಗೆ ಸೇರುವಾಸೆ
ಜೆಇಇ ಮೈನ್‌ನಲ್ಲಿ ಉತ್ತಮ ರ್‍ಯಾಂಕ್ ಬಂದಿದೆ. ಜೆಇಇ ಅಡ್ವಾನ್ಸ್ ಫಲಿತಾಂಶ ನಿರೀಕ್ಷಿಸುತ್ತಿದ್ದೇನೆ. ಐಐಟಿಯಲ್ಲಿ ಪ್ರವೇಶ ಪಡೆಯುವ ಬಯಕೆ ಹೊಂದಿದ್ದೇನೆ. ಒಂದು ವೇಳೆ ಇದು ಈಡೇರದಿದ್ದರೆ ಎನ್‌ಐಟಿಕೆಯನ್ನು ಆಯ್ದುಕೊಳ್ಳುತ್ತೇನೆ, ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಥವಾ ಕಂಪ್ಯೂಟರ್ ಸೈನ್ಸ್ ನನ್ನ ಆಯ್ಕೆಯಾಗಿರುತ್ತದೆ.
– ಪ್ರತೀಕ್