Advertisement

ಮೂರೂವರೆ ತಿಂಗಳಲ್ಲಿ 21 ಕೆ.ಜಿ. ಹಳದಿ ಲೋಹ ಕಸ್ಟಮ್ಸ್‌ ವಶ‌

02:01 AM Apr 20, 2021 | Team Udayavani |

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದ ಮೂಲಕ ವಿದೇಶದಿಂದ, ಅದರಲ್ಲಿಯೂ ದುಬಾೖಯಿಂದ ಅಕ್ರಮ ಚಿನ್ನ ಸಾಗಾಟ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.

Advertisement

ಲಾಕ್‌ಡೌನ್‌ ಅನಂತರ ವಿಮಾನಯಾನ ಸೇವೆ ಆರಂಭದೊಂದಿಗೆ ಮೊದಲ್ಗೊಂಡ ಅಕ್ರಮ ಚಿನ್ನ ಸಾಗಾಟ ನಿರಂತರ ಏರುಮುಖವಾಗಿ ಸಾಗಿದೆ. ಈ ಹಿಂದಿನ ಎಲ್ಲ ವರ್ಷಗಳಿಗಿಂತಲೂ ಈ ಬಾರಿ ಅತ್ಯಧಿಕ ಸಂಖ್ಯೆಯ ಚಿನ್ನ ಕಳ್ಳ ಸಾಗಾಟ ಪ್ರಕರಣಗಳು ಪತ್ತೆಯಾಗಿವೆ. 2021ರ ಜನವರಿಯಿಂದ ಎ.19ರ ವರೆಗೆ ಕೇವಲ ಮೂರೂವರೆ ತಿಂಗಳಲ್ಲಿ 21 ಕೆ.ಜಿ.ಗೂ ಅಧಿಕ ತೂಕದ ಹಾಗೂ 10 ಕೋ.ರೂ.ಗಳಿಗೂ ಅಧಿಕ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

3 ತಿಂಗಳಲ್ಲಿ 35 ಪ್ರಕರಣ
2021ರ ಜನವರಿಯಲ್ಲಿ 8 ಪ್ರಕರಣಗಳಲ್ಲಿ 3 ಕೋ.ರೂ. ಮೌಲ್ಯದ 5.92 ಕೆ.ಜಿ., ಫೆಬ್ರವರಿಯಲ್ಲಿ 15 ಪ್ರಕರಣಗಳಲ್ಲಿ 2.39 ಕೋ.ರೂ. ಮೌಲ್ಯದ 4.94 ಕೆ.ಜಿ., ಮಾರ್ಚ್‌ನಲ್ಲಿ 12 ಪ್ರಕರಣಗಳಲ್ಲಿ 3.2 ಕೋ.ರೂ. ಮೌಲ್ಯದ 6.94 ಕೆ.ಜಿ. ಸೇರಿದಂತೆ ಕಳೆದ ಮೂರು ತಿಂಗಳಲ್ಲಿ ಒಟ್ಟು 35 ಪ್ರಕರಣಗಳಲ್ಲಿ 8.592 ಕೋ.ರೂ. ಮೌಲ್ಯದ 17.8 ಕೆ.ಜಿ. ಚಿನ್ನ ವಶಪಡಿಸಿಕೊಳ್ಳಲಾಗಿದೆ. ಎಪ್ರಿಲ್‌ನಲ್ಲಿ ಇದುವರೆಗೆ 5 ಪ್ರಕರಣಗಳಲ್ಲಿ ಸುಮಾರು 2.15 ಕೋ.ರೂ. ಮೌಲ್ಯದಲ್ಲಿ ಒಟ್ಟು ಸುಮಾರು 4 ಕೆ.ಜಿ. ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮವಾಗಿ ಸಾಗಾಟ ಮಾಡುವಾಗ ಸಿಕ್ಕಿಬಿದ್ದವರ ಪೈಕಿ ಕೇರಳ, ಭಟ್ಕಳ ಮತ್ತು ಉತ್ತರ ಕನ್ನಡದವರೇ ಅಧಿಕ.

ಕಾಣದ ಕೈಗಳ ಕೈವಾಡ?
ಅಕ್ರಮ ಚಿನ್ನ ಸಾಗಾಟ ಪ್ರಕರಣ ಹೆಚ್ಚಲು ನಿರ್ದಿಷ್ಟ ಕಾರಣವೇನೆಂಬುದು ಕಸ್ಟಮ್ಸ್‌ ಅಧಿಕಾರಿಗಳಿಗೂ ಗೊತ್ತಾಗಿಲ್ಲ. ಮೂಲಗಳ ಪ್ರಕಾರ ಒಂದೆಡೆ ಕಸ್ಟಮ್ಸ್‌ ತಪಾಸಣೆ ಈಗ ಬಿಗಿಯಾಗಿದೆ. ಇನ್ನೊಂದೆಡೆ ಉದ್ಯೋಗ ದೊರೆಯದೆ ವಿದೇಶದಿಂದ ವಾಪಸ್‌ ಹೊರಟವರನ್ನು ಸ್ಮಗ್ಲರ್‌ಗಳು ಬಳಸಿಕೊಳ್ಳುತ್ತಿದ್ದಾರೆ. ವೃತ್ತಿಪರ ಸ್ಮಗ್ಲರ್‌ಗಳ ಜತೆಗೆ ಕೆಲವರು ಮೊದಲ ಬಾರಿಗೆ ಸ್ಮಗ್ಲಿಂಗ್‌ ರಿಸ್ಕ್ ತೆಗೆದುಕೊಂಡು ಸಿಕ್ಕಿ ಬೀಳುತ್ತಿದ್ದಾರೆ.

Advertisement

ಹಣದಾಸೆಗೆ ಕೃತ್ಯ
ಹೆಚ್ಚಿನವರಿಗೆ ತಾವು ಮಾಡುತ್ತಿರುವುದು ತಪ್ಪು ಎಂಬ ಅರಿವಿದ್ದರೂ ಕಮಿಷನ್‌ ಆಸೆಗಾಗಿ ಈ ರೀತಿ ಮಾಡುತ್ತಿದ್ದಾರೆ. ಉದ್ಯೋಗ ನಷ್ಟವಾಗಿ ಊರಿಗೆ ವಾಪಸಾಗುವವರಲ್ಲಿ ಹಣ ಆಸೆ ಹುಟ್ಟಿಸಿ ಅವರ ಮೂಲಕವೂ ಚಿನ್ನ ಸ್ಮಗ್ಲಿಂಗ್‌ ಮಾಡಿಸುವವರು ಇರಬಹುದು. ಕೊರೊನಾ ಹಿನ್ನೆಲೆಯಲ್ಲಿ ವಿದೇಶೀ ಉದ್ಯೋಗ ಮಾರುಕಟ್ಟೆ ಕೂಡ ಕುಸಿದಿರುವುದರಿಂದ ಕೆಲವರು ಸ್ಮಗ್ಲಿಂಗ್‌ನಲ್ಲಿ ತೊಡಗಿಸಿಕೊಂಡಿರುವ ಸಾಧ್ಯತೆಗಳಿರಬಹುದು ಎಂದು ಕುವೈಟ್‌ನಲ್ಲಿರುವ ಅನಿವಾಸಿ ಭಾರತೀಯರಾದ ಮೋಹನ್‌ದಾಸ್‌ ಕಾಮತ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

– ಸಂತೋಷ್ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next