ಕಾಸರಗೋಡು: ಮಂಗಳೂರು ನಾಗುರಿಯಲ್ಲಿ ನ.19 ರಂದು ನಡೆದ ಕುಕ್ಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸರಗೋಡು ಜಿಲ್ಲೆಯ ಕೆಲವರಿಗೆ ನಂಟು ಸಾಧ್ಯತೆಯ ಶಂಕೆಯ ಹಿನ್ನೆಲೆಯಲ್ಲಿ ಎನ್.ಐ.ಎ. ತಂಡ ತನಿಖೆಯನ್ನು ಕಾಸರಗೋಡಿಗೂ ವಿಸ್ತರಿಸುವ ಸಾಧ್ಯತೆಯಿದೆ.
ಇದೇ ಶಂಕೆಯಿಂದ ಕಾಸರಗೋಡು ಜಿಲ್ಲೆಯ ಪೊಲೀಸರೂ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಕುಕ್ಕರ್ ಪ್ರಕರಣದಿಂದ ಗಾಯಗೊಂಡಿರುವ ಆರೋಪಿ ಉಗ್ರ ಮೊಹಮ್ಮದ್ ಶಾರೀಕ್ ಚೇತರಿಸುತ್ತಿದ್ದು, ಆತನನ್ನು ಎನ್‌ಐಎ ಸಮಗ್ರ ತನಿಖೆ ನಡೆಸಲಿದೆ.
ವಿಧ್ವಂಸಕ ಕೃತ್ಯಕ್ಕಾಗಿ ಹಣ ಸಂಗ್ರಹಿಸಲು ಕೇರಳದಲ್ಲಿ ಈ ಹಿಂದೆ ಶಾರೀಕ್ ಕೊಚ್ಚಿಯಲ್ಲಿ ಮಾದಕ ದ್ರವ್ಯ ವ್ಯವಹಾರವನ್ನೂ ನಡೆಸಿದ್ದನೆಂಬ ಮಾಹಿತಿಯೂ ಪೊಲೀಸರಿಗೆ ಲಭಿಸಿದೆ.
ಕಾಸರಗೋಡು ಜಿಲ್ಲೆಯ ಚಂದೇರಾ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಯುವತಿಯರೂ ಸಹಿತ ಸುಮಾರು 10 ರಷ್ಟು ಮಂದಿ ಕೇರಳದಿಂದ ವಿದೇಶಕ್ಕೆ ಹೋಗಿ ಅಲ್ಲಿ ಸಿರಿಯಾ ಮತ್ತು ಅಪಘಾನಿಸ್ತಾನದಲ್ಲಿರುವ ಜಾಗತಿಕ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್(ಐಎಸ್) ಗೆ ಸೇರಿದ್ದರು. ಈ ಪೈಕಿ ಕೆಲವರು ದಾಳಿಯಲ್ಲಿ ಸಾವಿಗೀಡಾಗಿದ್ದರು. ಇನ್ನೂ ಕೆಲವರು ಅಪಘಾನಿಸ್ತಾನದ ಕಾರಾಗೃಹದಲ್ಲಿದ್ದಾರೆ.
Related Articles
ಈ ಹಿನ್ನೆಲೆಯಲ್ಲಿ ಈ ತಂಡಕ್ಕೆ ಸೇರಿದ ಮಂದಿಯೊಂದಿಗೆ ಮಂಗಳೂರು ಕುಕ್ಕರ್ ಪ್ರಕರಣದೊಂದಿಗೆ ಯಾವುದಾದರೂ ರೀತಿಯ ನಂಟು ಇದ್ದಿರಬಹುದೆಂಬ ಬಲವಾದ ಶಂಕೆ ತನಿಖಾ ತಂಡ ಹೊಂದಿದೆ.