ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಸಂಸದ ನಳಿನ್ ಕುಮಾರ್ ಕಟೀಲು ಮಾರ್ಗದರ್ಶನದಲ್ಲಿ ಶಾಸಕ ಡಿ. ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಹುಲಿವೇಷ ಸ್ಪರ್ಧಾಕೂಟ “ಕುಡ್ಲದ ಪಿಲಿ ಪರ್ಬ 2023′ ಶನಿವಾರ ಬೆಳಗ್ಗಿನಿಂದ ರಾತ್ರಿಯವರೆಗೆ ನಗರದ ಕೇಂದ್ರ ಮೈದಾನದಲ್ಲಿ ನಡೆಯಿತು.
ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಿ ಮಾತನಾಡಿ, ತುಳುನಾಡಿನ ಆಚರಣೆಗಳು ನಂಬಿಕೆ, ಭಕ್ತಿಯೊಂದಿಗೆ ಬೆಸೆದುಕೊಂಡಿವೆ. ಇದೇ ಕಾರಣಕ್ಕೆ ಇಲ್ಲಿನ ಕ್ರೀಡೆ, ಕಲೆಗಳಿಗೆ ಹಿರಿಯರು ದೇವರ ಚಿಂತನೆ ನೀಡಿದ್ದಾರೆ. ಕಂಬಳಕ್ಕೆ ದೇವರ ಕಂಬಳ ಎಂಬಂತೆ ಹುಲಿ ವೇಷವೂ ದೇವರ ಸಂಕೇತ. ಕಲೆಯೊಡನೆ ಭಕ್ತಿಯನ್ನು ನೀಡಿದ ಏಕೈಕ ನಾಡು ತುಳುನಾಡು. ಇಲ್ಲಿನ ಕೀರ್ತಿ ಜಗತ್ತಿಗೆ ಪಸರಿಸಲಿ ಎಂದರು.
ಹುಲಿ ವೇಷ ತುಳುನಾಡಿಗಷ್ಟೇ ಸೀಮಿತವಾಗದೆ ರಾಜ್ಯದ ವಿವಿಧ ಭಾಗಗಳಲ್ಲಿ ಬೆಳೆಯುತ್ತಿದೆ. ಯುವಕರಿಗೆ ಸ್ಫೂರ್ತಿ ನೀಡಿದ್ದು ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ. ಈ ಮೂಲಕ ಬಿಡಿ ಬಿಡಿಯಾಗಿರುವ ಹುಲಿ ವೇಷಗಳಿಗೆ ಸುಂದರವಾದ ಪರಿಕಲ್ಪನೆ ನೀಡುವ ಕೆಲಸ ಆಗಿದೆ ಎಂದರು.
ಶಾಸಕ ಡಿ. ವೇದವ್ಯಾಸ ಕಾಮತ್ ಸ್ವಾಗತಿಸಿ, ಪ್ರಸ್ತಾವನೆಗೈದು, ಕರಾವಳಿಯ ಹುಲಿವೇಷ ಕುಣಿತಕ್ಕೆ ರಾಷ್ಟ್ರ ಮಾನ್ಯತೆ ದೊರಕಿಸುವ ಮತ್ತು ಈ ಕಲಾ ಶ್ರೇಷ್ಠತೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಉದ್ದೇಶದಿಂದ ಕುಡ್ಲದ ಪಿಲಿಪರ್ಬ ಆಯೋಜಿಸಿದ್ದೇವೆ ಎಂದು ವಿವರಿಸಿದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪಮೇಯರ್ ಸುನೀತಾ, ಮಾಜಿ ಮೇಯರ್, ಪ್ರತಿಷ್ಠಾನದ ಅಧ್ಯಕ್ಷ ದಿವಾಕರ ಪಾಂಡೇಶ್ವರ, ವಿಧಾನಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಹಿರಿಯ ಪತ್ರಕರ್ತ ಮನೋಹರ ಪ್ರಸಾದ್, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮೀನುಗಾರಿಕೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ನಿತಿನ್ ಕುಮಾರ್, ಪಾಲಿಕೆ ಮುಖ್ಯಸಚೇತಕ ಪ್ರೇಮಾನಂದ ಶೆಟ್ಟಿ, ಮಾಜಿ ಮೇಯರ್ ಜಯಾನಂದ ಅಂಚನ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಬಿಜೆಪಿ ಮಂಗಳೂರು ದಕ್ಷಿಣ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ, ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯಕುಮಾರ್, ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ ಶೆಟ್ಟಿ, ಪ್ರಮುಖರಾದ ನರೇಶ್ ಶೆಣೈ, ಕಮಲಾಕ್ಷ ಬಜಿಲಕೇರಿ, ಬಿಜೆಪಿಯ ಮಹಾನಗರ ಪಾಲಿಕೆ ಸದಸ್ಯರು ಸೇರಿದಂತೆ ಇತರರು ಇದ್ದರು.
