ವಾಷಿಂಗ್ಟನ್/ ನವದೆಹಲಿ: ಅಮೆರಿಕ ಪ್ರವಾಸದಲ್ಲಿ ಇರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮೀಸಲಾತಿ ಬಗ್ಗೆ ಮಾತನಾಡಿದ್ದು ವಿವಾದಕ್ಕೆ ಗುರಿ ಯಾಗಿದೆ. ವಾಷಿಂಗ್ಟನ್ನ ಜಾರ್ಜ್ಟೌನ್ ವಿವಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ “ಶೇ.90 ಮಂದಿ ಬುಡಕಟ್ಟು ಜನಾಂಗ, ದಲಿತರು, ಆದಿವಾಸಿಗಳನ್ನು ಪ್ರತಿನಿಧಿಸುವವರು ಯಾರೂ ಇಲ್ಲ. ಹೀಗಾಗಿಯೇ ಭಾರತದಲ್ಲಿ ಜಾತಿಗಣತಿ ನಡೆಸಲು ನಾವು ಆಗ್ರಹಿಸುತ್ತೇವೆ. ತನ್ಮೂಲಕ ಭಾರತದ ಸಾಮಾಜಿಕ ಸ್ಥಿತಿಯನ್ನು ಅರಿಯಲು ಬಯಸುತ್ತೇವೆ. ಸಮಾಜದಲ್ಲಿ ಸಮಾನತೆ ಬಂದ ಬಳಿಕ ಮೀಸಲಾತಿ ರದ್ದು ಮಾಡುವ ಬಗ್ಗೆ ಚಿಂತಿಸಬಹುದು. ಭಾರತ ಸದ್ಯಕ್ಕೆ ಸಮಾನತೆಯ ಸ್ಥಿತಿಯಲ್ಲಿಲ್ಲ’ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ಈ ಹೇಳಿಕೆಯ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ದೇಶದಲ್ಲಿ ಮೀಸಲಾತಿ ಅಂತ್ಯಗೊಳಿಸಲು ಕಾಂಗ್ರೆಸ್ ಮುಂದಾಗಿದೆ ಎಂದು ವಿಪಕ್ಷಗಳು ರಾಹುಲ್ ಗಾಂಧಿ ವಿರುದ್ಧ ತಿರುಗಿ ಬಿದ್ದಿದ್ದು, ರಾಜಕೀಯವಾಗಿ ಭಾರಿ ವಿವಾದ ಸೃಷ್ಟಿಯಾಗಿದೆ.
ರಾಹುಲ್ ಗಾಂಧಿ ಹೇಳಿಯನ್ನು ಬಿಎಸ್ಪಿ, ಎಲ್ಜೆಪಿ ನಾಯಕರು ಸೇರಿ ಹಲವರು ಖಂಡಿಸಿದ್ದಾರೆ. “ಕಾಂಗ್ರೆಸ್ ದಶಕಗಳ ಕಾಲ ಅಧಿಕಾರದಲ್ಲಿದ್ದರೂ ಒಬಿಸಿ ಮೀಸಲಾತಿಯನ್ನು ಜಾರಿ ಮಾಡಲಿಲ್ಲ. ಈಗ ಇದೇ ವಿಷಯವನ್ನು ಇಟ್ಟುಕೊಟ್ಟು ಪಕ್ಷ ಮತ್ತೂಮ್ಮೆ ಅಧಿಕಾರಕ್ಕೆ ಬರುವ ಚಿಂತನೆ ಯೋಚನೆ ಮಾಡುತ್ತಿದೆ. ಕಾಂಗ್ರೆಸ್ನವರ ನಾಟಕದ ಬಗ್ಗೆ ಎಚ್ಚರದಿಂದಿರಿ’ ಎಂದು ಮಾಯಾವತಿ ಹೇಳಿದ್ದಾರೆ.
ಇದು ಕಾಂಗ್ರೆಸ್ನ ಮನಸ್ಥಿತಿ: ಮೀಸಲಾತಿ ಅಂತ್ಯಗೊಳಿಸುವ ಬಗ್ಗೆ ರಾಹುಲ್ ಗಾಂಧಿ ಆಡಿರುವ ಮಾತು ಕಾಂಗ್ರೆಸ್ನ ಮನಸ್ಥಿತಿಯನ್ನು ತೋರಿಸುತ್ತದೆ. ಮೀಸಲಾತಿಯನ್ನು ಅಂತ್ಯಗೊಳಿಸುವುದು ಸಹ ಅಪರಾಧ, ಸಾಂವಿಧಾನಿಕ ಪ್ರಕ್ರಿಯೆಗಳನ್ನು ಸರಾಗವಾಗಿ ಕೊಂಡೊಯ್ಯಲು ಮೀಸಲಾತಿ ಎಂಬುದು ಪ್ರಮುಖವಾಗಿದೆ ಎಂದು ಎಲ್ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಹೇಳಿದ್ದಾರೆ. ರಾಹುಲ್ ಗಾಂಧಿ ಪ್ರತಿಬಾರಿ ವಿದೇಶಕ್ಕೆ ಹೋದಾಗಲೂ ಅಲ್ಲಿ ಭಾರತವನ್ನು ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ. ಇದು ರಾಷ್ಟ್ರವಿರೋಧಿ ಕೃತ್ಯವಾಗಿದೆ ಎಂದು ಬಿಜೆಪಿ ಹೇಳಿದೆ.
ನಾನು ಮೋದಿಯನ್ನು ದ್ವೇಷಿಸುವುದಿಲ್ಲ: ರಾಗಾ
ವಾಷಿಂಗ್ಟನ್: ನಾನು ಮೋದಿಯನ್ನು ದ್ವೇಷಿಸುವುದಿಲ್ಲ. ನಮ್ಮಿಬ್ಬರ ದೃಷ್ಟಿಕೋನಗಳು ಬೇರೆ ಬೇರೆಯಾಗಿವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ನನ್ನ ಮಾತನ್ನು ಕೇಳಿ ನೀವು ಅಚ್ಚರಿಗೊಳಗಾಗಬಹುದು. ನಾನು ಮೋದಿಯನ್ನು ದ್ವೇಷ ಮಾಡುವುದಿಲ್ಲ. ಎಲ್ಲರನ್ನೂ ಪ್ರೀತಿಸುವುದೇ ಕಾಂಗ್ರೆಸ್ನ ಮೂಲಮಂತ್ರವಾಗಿದೆ ಎಂದರು.