Advertisement

ಜ. 21, 25: ಉದ್ಯೋಗ ಮೇಳ, ಉಜ್ವಲ ಸಮಾವೇಶ

04:37 AM Jan 16, 2019 | |

ಮಂಗಳೂರು: ಕೇಂದ್ರ ಕೌಶಲ ಅಭಿವೃದ್ಧಿ ಸಚಿವಾಲಯ ನಗರದಲ್ಲಿ ಜ. 21ರಂದು ಉದ್ಯೋಗ ಮೇಳ ಹಾಗೂ ಜ. 25 ರಂದು ಬಿ.ಸಿ ರೋಡಿನಲ್ಲಿ ಉಜ್ವಲ ಯೋಜನೆಯ 2 ನೇ ಹಂತದ ಫಲಾನುಭವಿಗಳ ಸಮಾವೇಶ ಏರ್ಪಡಿಸಿದೆ. 
ಕೆನರಾ ಕಾಲೇಜು ಮೈದಾನದಲ್ಲಿ ನಡೆಯುವ ಉದ್ಯೋಗ ಮೇಳವನ್ನು ಕೇಂದ್ರ ಕೌಶಲ ಅಭಿವೃದ್ಧಿ ಸಚಿವ
ಅನಂತ್‌ ಕುಮಾರ್‌ ಹೆಗಡೆ ಉದ್ಘಾಟಿಸುವರು. ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸಲಿವೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

Advertisement

ಉಜ್ವಲ ಯೋಜನೆಯ ಪ್ರಥಮ ಹಂತದಲ್ಲಿ 2011ರ ಜನಗಣತಿಯಲ್ಲಿ ಗುರುತಿಸಲ್ಪಟ್ಟ ಜಿಲ್ಲೆಯ 42 ಸಾವಿರ ಅರ್ಹ ಬಡಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡಲಾಗಿತ್ತು. ಇದೀಗ ಉಜ್ವಲಾ- 2ರಡಿ ಉಳಿದ ಅರ್ಹರಿಗೆ ಜ. 25ರಂದು ಬಿ.ಸಿ.ರೋಡು ನಾರಾಯಣ ಗುರು ವೃತ್ತದ ಬಳಿ ನಡೆಯುವ ಸಮಾವೇಶದಲ್ಲಿ ವಿತರಿಸಲಾಗುವುದು. ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಮತ್ತಿತರರು ಪಾಲ್ಗೊಳ್ಳುವರು ಎಂದರು. 

ಮೇಲ್ಸೇತುವೆ ಫೆಬ್ರವರಿಗೆ ಪೂರ್ಣ ಫೆಬ್ರವರಿ ಕೊನೆಯ ವಾರದಲ್ಲಿ ಕೇಂದ್ರ ಭೂ ಸಾರಿಗೆ ಮತ್ತು ರಾ. ಹೆ.
ಸಚಿವ ನಿತಿನ್‌ ಗಡ್ಕರಿ  ಕುಂದಾಪುರ- ತಲಪಾಡಿ ಚತುಷಥ ರಸ್ತೆಯನ್ನು ಉದ್ಘಾಟಿಸುವರು. ಇದೇ ಸಂದರ್ಭ ಮೂಲ್ಕಿ-ಕಟೀಲು-ಕೈಕಂಬ ಬಿ.ಸಿ. ರೋಡ್‌ ಹಾಗೂ ಬಿ.ಸಿ.ರೋಡ್‌, ಮುಡಿಪು- ತೊಕ್ಕೊಟ್ಟು ರಸ್ತೆಗಳ ಉನ್ನತೀಕರಣ ಹಾಗೂ ಕುಲಶೇಖರ- ಕಾರ್ಕಳ ರಾ.ಹೆ. ವಿಸ್ತರಣೆ ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡುವರು. ಪಂಪ್‌ವೆಲ್‌ ಹಾಗೂ ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಫೆಬ್ರವರಿಯೊಳಗೆ ಪೂರ್ಣಗೊಳಿಸುವಂತೆ ಸಚಿವರು ಗುತ್ತಿಗೆ ಸಂಸ್ಥೆಗೆ ತಾಕೀತು ಮಾಡಿದ್ದು ಅದೇ ಸಂದರ್ಭದಲ್ಲಿ ಉದ್ಘಾಟಿಸುವುದಾಗಿ ತಿಳಿಸಿದ್ದಾರೆ ಎಂದು ನಳಿನ್‌ ತಿಳಿಸಿದರು.

