Advertisement

Mangaluru: ಹಾಲಿ ಮೇಯರ್‌ ಅವಧಿ ಅಂತ್ಯ; ಹೊಸ ಆಯ್ಕೆಗೆ ಬಾರದ ಮೀಸಲಾತಿ

05:29 PM Aug 30, 2024 | Team Udayavani |

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ಪ್ರಸಕ್ತ ಆಡಳಿತದ ಕೊನೆಯ ಅವಧಿಯ ಮೇಯರ್‌ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಸರಕಾರದಿಂದ ಇನ್ನೂ ಮೀಸಲಾತಿ ಪ್ರಕಟಗೊಂಡಿಲ್ಲ. ಇದರಿಂದಾಗಿ ಮುಂದಿನ ಮೇಯರ್‌, ಉಪಮೇಯರ್‌ ಆಯ್ಕೆ ವಿಚಾರ ಕಗ್ಗಂಟು ಸೃಷ್ಟಿಸಿದೆ.

Advertisement

ಹಾಲಿ ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಮತ್ತು ಉಪಮೇಯರ್‌ ಸುನೀತಾ ಅವರ ಅಧಿಕಾರಾವಧಿ ಸೆ. 8ರಂದು ಪೂರ್ಣಗೊಳ್ಳಲಿದೆ. ಈ ವೇಳೆ ನೂತನ ಮೇಯರ್‌-ಉಪಮೇಯರ್‌ ಆಯ್ಕೆ ನಡೆಯಬೇಕು. ಅದಕ್ಕೂ ಮುನ್ನ ಸರಕಾರದಿಂದ ಮೀಸಲಾತಿ ಪ್ರಕಟಗೊಳ್ಳಬೇಕು. ಬಳಿಕ ಆಯ್ಕೆ ಪ್ರಕ್ರಿಯೆ ನಡೆಯಲು ಸುಮಾರು ಎರಡರಿಂದ ಮೂರು ವಾರಗಳು ಬೇಕು. ನಂತರ ನಡೆಯುವ ಹೊಸ ಮೇಯರ್‌ ಅಧಿಕಾರಾವಧಿ ಫೆ. 28ರ ವರೆಗೆ (6 ತಿಂಗಳು ಮಾತ್ರ) ಮಾತ್ರ ಇರಲಿದೆ.

2019ರ ನವೆಂಬರ್‌ 12ರಂದು ಪಾಲಿಕೆ ಕಳೆದ ಚುನಾವಣೆ ನಡೆದಿತ್ತು. ಪಾಲಿಕೆ ಚುನಾವಣೆ ನಡೆದರೂ, ಮೇಯರ್‌ ʼಮೀಸಲಾತಿ’ ಗೊಂದಲದಿಂದಾಗಿ ಮೇಯರ್‌ ಚುನಾವಣೆ ನಡೆಯಲು 3 ತಿಂಗಳು ತಡವಾಗಿತ್ತು. ಅಲ್ಲಿಯವರೆಗೆ ಆಡಳಿತಾಧಿಕಾರಿ ನೇಮಕವಾಗಿತ್ತು. ಅಂತೂ ಕೊನೆಗೆ 2020ರ ಫೆ. 28ಕ್ಕೆ ಮೇಯರ್‌ ಆಗಿ ದಿವಾಕರ್‌ ಪಾಂಡೇಶ್ವರ ಅಧಿಕಾರ ಸ್ವೀಕರಿಸಿದರು. ಪಾಲಿಕೆಯಲ್ಲಿ ಜನಪ್ರತಿನಿಧಿ ಆಡಳಿತ ಆರಂಭವಾಗುವುದು ಮೊದಲ ಮೇಯರ್‌ ಚುನಾವಣೆ ನಡೆದ ದಿನದಿಂದಾಗಿರುತ್ತದೆ. ಹೀಗಾಗಿ 5 ವರ್ಷಗಳ ಪಾಲಿಕೆ ಆಡಳಿತ ಮುಂದಿನ ವರ್ಷ ಫೆ. 28ಕ್ಕೆ ಕೊನೆಗೊಳ್ಳಲಿದೆ.

ಸರಕಾರಕ್ಕೆ ಪತ್ರ
ಮಂಗಳೂರು ಪಾಲಿಕೆಯ ನೂತನ ಮೇಯರ್‌ ಆಯ್ಕೆ ಸಂಬಂಧಿಸಿ ಇನ್ನೂ ಕೂಡ ಮೀಸಲಾತಿ ಆದೇಶ ಪಾಲಿಕೆಗೆ ಬಂದಿಲ್ಲ. ಮೀಸಲಾತಿ ಕಲ್ಪಿಸುವಂತೆ ಈಗಾಗಲೇ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಸರಕಾರದ ಸೂಚನೆಯ ಪ್ರಕಾರ ನಿರ್ಧರಿಸಲಾಗುವುದು.

-ಆನಂದ್‌ ಸಿ.ಎಲ್‌.,ಆಯುಕ್ತರು, ಮನಪಾ

Advertisement

ಬಿಜೆಪಿ ಆಡಳಿತದ ಮೊದಲ ಅವಧಿಯಲ್ಲಿ ಹಿಂದುಳಿದ ವರ್ಗ ಎ ಮೀಸಲಾತಿಯ ಪ್ರಕಾರ ದಿವಾಕರ್‌ ಪಾಂಡೇಶ್ವರ ಮೇಯರ್‌ ಆಗಿದ್ದರು. ಅನಂತರ ಮೂರು ಅವಧಿಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾತಿ ನಿಗದಿಯಾಗಿ ಪ್ರೇಮಾನಂದ ಶೆಟ್ಟಿ, ಜಯಾನಂದ ಅಂಚನ್‌ ಬಳಿಕ ಸುಧೀರ್‌ ಶೆಟ್ಟಿ ಕಣ್ಣೂರು ಮೇಯರ್‌ ಆಗಿ ಆಯ್ಕೆಯಾಗಿದ್ದರು. ಮುಂದಿನ ಮೇಯರ್‌ ಮಹಿಳೆ ಅಥವಾ ಪರಿಶಿಷ್ಟ ಜಾತಿಗೆ ಮೀಸಲಾಗುವ ಸಾಧ್ಯತೆ ಇದೆ ಎಂದು ಚರ್ಚಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next