ಮಹಾನಗರ: ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದಕ್ಕೆ ಸಂಪರ್ಕ ಕಲ್ಪಿಸುವ ಬೊಂದೇಲ್- ಕಾವೂರು ರಸ್ತೆಯಲ್ಲಿ ಸೂಕ್ತ ಫುಟ್ಪಾತ್ ವ್ಯವಸ್ಥೆ ಇಲ್ಲದೆ ಪಾದಚಾರಿಗಳು ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ.
ಅತೀ ಹೆಚ್ಚು ವಾಹನ ಸಂಚಾರ ಇರುವ ರಸ್ತೆ ಇದಾಗಿದ್ದು, ಬಸ್, ಲಾರಿಗಳು ಸಹಿತ ವಿವಿಧ ಘನ ವಾಹನಗಳು, ಕಾರು, ಆಟೋಗಳು ಕೂಡ ಈ ರಸ್ತೆಯಲ್ಲಿ ಸಂಚರಿಸುತ್ತವೆ. ಬಹುತೇಕ ವಾಹನಗಳು ವೇಗವಾಗಿ ಸಾಗುವುದರಿಂದ ಪಾದಚಾರಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ.
ರಸ್ತೆಬದಿಯಲ್ಲಿ ಹುಲ್ಲು ಪೊದೆಗಳು ಕೂಡ ಬೆಳೆದಿದೆ. ಇದರಿಂದಾಗಿ ಪಾದಚಾರಿಗಳು ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಹಿರಿಯರು ಸೇರಿದಂತೆ ಸಾಕಷ್ಟು ಮಂದಿ ಈ ರಸ್ತೆಯಲ್ಲಿ ಸಾಗುತ್ತಾರೆ. ಆದ್ದರಿಂದ ಅಪಾಯಕಾರಿಯಾಗಿ ಪರಿಣಮಿಸಿದೆ.
ರಸ್ತೆ ಹಾಗೂ ಪಕ್ಕದ ಆವರಣ ಗೋಡೆಯ ನಡುವೆ ಕೆಲವೆಡೆ ಒಂದು ಅಡಿಗಿಂತಲೂ ಕಡಿಮೆ ಸ್ಥಳವಿದ್ದು, ಜತೆಗೆ ವಿದ್ಯುತ್ ಕಂಬಗಳೂ ಇವೆ. ವಾಹನಗಳನ್ನು ಪಾರ್ಕ್ ಕೂಡ ಮಾಡುವುದರಿಂದ ಪಾದಚಾರಿಗಳಿಗೆ ಸಂಚರಿಸಲು ಸಮಸ್ಯೆ ಯಾಗಿದೆ. ಇಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿ ದಶಕಗಳು ಕಳೆದರೂ ಇನ್ನೂ ಫುಟ್ಪಾತ್ ನಿರ್ಮಾಣ ಮಾಡದಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನಾದರೂ ಈ ಬಗ್ಗೆ ಗಮನ ಹರಿಸಿ ಸೂಕ್ತ ಫುಟ್ಪಾತ್ ನಿರ್ಮಾಣ ಮಾಡಬೇಕು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುವುದು ಮಾತ್ರವಲ್ಲದೆ ರಸ್ತೆಯ ಅಂದವೂ ಹೆಚ್ಚಾಗಲಿದೆ ಎನ್ನುತ್ತಾರೆ ಸ್ಥಳೀಯರು.