Advertisement

Mangaluru: ಮೂಕ ಪ್ರಾಣಿಗಳ ಪ್ರಾಣ ಹಿಂಡುವ ಪ್ಲಾಸ್ಟಿಕ್‌!

03:06 PM Oct 22, 2024 | Team Udayavani |

ಮಹಾನಗರ: ಪ್ಲಾಸ್ಟಿಕ್‌ ಮಾನವನ ಮೇಲೆ, ಪ್ರಕೃತಿಯ ಮೇಲೆ ಬೀರುವ ಪರಿಣಾಮ ತುಂಬ ಘೋರ. ಅದೇ ಪ್ಲಾಸ್ಟಿಕ್‌ ಮೂಕ ಪ್ರಾಣಿಗಳ ಜೀವವನ್ನೂ ಹಿಂಡುತ್ತಿದೆ. ನಗರದ ಅಲ್ಲಲ್ಲಿ ಎಸೆದ ಪ್ಲಾಸ್ಟಿಕ್‌ಗಳು ಪ್ರಾಣಿಗಳ ಹೊಟ್ಟೆ ಸೇರಿ ಅಪಾಯಕಾರಿ ರೋಗಕ್ಕೆ ಕಾರಣವಾಗುತ್ತಿದೆ, ಪ್ರಾಣವನ್ನೇ ಹಿಂಡುತ್ತಿದೆ.

Advertisement

ಉಳಿಕೆ ಆಹಾರ, ಕಸವನ್ನು ಪ್ಲಾಸ್ಟಿಕ್‌ ಚೀಲದಲ್ಲಿ ಹಾಕಿ ಕಂಡ ಕಂಡಲ್ಲಿ ಎಸೆಯುವ ಪ್ರವೃತ್ತಿ ನಗರ ಮತ್ತು ಗ್ರಾಮಾಂತರ ಪ್ರದೇಶದ ಎಲ್ಲ ಕಡೆಯೂ ವ್ಯಾಪಕವಾಗಿದೆ. ನಗರದ ರಸ್ತೆ ಬದಿಗಳಲ್ಲಿ, ಮನೆ ಎದುರಲ್ಲಿ, ನಿರ್ಜನ ಪ್ರದೇಶಗಳಲ್ಲಿ ತ್ಯಾಜ್ಯ ರಾಶಿ ಬಿದ್ದಿರುತ್ತದೆ. ಗೋವುಗಳು, ನಾಯಿಗಳು ಈ ಪ್ಲಾಸ್ಟಿಕ್‌ ಚೀಲದೊಳಗಿನ ಆಹಾರವನ್ನು ತಿನ್ನುವ ಭರದಲ್ಲಿ ಪ್ಲಾಸ್ಟಿಕ್‌ ಚೀಲಗಳನ್ನೇ ತಿನ್ನುತ್ತವೆ. ಕಸದ ತೊಟ್ಟಿಗಳಿಗೆ ಬಾಯಿ ಹಾಕುವ ಜಾನುವಾರುಗಳು ಅದರೊಳಗೆ ಪ್ಲಾಸ್ಟಿಕ್‌ನಲ್ಲಿ ಸುತ್ತಿರುವ ಆಹಾರವನ್ನು ಪಡೆಯಲು ಹರಸಾಹಸವನ್ನೇ ಮಾಡುತ್ತವೆ. ಅಂತಿಮವಾಗಿ ಆಹಾರವನ್ನು ಪ್ಲಾಸ್ಟಿಕ್‌ ಸಹಿತ ತಿಂದುಬಿಡುತ್ತವೆ. ಅಂತಿಮವಾಗಿ ಈ ಪ್ಲಾಸ್ಟಿಕ್‌ಗಳು ಜಾನುವಾರುಗಳ ಹೊಟ್ಟೆ ಸೇರಿ ಅನಾರೋಗ್ಯಕ್ಕೆ ಕಾರಣವಾಗಿ ಸಾವೂ ಸಂಭವಿಸುವುದಿದೆ.

