Advertisement

Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್‌ ದಂಡ ಪಾವತಿ

02:39 AM Dec 19, 2024 | Team Udayavani |

ಮಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಯುಪಿಐನಲ್ಲಿಯೇ(ಡಿಜಿಟಲ್‌ ಪೇಮೆಂಟ್‌) ದಂಡ ಪಾವತಿಸುವ ಅವಕಾಶ ನೀಡಲಾಗಿದೆ.
ರಾಜ್ಯಾದ್ಯಂತ ಇದು ಜಾರಿಗೆ ಬಂದಿದ್ದು, ಪೊಲೀಸರಲ್ಲಿರುವ ಉಪಕರಣದಲ್ಲಿ ಸ್ಕ್ಯಾನ್‌ ಮಾಡಿ ದಂಡ ಪಾವತಿಸಬಹುದಾಗಿದೆ. ಇದುವರೆಗೆ ನಗದು ರೂಪದಲ್ಲಿ ಮಾತ್ರ ದಂಡ ಪಾವತಿಸಲು ಅವಕಾಶವಿತ್ತು.

Advertisement

ಗೂಗಲ್‌ ಪೇ, ಫೋನ್‌ ಪೇ ಮೊದಲಾದ ಯುಪಿಐ ಮೂಲಕವೂ ದಂಡ ಪಾವತಿಗೆ ಅವಕಾಶ ನೀಡಲಾಗಿದ್ದು, ಮಂಗಳೂರು ನಗರದಲ್ಲಿ ಇದು ಆರಂಭಿಕ ಹಂತದಲ್ಲಿದೆ. ಇದಕ್ಕಾಗಿ ಹೊಸ ಉಪಕರಣಗಳನ್ನು ಒದಗಿಸಲಾಗಿದೆ. ಕೆಲವು ತಾಂತ್ರಿಕ ಕಾರಣಗಳಿಂದ ಪಾವತಿ ವಿಳಂಬವಾಗುತ್ತಿದೆ. ಮುಂದೆ ಸಮರ್ಪಕವಾಗಿ ಅನುಷ್ಠಾನವಾಗಲಿದೆ ಎಂದು ಮಂಗಳೂರು ನಗರ ಸಂಚಾರ ವಿಭಾಗದ ಎಸಿಪಿ ನಜ್ಮಾ ಫಾರೂಕಿ ತಿಳಿಸಿದ್ದಾರೆ.

ಮದ್ಯಸೇವನೆ ಕೇಸಿಗೆ ವರ್ಚುವಲ್‌ ನೋಟಿಸ್‌!
ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ ಬಳಿಕ ಚಾಲಕರ ಮೊಬೈಲ್‌ಗೆ ವರ್ಚುವಲ್‌ ಕೋರ್ಟ್‌ ಮೂಲಕ ನೋಟಿಸ್‌ ರವಾನಿಸುವ ಹೊಸ ವ್ಯವಸ್ಥೆಯನ್ನೂ ಜಾರಿಗೊಳಿಸಲಾಗಿದೆ. “ಮದ್ಯಸೇವಿಸಿ ವಾಹನ ಚಲಾಯಿಸಿದ ಪ್ರಕರಣ’ಗಳ (ಡ್ರಂಕ್‌ ಆ್ಯಂಡ್‌ ಡ್ರೈವ್‌) ತ್ವರಿತ ವಿಲೇವಾರಿಯ ಉದ್ದೇಶದಿಂದ ವರ್ಚುವಲ್‌ ನೋಟಿಸ್‌ ನೀಡಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮದ್ಯ ಸೇವಿಸಿ ವಾಹನ ಚಲಾಯಿಸಿದ ಪ್ರಕರಣಗಳಲ್ಲಿ ದಂಡ ವಸೂಲಿ ಮಾಡುವ ಅಧಿಕಾರ ಈ ಹಿಂದೆಯೂ ಪೊಲೀಸರಿಗೆ ಇರಲಿಲ್ಲ. ಅವರು ಮದ್ಯಸೇವನೆ ಬಗ್ಗೆ ಚಾಲಕರನ್ನು ತಪಾಸಣೆಗೊಳಪಡಿಸಿ ಅವರಿಗೆ ನೋಟಿಸ್‌ ನೀಡುತ್ತಿದ್ದರು. ಚಾಲಕರು ಅನಂತರ ನ್ಯಾಯಾಲಯದ ಮೂಲಕವೇ ದಂಡ ಪಾವತಿಸಬೇಕಾಗಿತ್ತು. ಈಗ ಮದ್ಯಸೇವಿಸಿರುವುದಕ್ಕೆ ಕೇಸು ದಾಖಲಾದ ಕೆಲವೇ ಗಂಟೆಗಳಲ್ಲಿ ವರ್ಚುವಲ್‌ ನೋಟಿಸ್‌ ಚಾಲಕರ ಮೊಬೈಲ್‌ಗೆ ಬರಲಿದೆ. ಅವರು ಯುಪಿಐ ಮೂಲಕ ದಂಡದ ಮೊತ್ತ ಪಾವತಿಸಬಹುದಾಗಿದೆ.

ದಕ್ಷಿಣ ಕನ್ನಡ, ಉಡುಪಿಯಲ್ಲೂ ಜಾರಿ
ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಯುಪಿಐನಲ್ಲೇ ದಂಡ ಪಾವತಿಸಲು ಅವಕಾಶ ನೀಡಲಾಗಿದೆ. ಪೊಲೀಸರಲ್ಲಿರುವ ಉಪಕರಣದಲ್ಲಿ ಸ್ಕ್ಯಾನ್‌ ಮಾಡುವ ಮೂಲಕ ಪಾವತಿ ಮಾಡಬಹು ದಾಗಿದೆ. ಇದನ್ನು ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲೂ ಅನುಷ್ಠಾನಗೊಳಿಸಲಾಗುತ್ತಿದೆ.
– ಯತೀಶ್‌ ಎನ್‌., ದ.ಕ ಎಸ್‌ಪಿ,  ಡಾ. ಕೆ.ಅರುಣ್‌, ಉಡುಪಿ ಎಸ್‌ಪಿ

Advertisement

 

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next