ಮಂಗಳೂರು: ಪಾಲಕ್ಕಾಡ್ ರೈಲ್ವೇ ವಿಭಾಗ ಕಚೇರಿಯಲ್ಲಿ 162ನೇ ಬಳಕೆದಾರರ ಸಲಹಾ ಸಮಿತಿ ಸದಸ್ಯರ ಸಭೆ ಶುಕ್ರವಾರ ನಡೆಯಿತು.
ಪಾಲಕ್ಕಾಡ್ ವಿಭಾಗದಡಿ ಬರುವ ಮಂಗಳೂರು ಪ್ರದೇಶದ ಹಲವು ಬೇಡಿಕೆ, ಸಮಸ್ಯೆಗಳನ್ನು ಈ ಭಾಗದ ಬಳಕೆದಾರರ ಸಲಹಾ ಸಮಿತಿಯ ಸದಸ್ಯ ಹಾಗೂ ಪಶ್ಚಿಮ ಕರಾವಳಿ ರೈಲು ಯಾತ್ರಿಕರ ಸಂಘದ ಅಧ್ಯಕ್ಷ ಹನುಮಂತ ಕಾಮತ್ ಮಂಡಿಸಿ, ಶೀಘ್ರ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಶನಿವಾರ ಸಂಜೆಯ ಹೊತ್ತಿಗೆ ಮಂಗಳೂರು ಸೆಂಟ್ರಲ್‌ನ ಪ್ಲಾಟ್‌ಫಾರ್ಮ್ 2ರಲ್ಲಿ ರೈಲು ನಿಲ್ಲಿಸಲು ಸ್ಥಳಾವಕಾಶ ಇರುವುದರಿಂದ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ವಾರಕ್ಕೊಮ್ಮೆ ಯಶವಂತಪುರ ಜಂಕ್ಷನ್‌ನಿಂದ ಮಂಗಳೂರು ಜಂಕ್ಷನ್ ವರೆಗೆ ಸಂಚಾರ ನಡೆಸುವ ಹಗಲು ರೈಲನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸುವುದು ಹಾಗೂ ಮರುದಿನ (ರವಿವಾರ) ಬೆಳಗ್ಗೆ 6.40ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಮಂಗಳೂರು ಜಂಕ್ಷನ್‌ಗೆ 6.55ಕ್ಕೆ ತಲುಪಿ ಪ್ರಸ್ತುತ ಇರುವ ವೇಳಾಪಟ್ಟಿಯಂತೆ ತನ್ನ ಮುಂದಿನ ಪ್ರಯಾಣ ಮುಂದುವರಿಸುವಂತೆ ಮಾಡಬೇಕು ಎಂದು ಮನವಿ ಮಾಡಿದರು.
ಮಂಗಳೂರು ಸೆಂಟ್ರಲ್‌ನಲ್ಲಿ ಹೊಸ 4 ಮತ್ತು 5ನೇ ಪ್ಲಾಟ್ ಫಾರಂಗಳ ಕಾರ್ಯಾಚರಣೆ ಆರಂಭಗೊಂಡ ನಂತರ ಕೊಂಕಣ ಮತ್ತು ಬೆಂಗಳೂರು-ಮಂಗಳೂರು ಮಾರ್ಗಗಳಲ್ಲಿ ಹೆಚ್ಚು ರೈಲುಗಳನ್ನು ಆರಂಭಿಸಬೇಕು. ಈಗ ಮಂಗಳೂರು ನಗರದಿಂದ ರಾಜ್ಯದ ಇತರ ನಗರಗಳಾದ ಗುಲ್ಬರ್ಗ, ಹೊಸಪೇಟೆ, ಬೆಳಗಾವಿ ಹಾಗೂ ಇತರರೆಡೆಗೆ ರೈಲು ಸಂಪರ್ಕ ಕಲ್ಪಿಸಿದರೆ ಉತ್ತಮ ಎಂದು ಆಗ್ರಹಿಸಿದರು.
ಸೆಂಟ್ರಲ್‌ನಲ್ಲಿ ರೈಲುಗಳ ಆಗಮನ/ನಿರ್ಗಮನದ ಮಾಹಿತಿ ಹಾಗೂ ರೈಲು ಯಾವ ಪ್ಲಾಟ್‌ಫಾರ್ಮ್ ನಲ್ಲಿ ನಿಲ್ಲುತ್ತದೆ ಎಂಬ ಮಾಹಿತಿ ಒದಗಿಸಲು ಡಿಜಿಟಲ್ ಕೋಚ್ ಡಿಸ್ಪೆ ಬೋರ್ಡ್ ವ್ಯವಸ್ಥೆಯನ್ನು ಒದಗಿಸುವುದು. ಸೆಂಟ್ರಲ್‌ನಲ್ಲಿ ಹೆಚ್ಚುವರಿ ಪ್ಲಾಟ್‌ಫಾರ್ಮ್ ನ ನಿರ್ಮಾಣ ಕಾರ್ಯ ತ್ವರಿತಗೊಳಿಸಬೇಕು. ಬಳಿಕ ಮಂಗಳೂರು ಜಂಕ್ಷನ್ – ಮುಂಬಯಿ ಸಿಎಸ್‌ಟಿ ಎಕ್ಸ್‌ಪ್ರೆಸ್ ಮತ್ತು ಮಂಗಳೂರು ಜಂಕ್ಷನ್ – ವಿಜಯಪುರ ಎಕ್ಸ್‌ಪ್ರೆಸ್ ಹಾಗೂ ಮಂಗಳೂರು ಜಂಕ್ಷನ್ – ಯಶವಂತಪುರ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ಅನ್ನು ಮಂಗಳೂರು ಸೆಂಟ್ರಲ್‌ವರೆಗೆ ವಿಸ್ತರಿಸಬೇಕು ಹೆಚ್ಚುವರಿ ರೈಲು ಗಾಡಿಗಳು ತಂಗಲು ಅನುಕೂಲ ಕಲ್ಪಿಸುವ ದೃಷ್ಟಿಯಿಂದ, 5ನೇ ಪ್ಲಾಟ್‌ಫಾರ್ಮ್ ಹಳಿಯ ಪಕ್ಕದಲ್ಲಿ ಒಂದು ಹೆಚ್ಚುವರಿ ಸ್ಟೇಬಲಿಂಗ್ ಲೈನ್ ಅಳವಡಿಸಬೇಕು.
ಸೆಂಟ್ರಲ್‌ನ ಬೇ ಲೈನ್ ಪ್ಲಾಟ್‌ಫಾರ್ಮ್ ನ ಈಗಿರುವ ಉದ್ದವನ್ನು ಹೆಚ್ಚಿಸಿ, 16 ಕೋಚ್ ರೈಲು ಗಾಡಿಗಳ ತಂಗುವ ಸಾಮರ್ಥ್ಯಕ್ಕೆ ಏರಿಸಬೇಕು. 2ನೇ/3ನೇ ಪ್ಲಾಟ್‌ಫಾರ್ಮ್ ನಲ್ಲಿರುವ ಶೌಚಾಲಯವನ್ನು ಈಗ ದುರಸ್ತಿ ಸಲುವಾಗಿ ಬಂದ್ ಮಾಡಿದ್ದು, ಇದನ್ನು ಸಾರ್ವಜನಿಕ ಬಳಕೆಗಾಗಿ ಮತ್ತೆ ತೆರೆಯುವುದು ಎಂದು ಆಗ್ರಹಿಸಿದ್ದಾರೆ.