ಪ್ಲಾಸ್ಟಿಕ್‌ ಸ್ಲೋ ಪಾಯ್ಸನ್‌
‘ಜಾನುವಾರುಗಳಿಗೆ ಪ್ಲಾಸ್ಟಿಕ್‌ ಅತ್ಯಂತ ಹೆಚ್ಚಿನ ವಿಷಕಾರಿಯಾಗಿದ್ದು, ನಿಧಾನವಾಗಿ ಅವುಗಳ ಸಾವಿಗೆ ಕಾರಣವಾಗುತ್ತಿದೆ. ಜಾನುವಾರುಗಳ ದೇಹದಲ್ಲಿ ಸೇರಿಕೊಂಡ ಪ್ಲಾಸ್ಟಿಕ್‌ ಜೀರ್ಣವಾಗುವುದಿಲ್ಲ. ಕಾಲಕ್ರಮೇಣ 20ರಿಂದ 30 ಕೆಜಿ ಪ್ಲಾಸ್ಟಿಕ್‌ ಹೊಟ್ಟೆ ಸೇರಿ ಹೊಟ್ಟೆಯಲ್ಲಿ ಬಾಲ್‌ ರೀತಿ ಉಂಡೆ ಕಟ್ಟುತ್ತದೆ. ಅಂತಹ ಪ್ಲಾಸ್ಟಿಕ್‌ ಕರುಳಿನಲ್ಲಿ ಬ್ಲಾಕ್‌ ಆಗಿ ಜಾನುವಾರು ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಪ್ರಾಣಿಗಳ ಜೀರ್ಣಕ್ರಿಯೆಗೆ ದೇಹದಲ್ಲಿ ‘ಪ್ರೊಟೋಜೋವ’ ಜೀವಕೋಶ ಮುಖ್ಯ. ಆದರೆ, ಪ್ರಾಣಿಗಳು ಪ್ಲಾಸ್ಟಿಕ್‌ ತಿಂದರೆ ಈ ಪ್ರೊಟೋಜೋವಕ್ಕೆ ಹಾನಿ ಉಂಟಾಗಿ ಜೀರ್ಣಶಕ್ತಿ ಕಡಿಮೆಯಾಗುತ್ತದೆ. ಇದರಿಂದಾಗಿ ಪ್ರಾಣಿಗಳು ದುರ್ಬಲಗೊಂಡು ರೋಗನಿರೋಧಕ ಶಕ್ತಿ ಕುಂದುತ್ತದೆ. ಪ್ಲಾಸ್ಟಿಕ್‌ನಲ್ಲಿರುವ ಪಾಲಿ ಪ್ರೊಫಲಿನ್‌, ಪಾಲಿ ಎಥಲಿನ್‌ಗಳು ಜಾನುವಾರುಗಳ ಹೊಟ್ಟೆಯೊಳಗಿನ ಅಂಗಾಂಗ ನ್ಯೂನ್ಯತೆಗೆ ಕಾರಣವಾಗುತ್ತದೆ. ಮುಖ್ಯವಾಗಿ ಕಿಡ್ನಿ, ಲಿವರ್‌, ಥೈರಾಯ್ಡ ಗ್ರಂಥಿಗಳ ಹಾನಿ, ರಕ್ತಕಣಗಳ ವ್ಯತ್ಯಾಸ ಉಂಟಾಗುತ್ತದೆ. ಇದರಿಂದ ಹಾರ್ಮೋನ್‌ ಉತ್ಪತ್ತಿ ಕಡಿಮೆಯಾಗಿ ಅವುಗಳ ಗರ್ಭದಾರಣೆಯ ಮೇಲೆಯೂ ಪರಿಣಾಮ ಬೀರುತ್ತದೆ’ ಎನ್ನುತ್ತಾರೆ ಪಶುಪಾಲನ ಇಲಾಖೆಯ ಉಪನಿರ್ದೇಶಕ ಡಾ| ಅರುಣ್‌ ಕುಮಾರ್‌ ಶೆಟ್ಟಿ.