15 ದಿನದಲ್ಲಿ  ಆರಂಭ
ತಾಂತ್ರಿಕ ಕಾರಣಗಳಿಂದಾಗಿ ಸ್ಥಗಿತಗೊಂಡಿದ್ದ ಬಿ.ಸಿ.ರೋಡು -ಅಡ್ಡಹೊಳೆ ರಾ.ಹೆ. ಕಾಮಗಾರಿ 15 ದಿನಗಳೊಳಗೆ ಎಲ್‌ ಆ್ಯಂಡ್‌ ಟಿ ಕಂಪೆನಿ ಪುನರಾರಂಭಿಸಲಿದೆ. ಗುಂಡ್ಯದಲ್ಲಿ ಅರಣ್ಯ ವ್ಯಾಪ್ತಿಯ 21 ಹೆಕ್ಟೇರ್‌ ಪ್ರದೇಶದ ತಾಂತ್ರಿಕ ಸಮಸ್ಯೆ ಬಗೆಹರಿಸಲಾಗುತ್ತಿದೆ.ಹೆಚ್ಚುವರಿಯಾಗಿ ಅವಶ್ಯವಿ ರುವ 41 ಹೆ. ಭೂಸ್ವಾಧೀನಕ್ಕೆ ಕೇಂದ್ರ ಹಣ ಬಿಡುಗಡೆ ಮಾಡಿದೆ. ಕಲ್ಲಡ್ಕದಲ್ಲಿ 6 ಕಿ.ಮೀ. ರಸ್ತೆಗೆ ಭೂಸ್ವಾಧೀನ ನಡೆಸಬೇಕಿದ್ದು ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ನಳಿನ್‌ ತಿಳಿಸಿದರು. 

ವಿಜಯ ಬ್ಯಾಂಕ್‌ ಹೆಸರು ಉಳಿಸಲು ಯತ್ನ
ಮಂಗಳೂರು: ವಿಲೀನ ಪ್ರಕ್ರಿಯೆಯಲ್ಲಿರುವ ವಿಜಯ ಬ್ಯಾಂಕಿನ ಹೆಸರು ಉಳಿಸಲು ಸರ್ವಪ್ರಯತ್ನ ನಡೆಸುವುದಾಗಿ ನಳಿನ್‌ ಕುಮಾರ್‌ ಕಟೀಲು ತಿಳಿಸಿದ್ದಾರೆ. ಜಿಲ್ಲೆಯ ಹೆಮ್ಮೆಯ ವಿಜಯ ಬ್ಯಾಂಕ್‌ ದೇಶದ ಆರ್ಥಿಕ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದೆ. ವಿಲೀನಗೊಳಿಸುವಾಗ ವಿಜಯ ಬ್ಯಾಂಕಿನ ಹೆಸರು ಉಳಿಸುವಂತೆ ನಾನು, ಸಂಸದರಾದ ಶೋಭಾ ಕರಂದ್ಲಾಜೆ ಹಾಗೂ ಗೋಪಾಲ ಶೆಟ್ಟಿಯವರು ಕೇಂದ್ರ ಸಚಿವ ಅರುಣ್‌ ಜೇಟ್ಲಿ ಅವರಿಗೆ ಮನವಿ ಸಲ್ಲಿಸಿದ್ದೇವೆ. ಪೂರಕ ಸ್ಪಂದನೆ ಸಿಕ್ಕಿದೆ ಎಂದರು. 

