Advertisement

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

02:18 AM Nov 24, 2024 | Team Udayavani |

ಮಂಗಳೂರು: ವಕ್ಫ್ ಆಸ್ತಿ ಹಾಗೂ ಬಿಪಿಎಲ್‌ ಕಾರ್ಡ್‌ ರದ್ದು ವಿಚಾರವಾಗಿ ರಾಜ್ಯ ಕಾಂಗ್ರೆಸ್‌ ಸರಕಾರ ಯಾವುದೇ ತಪ್ಪೆಸಗಲಿಲ್ಲ. ಕೇವಲ ಉಪಚುನಾವಣೆಗಾಗಿ ಬಿಜೆಪಿ ಜನರನ್ನು ತಪ್ಪು ದಾರಿಗೆಳೆಯುವ ಹುನ್ನಾರ ಮಾಡಿದ್ದು, ಅದರಲ್ಲಿ ವೈಫಲ್ಯ ಕಂಡಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್‌ ಆರ್‌. ಹೇಳಿದ್ದಾರೆ.

Advertisement

ದ.ಕ. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಟಿ ಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗೊಂದಲ ಸೃಷ್ಟಿಸಲು ಮುಂದಾದ ಬಿಜೆಪಿಯವರಿಗೆ ಉಪಚುನಾವಣೆಯಲ್ಲಿ ಜನರು ಸರಿಯಾದ ಉತ್ತರ ನೀಡಿದ್ದಾರೆ ಎಂದರು. ಬಿಪಿಎಲ್‌ ಪಡಿತರ ಚೀಟಿಗಳನ್ನು ಆರ್ಥಿಕವಾಗಿ ಹಿಂದುಳಿದ ಮಾನದಂಡ ದಂತೆ ನೀಡಬೇಕಾಗಿದ್ದು, ಅನರ್ಹರಿಗೆ ನೀಡಿರುವ ಕಾರ್ಡ್‌ಗಳನ್ನು ಮಾತ್ರವೇ ರದ್ದುಪಡಿಸಲಾಗುತ್ತದೆ.

ಒಂದು ವೇಳೆ ಪಡಿತರ ಚೀಟಿಗಳ ಪರಿಷ್ಕರಣೆಯ ವೇಳೆ ಅಧಿಕಾರಿಗಳ ತಪ್ಪಿನಿಂದ ಏನೇ ಅಂತಹ ಸಮಸ್ಯೆ ಆಗಿದ್ದರೂ ಅದನ್ನು ಸರಕಾರ ಸರಿ ಮಾಡುವ ಕೆಲಸ ಮಾಡಲಿದೆ. ಕೇಂದ್ರ ಸರಕಾರ 5.80 ಕೋಟಿ ಇಂತಹ ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸಿದೆ. ಅದರ ಬಗ್ಗೆ ಚಕಾರ ವೆತ್ತದ ಬಿಜೆಪಿ ನಾಯಕರು ರಾಜ್ಯದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು.

ವಕ್ಫ್ ಆಸ್ತಿ ಬಗ್ಗೆಯೂ ವಿನಾ ಕಾರಣ ಗೊಂದಲ ಸೃಷ್ಟಿಸುತ್ತಿರುವ ಬಿಜೆಪಿ ನಾಯಕರು 2019ರಲ್ಲಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವಿದ್ದಾಗ 226 ನೋಟಿಸ್‌ ನೀಡಿರುವುದನ್ನು ಮರೆತಿದ್ದಾರೆ. ಇದು ಪ್ರಕ್ರಿಯೆಯೇ ಹೊರತು ಯಾವುದೇ ಕಾರಣಕ್ಕೂ ರೈತರು, ದೇವಸ್ಥಾನ, ಮಠ ಮಂದಿರಗಳ ಒಂದಿಂಚೂ ಜಾಗವನ್ನು ಕೂಡ ಸಾಕ್ಷ್ಯ ಇಲ್ಲದೆ ವಕ್ಫ್ಗೆ ಹಸ್ತಾಂತರಿಸುವ ಕೆಲಸವನ್ನು ಸಿದ್ಧರಾಮಯ್ಯ ನೇತೃತ್ವದ ಸರಕಾರ ಮಾಡಿಲ್ಲ ಎಂದರು.

ಸಂಸದರ ಕಾರ್ಯಕ್ಕೆ ಬೆಂಬಲ
ಜಿಲ್ಲೆಯ ನೂತನ ಸಂಸದ ಬ್ರಿಜೇಶ್‌ ಚೌಟ ಅವರು ಪರದೇಶದಲ್ಲಿರುವ ನಮ್ಮೂರಿನವರಿಂದ ಹೂಡಿಕೆ ಮಾಡಿಸುವ ಕಾರ್ಯವನ್ನು ನಾನು ಅಭಿನಂದಿಸುತ್ತೇನೆ. ಚುನಾವಣ ಪ್ರಣಾಳಿಕೆಯಲ್ಲಿ ನನ್ನ ಭರವಸೆಗಳಲ್ಲಿ ಇದೂ ಸೇರಿತ್ತು ಎಂದು ಪದ್ಮರಾಜ್‌ ಹೇಳಿದರು. ಮಾಜಿ ಮೇಯರ್‌ ಶಶಿಧರ ಹೆಗ್ಡೆ, ಪ್ರಮುಖ ರಾದ ಶಬ್ಬೀರ್‌, ಹೇಮಂತ್‌ ಗರೋಡಿ, ಸಲೀಂ, ದುರ್ಗಾ ಪ್ರಸಾದ್‌, ಇಮ್ರಾನ್‌, ಹಬೀಬ್‌ ಉಪಸ್ಥಿತರಿದ್ದರು.

Advertisement

ಕಾಂಗ್ರೆಸ್‌ ಗೆಲುವಿಗೆ ಜನಾರ್ದನ ಪೂಜಾರಿ ಹರ್ಷ
ಬಂಟ್ವಾಳ: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳು ಹಾಗೂ ಕೇರಳದ ವಯನಾಡ್‌ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿರುವುದಕ್ಕೆ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಗೆಲುವಿನ ಮೂಲಕ ಗಾಂಧಿ ಕುಟುಂಬದ ಮತ್ತೂಬ್ಬ ಮಹಿಳಾ ನಾಯಕಿ ಲೋಕಸಭೆ ಪ್ರವೇಶಿಸಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಸರಕಾರ ಜನತೆಗೆ ನೀಡಿದ ಗ್ಯಾರಂಟಿ ಯೋಜನೆಗಳು, ಉತ್ತಮ ಆಡಳಿತದಿಂದ ಮತದಾರರು ಕಾಂಗ್ರೆಸ್‌ ಪಕ್ಷದ ಮೇಲೆ ನಂಬಿಕೆ ಇಟ್ಟು ಮತ ಚಲಾಯಿಸಿದ ಪರಿಣಾಮ ಎಲ್ಲ ಮೂರು ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲುವಂತಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next