‘ಸಾಮಾನ್ಯವಾಗಿ ಮಾರುಕಟ್ಟೆಯಿಂದ ಪ್ಲಾಸ್ಟಿಕ್‌ ತೊಟ್ಟೆಯಿಂದ ಮೀನು ತರುತ್ತಾರೆ. ಮನೆಗೆ ಹೋಗಿ ಆ ತೊಟ್ಟೆಯನ್ನು ಸಾಮಾನ್ಯವಾಗಿ ಹೊರಗಡೆ ಎಸೆಯುತ್ತಾರೆ. ಇಲ್ಲಿಂದಲೇ ಸಮಸ್ಯೆ ಸೃಷ್ಟಿಯಾಗುತ್ತದೆ. ಕೆಲವೊಂದು ನಾಯಿಗಳು ಮೀನಿನ ವಾಸನೆಗೆ ಆ ತೊಟ್ಟೆಯನ್ನೇ ತಿನ್ನುವ ಪ್ರಮೇಯ ಇರುತ್ತದೆ. ಆದ್ದರಿಂದ ತುಂಬಾ ಜಾಗ್ರತೆ ವಹಿಸಬೇಕು’ ಎನ್ನುತ್ತಾರೆ ವೈದ್ಯರು.

Advertisement

ಉತ್ಪಾದನೆ ನಿಲ್ಲಿಸಿ ಸಾಕು
ಪ್ಲಾಸ್ಟಿಕ್‌ ರಕ್ಕಸನ ಬಗ್ಗೆ ಜಾಗೃತಿ ಮೂಡಿ ಸುವ ‘ಸುದಿನ’ದ ಪ್ರಯತ್ನಕ್ಕೆ ದೀರ್ಘ‌ದಂಡ ಪ್ರಣಾಮ. ಅಧಿಕಾರಿಗಳು ಏಕಬಳಕೆ ಪ್ಲಾಸ್ಟಿಕ್‌ ನಿಷೇಧವೆಂದು ನಾಲ್ಕು ದಿನ ನಾಟಕ ಮಾಡಿ ಯಾವುದೋ ಬಡವನ ಗೂಡಂಗಡಿಗೆ ದಾಳಿ ಮಾಡಿ ಅವನಿಗೆ ದಂಡ ವಿಧಿಸಿ ಏನೂ ಪ್ರಯೋಜನವಿಲ್ಲ. ಅದು ಎಲ್ಲಿ ಉತ್ಪತ್ತಿ ಮಾಡುತ್ತಾರೆ ಅಲ್ಲಿಗೆ ಬೀಗ ಜಡಿದರೆ ಮುಗಿಯಿತು. ಆದರೆ ಆಡಳಿತ ದಲ್ಲಿರುವವರು ಅದನ್ನು ಮಾಡುವುದಿಲ್ಲ. ಫ್ಲೆಕ್ಸ್‌ ಬದಲಿಗೆ ಬಟ್ಟೆಯ ಬ್ಯಾನರ್‌ ಬರಲಿ, ಸಮಾರಂಭಗಳಲ್ಲಿ ನೀರಿನ ಬಾಟಲ್‌ ಬಂದ್‌ ಆಗಲಿ.
-ಲೋಕೇಶ್‌ ಕುತ್ತಾರ್‌

