ಮಂಗಳೂರು: ಪತಿ ಮೂರು ಬಾರಿ ತಲಾಖ್ ಹೇಳಿ ಮನೆಯಿಂದ ಹೊರಗೆ ಹಾಕಿ ಜೀವ ಬೆದರಿಕೆಯೊಡ್ಡಿರುವ ಬಗ್ಗೆ ಮಹಿಳೆಯೋರ್ವರು ನೀಡಿರುವ ದೂರಿನಂತೆ ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಬಾನಾ ದೂರು ನೀಡಿದವರು. ಅವರ ಪತಿ ಮೊಹಮ್ಮದ್ ಹುಸೇನ್ ಆರೋಪಿ.
ಪ್ರಕರಣದ ವಿವರ
ಶಬಾನ ಅವರಿಗೆ ಮೊದಲ ಮದುವೆಯಲ್ಲಿ ಇಬ್ಬರು ಮಕ್ಕಳಿದ್ದು ಮೊದಲನೇ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದರು. 2022ರ ನ. 10ರಂದು ಮೊಹಮ್ಮದ್ ಹುಸೇನ್‌ನ್ನು ಮದುವೆಯಾಗಿ ಮಾರ್ನಮಿಕಟ್ಟೆಯ ಅಪಾರ್ಟ್‌ಮೆಂಟ್‌ನಲ್ಲಿರುವ ಪತಿಯ ಮನೆಯಲ್ಲಿ ವಾಸವಿದ್ದರು. ಅವರ ಜತೆ ಅತ್ತೆ ಮತ್ತು ಮಾವ ಕೂಡ ಇದ್ದರು. ಮದುವೆಯಾದ 8 ತಿಂಗಳ ಅನಂತರ ಮೊಹಮ್ಮದ್ ಹುಸೇನ್ ಚಿನ್ನಾಭರಣಗಳನ್ನು ಪಡೆದುಕೊಂಡು ಹೋಗಿದ್ದ. ಎರಡು ತಿಂಗಳು ಅನ್ಯೋನ್ಯತೆಯಿಂದ ಇದ್ದು ಅನಂತರ ಸಣ್ಣಪುಟ್ಟ ವಿಚಾರಕ್ಕೆ ಗಲಾಟೆ ಮಾಡಿ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದ.
2023ರಲ್ಲಿ ಶಬಾನಾ ಗರ್ಭಿಣಿಯಾಗಿರುವುದನ್ನು ತಿಳಿಸಿದಾಗ ಈಗ ಮಗು ಬೇಡ ಎಂದು ಒತ್ತಾಯದಿಂದ ಮಾತ್ರೆ ಕೊಟ್ಟು ಗರ್ಭಪಾತ ಮಾಡಿಸಿದ್ದ. ಮೊಹಮ್ಮದ್ ಹುಸೇನ್‌ಗೆ ಬೇರೆ ಮಹಿಳೆಯರ ಸಹವಾಸವಿರುವ ವಿಚಾರ ತಿಳಿದು ಈ ಬಗ್ಗೆ ಶಬಾನಾ ಪ್ರಶ್ನಿಸಿದಾಗ ಅವಾಚ್ಯವಾಗಿ ಬೈದು ಮಾನಸಿಕ ಹಿಂಸೆ ನೀಡುತ್ತಿದ್ದ. ಹೆಚ್ಚಿನ ವರದಕ್ಷಿಣೆ ತರುವಂತೆ ಒತ್ತಾಯಿಸುತ್ತಿದ್ದ. ಮೇ 26ರಂದು ಮೊಹಮ್ಮದ್ ಹುಸೇನ್ ಶಬಾನಾ ಅವರ ಕುತ್ತಿಗೆ ಬಳಿ ಹೊಡೆದು ಕೆಳಗೆ ದೂಡಿ ಕಿಬ್ಬೊಟ್ಟೆಗೆ ತುಳಿದು ಮೂರು ಬಾರಿ ತಲಾಖ್ ಎಂದು ಹೇಳಿ ಇನ್ನು ಮುಂದೆ ಮನೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಶಬಾನಾ ಆಸ್ಪತ್ರೆಗೆ ದಾಖಲಾಗಿದ್ದಾರೆ.