ತೀರ್ಪುಗಾರರಾಗಿ ಕಮಲಾಕ್ಷ ಬಜಿಲಕೇರಿ, ನವನೀತ ಶೆಟ್ಟಿ ಕದ್ರಿ, ಕೆ.ಕೆ. ಪೇಜಾವರ, ಪಿ.ಎಸ್. ವೆಂಕಟೇಶ ಭಟ್, ರೋಹನ್ ತೊಕ್ಕೊಟ್ಟು, ನವೀನ್ ಕುಮಾರ್ ಬಿ. ಉಪಸ್ಥಿತರಿದ್ದರು. ನಿತೇಶ್ ಎಕ್ಕಾರು ಮತ್ತು ಶರ್ಮಿಳಾ ಅಮೀನ್ ಕಾರ್ಯಕ್ರಮ ನಿರೂಪಿಸಿದರು.
ಆಕರ್ಷಕ ವೇದಿಕೆ; 15 ತಂಡ ಭಾಗಿ
“ಕುಡ್ಲದ ಪಿಲಿ ಪರ್ಬ’ ಎರಡನೇ ಆವೃತ್ತಿಗೆ ವಿಶೇಷ ವೇದಿಕೆಯನ್ನು ನಿರ್ಮಿಸಲಾಗಿತ್ತು. ತಾಸೆಯ ಪೆಟ್ಟಿಗೆ 15 ಹುಲಿವೇಷ ತಂಡಗಳ ಕುಣಿತ ನೋಡುಗರ ಮೆಚ್ಚುಗೆ ಪಡೆದವು. 5 ಸಾವಿರ ಮಂದಿ ಕೂತು ವೀಕ್ಷಿಸಲು ಆಸನ, ಗ್ಯಾಲರಿ ವ್ಯವಸ್ಥೆ ಮಾಡಲಾಗಿತ್ತು. ಅಕ್ಕಿಮುಡಿ ಎತ್ತಿ ಹಾಕುವುದು, ಪಲ್ಟಿ ಸೇರಿದಂತೆ ಒಂದೊಂದು ಪ್ರಯೋಗಕ್ಕೂ ಪ್ರತ್ಯೇಕ ಅಂಕಗಳನ್ನು ನಿಗದಿಪಡಿಸಲಾಗಿತ್ತು. ಪ್ರತೀ ತಂಡಕ್ಕೆ 20 ನಿಮಿಷ ಕಾಲಾವಕಾಶ ಇತ್ತು. ಪ್ರವೇಶದ ದ್ವಾರವನ್ನು ಹುಲಿಯ ಮುಖದ ಮಾದರಿಯಲ್ಲಿ ರೂಪುಗೊಳಿಸಲಾಗಿತ್ತು. ಫಲಿತಾಂಶಗಳ ನಿಖರತೆಗೆ “ಥರ್ಡ್ ಅಂಪೈರ್’ ಪರಿಕಲ್ಪನೆ ವಿಶೇಷವಾಗಿತ್ತು.