ದನ ಮೇಯಲು ಬಿಡುವಾಗ ಎಚ್ಚರ
‘ನಗರ ಪ್ರದೇಶಗಳಲ್ಲಿ ಮೇಯಲು ಹೋಗುವ ದನಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್‌ ಸಿಗುತ್ತಿದೆ. ಬೆಲ್ಲ, ತರಕಾರಿ, ಪ್ಯಾಕೇಜಿಂಗ್‌ ಪ್ಲಾಸ್ಟಿಕ್‌ಗಳಲ್ಲಿ ಇರುವ ವಸ್ತುಗಳನ್ನು ತಿನ್ನುವ ವೇಳೆ ಗೋವುಗಳು ಪ್ಲಾಸ್ಟಿಕ್‌ ಅನ್ನು ಕೂಡ ತಿನ್ನುತ್ತಿದೆ. ದೇಹದೊಳಗೆ ಸ್ವಲ್ಪ ಪ್ರಮಾಣದ ಪ್ಲಾಸ್ಟಿಕ್‌ ಇದ್ದರೆ ಮುನ್ಸೂಚನೆಯೇ ಸಿಗುವುದಿಲ್ಲ. ಆದರೆ, ಜಾಸ್ತಿ ಪ್ರಮಾಣದಲ್ಲಿ ಪ್ಲಾಸ್ಟಿಕ್‌ ಇದ್ದರೆ ಗೋವುಗಳ ಜಠರದಲ್ಲಿ ಸೋಂಕಿಗೆ ತುತ್ತಾಗಿ ಜೀರ್ಣಾಂಗದ ಸಮಸ್ಯೆ ಕಂಡು ಬರುತ್ತದೆ. ಇತ್ತೀಚೆಗೆ ಈಶ್ವರಮಂಗಲ ಬಳಿ ದನದ ಹೊಟ್ಟೆಯಿಂದ 50 ಕೆ.ಜಿ. ಪ್ಲಾಸ್ಟಿಕ್‌ ಹೊರ ತೆಗೆಯಲಾಗಿದೆ . ಇದರಲ್ಲಿ ಸೋಡಾ ಬಾಟಲ್‌ ಕ್ಯಾಪ್‌, ನಾಣ್ಯಗಳು, ಹೇರ್‌ಪಿನ್‌, ತಂತಿಗಳು ಇತ್ತು ಎಂದು ಸುಳ್ಯದ ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ)ಡಾ| ನಿತಿನ್‌ ಪ್ರಭು ಅವರು ‘ಉದಯವಾಣಿಗೆ ತಿಳಿಸಿದ್ದಾರೆ.

ಕರುಣಾಜನಕ ಕಥೆಗಳು

ಘಟನೆ-1
ಮೀನಿನ ಉದರದಲ್ಲಿತ್ತು ಪ್ಲಾಸ್ಟಿಕ್‌
ಮಂಗಳೂರಿನಲ್ಲಿ ಬಲೆಗೆ ಸಿಕ್ಕಿದ ಮೀನಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್‌ ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಅತ್ತಾವರದ ಮೀನು ಮಾರಾಟದ ಮಳಿಗೆಯ ಸಿಬಂದಿ ಮುರು ಮೀನು ಕತ್ತರಿಸಿ ಶುಚಿಗೊಳಿಸುತ್ತಿದ್ದ ವೇಳೆ ಮೀನಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್‌ ಪತ್ತೆಯಾಗಿತ್ತು. ಹವಾಮಾನ ಬದಲಾವಣೆ, ಮಾಲಿನ್ಯ ಹಾಗೂ ಪ್ಲಾಸ್ಟಿಕ್‌ನಿಂದ ಜಲಚರಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವುದು ಆತಂಕದ ಮುನ್ಸೂಚನೆ ಎಂದು ವಿಜ್ಞಾನಿಗಳು ಹೇಳಿದ್ದರು.

ಘಟನೆ-2
ಗೋವು-ಕರುವಿನ ಉದರದಲ್ಲಿ ಪ್ಲಾಸ್ಟಿಕ್‌
ಕೆಲವು ವರ್ಷಗಳ ಹಿಂದೆ ಉಡುಪಿಯ ಮಣಿಪಾಲದ ಈಶ್ವರ ನಗರದಲ್ಲಿ ಅಪಘಾತದಲ್ಲಿ ಒಂದು ಗೋವು ಮತ್ತು ಕರು ಮೃತಪಟ್ಟಿತ್ತು. ಆ ವೇಳೆ ಮರಣೋತ್ತರ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ದನದ ಹೊಟ್ಟೆಯಲ್ಲಿ ಕೆ.ಜಿ.ಗಟ್ಟಲೆ ಪ್ಲಾಸ್ಟಿಕ್‌ ಸಹಿತ ತ್ಯಾಜ್ಯ ಇರುವುದು ಕಂಡುಬಂದಿತ್ತು. ಇದು ಆತಂಕಕ್ಕೆ ಕಾರಣವಾಗಿತ್ತು.

