ಮಂಗಳೂರು: ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ಪೊಲೀಸ್ ಬೀಟ್ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಗೊಳಿಸುವ ಉದ್ದೇಶದಿಂದ ಬೀಟ್ ಮೀಟಿಂಗ್‌ಗೆ ಆದ್ಯತೆ ನೀಡಲಾಗುತ್ತಿದ್ದು, ಇದು ಪೊಲೀಸ್ ಮತ್ತು ನಾಗರಿಕರ ನಡುವಿನ ಸಂಪರ್ಕ ಬಲಪಡಿಸುವ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಈ ಹಿಂದಿನ ಬೀಟ್ ಸಿಸ್ಟಂ ಪ್ರಕಾರ, ಪ್ರತಿಯೊಂದು ಪೊಲೀಸ್ ಠಾಣೆಯ ಒಂದೊಂದು ನಿರ್ದಿಷ್ಟ ಏರಿಯಾದ ಹೊಣೆಯನ್ನು ಒಬ್ಬೊಬ್ಬ ಸಿಬಂದಿಗೆ ವಹಿಸಿಕೊಡಲಾಗಿತ್ತು.
ಅವರು ಆ ಏರಿಯಾಕ್ಕೆ (ಬೀಟ್) ಸಂಬಂಧಿ ಸಿದವರ ಜತೆ ನಿರಂತರ ಸಂಪರ್ಕ ಇಟ್ಟುಕೊಳ್ಳುತ್ತಿದ್ದರು. ಅದಕ್ಕಾಗಿ ವ್ಯಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ರಚಿಸುತ್ತಿದ್ದರು. ಅಗತ್ಯ ಬಿದ್ದಾಗ ನಿರ್ದಿಷ್ಟ ಪ್ರದೇಶದಲ್ಲಿ ಸಭೆ ನಡೆಸುತ್ತಿದ್ದರು. ಇದೀಗ ಈ ರೀತಿಯ ಬೀಟ್ ಸಭೆಗಳನ್ನು ಕಡ್ಡಾಯವಾಗಿ ನಡೆಸಲು ಸೂಚಿಸಲಾಗಿದೆ. ನೂತನ ಪೊಲೀಸ್ ಆಯುಕ್ತರು ಪ್ರತಿ ಬೀಟ್‌ನಲ್ಲಿ ತಿಂಗಳಿಗೆ ಕನಿಷ್ಠ 3 ಸಭೆಗಳು ನಡೆಯಬೇಕು ಎಂದು ಆದೇಶ ನೀಡಿದ್ದು, ಅದರಂತೆ ಬೀಟ್‌ಸಭೆಗಳು ನಡೆಯುತ್ತಿವೆ.
ಶಾಲೆ, ಅಂಗನವಾಡಿ, ಮೈದಾನ ಮೊದಲಾದೆಡೆ ಸಭೆಗಳನ್ನು ನಡೆಸಲಾಗುತ್ತಿದೆ. ಜನರೊಂದಿಗೆ ಸಂವಾದ ಸಾರ್ವಜನಿಕರ ಅಹವಾಲುಗಳನ್ನು ನೇರವಾಗಿ ಆಲಿಸಿ ಅದಕ್ಕೆ ಪರಿಹಾರ ದೊರಕಿಸಲು ಇಂತಹ ಸಭೆಗಳಿಂದ ಸಾಧ್ಯವಾಗುತ್ತಿದೆ. ಅಲ್ಲದೆ ಪೊಲೀಸರಿಗೆ ಅಗತ್ಯವಿರುವ ಸಲಹೆ ಮಾಹಿತಿ ಕೂಡ ಸಭೆಯಿಂದ ಲಭ್ಯವಾಗುತ್ತಿದೆ. ಸಭೆಗೆ ಕೇವಲ ನಿಯೋಜಿತ ಸಿಬಂದಿ ಮಾತ್ರವಲ್ಲದೆ ಆಗಾಗ್ಗೆ ಪೊಲೀಸ್ ಅಧಿಕಾರಿಗಳು ಕೂಡ ತೆರಳಿ ಮೇಲುಸ್ತುವಾರಿ ನೋಡಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಸಿಬಂದಿ ಕೊರತೆ ಸಾಧ್ಯತೆ ಬೀಟ್ ವ್ಯವಸ್ಥೆ ಕಟ್ಟುನಿಟ್ಟು ಮಾಡಿರುವುದರಿಂದ ಪೊಲೀಸರ ಮೇಲಿನ ಒತ್ತಡವೂ ಹೆಚ್ಚಾಗಿದೆ. ಕೆಲವು ಠಾಣೆಗಳಲ್ಲಿ ಸಿಬಂದಿ, ಪಿಎಸ್‌ಐಗಳ ಕೊರತೆ ಇರುವುದರಿಂದ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಸ್ಥಳೀಯ ಠಾಣೆಗಳಿಗೆ ಸವಾಲಾಗಲಿದೆ.
ವೈಯಕ್ತಿಕ ನಿಗಾ ಪ್ರತಿಯೊಂದು ಪೊಲೀಸ್ ಠಾಣೆಯ 1 ಬೀಟ್‌ನಲ್ಲಿ ತಿಂಗಳಲ್ಲಿ ಕನಿಷ್ಠ 3 ಮೀಟಿಂಗ್ ಮಾಡಲು ಸೂಚನೆ ನೀಡಿ ದ್ದೇನೆ. ಅದರ ಬಗ್ಗೆ ನಾನು ವೈಯಕ್ತಿಕವಾಗಿ ಫಾಲೋ ಅಪ್ ಮಾಡುತ್ತೇನೆ. ಠಾಣೆಯ ಹಿರಿಯ ಅಧಿಕಾರಿಗಳು ಕೂಡ ಆಗಾಗ್ಗೆ ಬೀಟ್ ಮೀಟಿಂಗ್‌ಗೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಸಂಪರ್ಕ ಇಟ್ಟುಕೊಳ್ಳುವಂತೆ ಸೂಚನೆ ನೀಡಿದ್ದೇನೆ.
– ಕುಲದೀಪ್ ಕುಮಾರ್.ಆರ್. ಜೈನ್, ಪೊಲೀಸ್ ಆಯುಕ್ತರು, ಮಂಗಳೂರು
ಎಲ್ಲೆಲ್ಲಿ ಎಷ್ಟೆಷ್ಟು?
ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ 42 ಬೀಟ್ ಏರಿಯಾಗಳಿವೆ. ಉಳ್ಳಾಲದಲ್ಲಿ 47, ಕಂಕನಾಡಿ ನಗರದಲ್ಲಿ 64, ಪಣಂಬೂರಿನಲ್ಲಿ 41, ಕಾವೂರಿನಲ್ಲಿ 44, ಬಜಪೆಯಲ್ಲಿ 42, ಸುರತ್ಕಲ್‌ನಲ್ಲಿ 45, ಮುಲ್ಕಿಯಲ್ಲಿ 16, ಮೂಡುಬಿದಿರೆಯಲ್ಲಿ 38, ಮಂಗಳೂರು ಉತ್ತರ ಠಾಣಾ ವ್ಯಾಪ್ತಿಯಲ್ಲಿ 63, ದಕ್ಷಿಣ ಠಾಣೆಯಲ್ಲಿ 64, ಬರ್ಕೆ ಠಾಣಾ ವ್ಯಾಪ್ತಿಯಲ್ಲಿ 44 ಬೀಟ್ ಏರಿಯಾಗಳಿವೆ.
~ಸಂತೋಷ್ ಬೊಳ್ಳೆಟ್ಟು