Advertisement

ಕಾಂಗ್ರೆಸ್‌ನ ನಿರ್ಧಾರ
ಬ್ಯಾಂಕ್‌ಗಳ ವಿಲೀನ ಹಿಂದಿನ ಕಾಂಗ್ರೆಸ್‌ ನೇತೃತ್ವದ ಯುಪಿಎ-2 ಸರಕಾರದ ನಿರ್ಧಾರ. ಪ್ರಥಮ ಹಂತದಲ್ಲಿ ಸ್ಟೇಟ್‌ಬ್ಯಾಂಕ್‌ ಆಫ್‌ ಮೈಸೂರು ಸೇರಿದಂತೆ ಕೆಲವು ಬ್ಯಾಂಕ್‌ಗಳನ್ನು ಎಸ್‌ಬಿಐಯೊಂದಿಗೆ ವಿಲೀನಗೊಳಿಸಲಾಗಿತ್ತು. ವಿಜಯ ಬ್ಯಾಂಕನ್ನು ಬ್ಯಾಂಕ್‌ ಬರೋಡಾದೊಂದಿಗೆ ವಿಲೀನಗೊಳಿಸುವ ಪ್ರಸ್ತಾವನೆ ಬಂದಾಗ ರಾಜ್ಯದ ಯಾವುದೇ ಕಾಂಗ್ರೆಸ್‌ ಸಂಸದರು ವಿರೋಧಿಸಿರಲಿಲ್ಲ. ಪ್ರಸ್ತಾವನೆ ಲೋಕಸಭೆಗೆ ಅಂಗೀಕಾರಕ್ಕೆ ಬರುವ ಮೊದಲು ಹಣಕಾಸು ಸ್ಥಾಯೀ ಸಮಿತಿಗೆ ಬಂದಾಗಲೂ ಅದರ ಅಧ್ಯಕ್ಷರಾದ ಜಿಲ್ಲೆಯವರೇ ಆದ ಡಾ| ಎಂ. ವೀರಪ್ಪ ಮೊಲಿ ತಡೆಯಬಹುದಿತ್ತು.ಆದರೆ ಅನುಮೋದಿಸಿದರು. ಇದೀಗ ಕಾಂಗ್ರೆಸ್‌ನವರು ಸತ್ಯಾಂಶಗಳನ್ನು ಮರೆಮಾಚಿ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.

ಬಿ.ಸಿ.ರೋಡ್‌-ಅಡ್ಡಹೊಳೆ ರಸ್ತೆ ಕಾಮಗಾರಿಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ನಡೆಸುತ್ತಿರುವ ಪಾದಯಾತ್ರೆ ರಾಜಕೀಯ ನಾಟಕ. ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಡೆಸಲಾಗುತ್ತಿದೆ ಎಂದು ಟೀಕಿಸಿದ ಅವರು, ಕಾಮಗಾರಿಗೆ ರಾಜ್ಯ ಮಟ್ಟದಲ್ಲಿ ಎದುರಾದ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಅವರದ್ದೇ ರಾಜ್ಯ ಸರಕಾರ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದರು.

ವಿಮಾನ ನಿಲ್ದಾಣ ಖಾಸಗೀಕರಣದಲ್ಲಿ ನಮ್ಮ ಪಾತ್ರವಿಲ್ಲ
ದೇಶದ ಸುಮಾರು 14 ವಿಮಾನ ನಿಲ್ದಾಣಗಳ ಖಾಸಗೀಕರಣ ನಿರ್ಧಾರ ಕೂಡ ಯುಪಿಎ ಸರಕಾರದ್ದು. ಆಗಿನ ವಿಮಾನಯಾನ ಸಚಿವ ಪ್ರಫುಲ್‌ ಪಟೇಲ್‌ ಇದನ್ನು ರೂಪಿಸಿದ್ದರು. ಇದೀಗ ಕಾಂಗ್ರೆಸ್‌ ನಮ್ಮ ಮೇಲೆ ಆರೋಪ ಹೊರಿಸುತ್ತಿದೆ ಎಂದರು.

ಶುಭ ಸುದ್ದಿ ಬರಲಿದೆ
ರಾಜ್ಯದ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಬಿಜೆಪಿ ಸರಕಾರ ರಚಿಸಲಿ ದೆಯೇ ಎಂಬ ಪ್ರಶ್ನೆಗೆ ಸಂಕ್ರಾಂತಿ ಕಳೆದಿದೆ; ಶುಭ ಸುದ್ದಿ ಬರಲಿದೆ ಎಂದರು. ಹರಿಯಾಣದ ಹೊಟೇಲ್‌ನಲ್ಲಿ ಬಿಜೆಪಿ ಶಾಸಕರಿಗೆ ಲೋಕಸಭಾ ಚುನಾವಣೆ ಸಿದ್ಧತೆ ಬಗ್ಗೆ  ತರಬೇತಿ ನಡೆಯುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next