ಘಟನೆ-3
ಹಾವುಗಳಿಗೂ ಕಂಟಕ
ಉರಗಗಳ ಉದರದಲ್ಲಿ ಪ್ಲಾಸ್ಟಿಕ್‌ ಸೇರಿಕೊಂಡಿರುವ ಘಟನೆಯೂ ಜಿಲ್ಲೆಯಲ್ಲಿ ನಡೆದಿದೆ. ಕೆಲವು ತಿಂಗಳುಗಳ ಹಿಂದೆ ಬಂಟ್ವಾಳ ಕಾವಳ ಪಡೂರು ಬಳಿ ನಾಗರಹಾವೊಂದರ ಶಸ್ತ್ರಚಿಕಿತ್ಸೆ ವೇಳೆ ಹೊಟ್ಟೆಯಲ್ಲಿ ಪ್ಲಾಸ್ಟಿಕ್‌ ಡಬ್ಬ ಇರುವುದು ಪತ್ತೆಯಾಗಿತ್ತು.

ಘಟನೆ-4
ಮೊಸಳೆಯ ಹೊಟ್ಟೆಯಲ್ಲೂ ಪ್ಲಾಸ್ಟಿಕ್‌
ಕೆಲವು ತಿಂಗಳುಗಳ ಹಿಂದೆ ಕಡಬ ತಾಲೂಕಿನ ಪುಳಿಕುಕ್ಕು ಎಂಬಲ್ಲಿ ಕುಮಾರಧಾರಾ ನದಿಯಲ್ಲಿ ಪತ್ತೆಯಾದ ಮೃತ ಮೊಸಳೆಯ ಸಾವಿಗೆ ಪ್ಲಾಸ್ಟಿಕ್‌ ಕಾರಣ ಎಂಬ ವರದಿ ಮರಣೋತ್ತರ ಪರೀಕ್ಷೆಯ ವೇಳೆ ದೃಢಪಟ್ಟಿತ್ತು. ಮೃತ ಮೊಸಳೆಯ ಹೊಟ್ಟೆಯಲ್ಲಿ ಸುಮಾರು 1 ಕೆ.ಜಿ.ಗೂ ಅಧಿಕ ಪ್ಲಾಸ್ಟಿಕ್‌ ಮತ್ತಿತರ ತ್ಯಾಜ್ಯಗಳು ಪತ್ತೆಯಾಗಿತ್ತು. ಮೊಸಳೆಯ ಹೊಟ್ಟೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿದ್ದ ಕೋಳಿ ತ್ಯಾಜ್ಯ, ಮಕ್ಕಳಿಗೆ ಬಳಸುವ ಪ್ಯಾಡ್‌ಗಳು ಪತ್ತೆಯಾಗಿತ್ತು. ಈ ತ್ಯಾಜ್ಯ ಮೊಸಳೆ ಹೊಟ್ಟೆಯಲ್ಲಿ ಜೀರ್ಣಗೊಳ್ಳದೆ ಮೊಸಳೆ ಮೃತಪಟ್ಟಿತ್ತು.

ಪ್ಲಾಸ್ಟಿಕ್‌ ನಿಯಂತ್ರಣ
ನಿಮ್ಮ ತಂತ್ರ ಹಂಚಿಕೊಳ್ಳಿ
ಪ್ಲಾಸ್ಟಿಕ್‌ ನಿಯಂತ್ರಣದ ಬಗ್ಗೆ ಅನೇಕ ಸಂಘಟನೆಗಳು, ವಿದ್ಯಾಸಂಸ್ಥೆಗಳು ಧನಾತ್ಮಕ ಕಾರ್ಯತಂತ್ರ ರೂಪಿಸಿವೆ. ಅಂತಹ ಕಾರ್ಯಗಳಿದ್ದಲ್ಲಿ ಹಂಚಿಕೊಳ್ಳಬಹುದು.
ವಾಟ್ಸಪ್‌: 9900567000

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next