Advertisement
ಸದ್ಯ ಈಜುಕೊಳಕ್ಕೆ ನೀರು ತುಂಬಿಸುವ ಕೆಲಸ ನಡೆಯುತ್ತಿದೆ. ನೀರು ತುಂಬಿ ಫಿಲ್ಟರ್ ಆದ ಬಳಿಕ ಈಜುಕೊಳ ಸಾರ್ವಜನಿಕರ ಉಪಯೋಗಕ್ಕೆ ತೆರೆಯಲಿದೆ. ಇದಕ್ಕೆ ಇನ್ನೂ ಸುಮಾರು ಎರಡು ವಾರ ಬೇಕಾಗಬಹುದು. ಹಲವು ದಿನಗಳಿಂದ ಕಾಮಗಾರಿ ಪ್ರಗತಿಯಲ್ಲಿತ್ತು. ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಮಂಗಳ ಈಜುಕೊಳದ ನಿರ್ವಹಣೆ ನಡೆಯುತ್ತದೆ. ಅದರಂತೆ ಈ ಬಾರಿ ಆ. 16ರಿಂದ ಈಜುಕೊಳ ಬಂದ್ ಮಾಡಲಾಗಿತ್ತು. ಇದೇ ಕಾರಣಕ್ಕೆ ಸಾರ್ವಜನಿಕರು ಮತ್ತು ಕ್ರೀಡಾಳುಗಳಿಗೆ ಈಜುಕೊಳ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.
ಈಜುಕೊಳದಲ್ಲಿ ನೀರು ಸೋರಿಕೆ ತಡೆಯುವ ಕಾಮಗಾರಿ, ಈಜುಕೊಳಕ್ಕೆ ಇಂಟರ್ಲಾಕ್ ಅಳವಡಿಸುವ ಕಾಮಗಾರಿ ಸಹಿತ ಕೆಲವೊಂದು ಅಭಿವೃದ್ಧಿ ಕೆಲಸ ತುರ್ತಾಗಿ ನಡೆಯಬೇಕಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಈ ಅವಧಿಯಲ್ಲಿ ಈಜುಕೊಳದಲ್ಲಿರುವ ಒಡೆದ ಟೈಲ್ಸ್ ಬದಲಿಗೆ ಹೊಸತು ಅಳವಡಿಸಲಾಗಿದೆ. ಈ ನಡುವೆ ಭಾರೀ ಮಳೆ ಬಂದ ಕಾರಣ ಈಜುಕೊಳದಲ್ಲಿ ನೀರು ತುಂಬಿ ಟೈಲ್ಸ್ ಅಳವಡಿಸುವ ಕಾಮಗಾರಿಗೆ ಹಿನ್ನಡೆ ಉಂಟಾಗಿತ್ತು. ಇದೇ ಕಾರಣಕ್ಕೆ ಒಂದು ತಿಂಗಳಲ್ಲಿ ಪೂರ್ಣಗೊಳ್ಳಬೇಕಾದ ಕಾಮಗಾರಿ ವಿಳಂಬವಾಯಿತು. 50 ಮೀ. ಉದ್ದ ಹಾಗೂ 15 ಮೀ. ಅಗಲವಿರುವ ಲೇಡಿಹಿಲ್ ಬಳಿಯ ಮಂಗಳ ಈಜುಕೊಳದ ಆಳವು ನಾಲ್ಕು ಅಡಿಯಿಂದ ಆರಂಭಗೊಂಡು ಕೆಳಮುಖವಾಗಿ ಸಾಗಿ 16 ಅಡಿಯಲ್ಲಿ ಕೊನೆಗೊಳ್ಳುತ್ತದೆ. ಸುಮಾರು ಮೂರು ದಶಕದ ಇತಿಹಾಸ ಹೊಂದಿದ ಈಜುಕೊಳಕ್ಕೆ ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಈಜಲು ಬರುವವರ ಸಂಖ್ಯೆ ಹೆಚ್ಚಿದೆ. ಪಾಸ್ ಇರುವವರು ಸೇರಿದಂತೆ ಸುಮಾರು 500 ಮಂದಿ ಸಾರ್ವಜನಿಕರು ಹಾಗೂ 200 ಕ್ರೀಡಾಪಟುಗಳು ದಿನಂಪ್ರತಿ ಈ ಈಜುಕೊಳವನ್ನು ಬಳಸುತ್ತಿದ್ದರು. ವರ್ಷಂಪ್ರತಿ ಶಾಲಾ ರಜಾ ಅವ ಧಿಯಲ್ಲಿ (ಎಪ್ರಿಲ್ ಮತ್ತು ಮೇ) ನಡೆಯುವ ತರಬೇತಿ ಶಿಬಿರದಲ್ಲಿ ಸುಮಾರು 1,300 ವಿದ್ಯಾರ್ಥಿನಿಯರು ಭಾಗವಹಿಸುತ್ತಿದ್ದರು. ವಿದ್ಯಾರ್ಥಿನಿಯರು, ಮಹಿಳೆಯರು, ಮಕ್ಕಳಿಗೆ ಪ್ರತ್ಯೇಕ ಬ್ಯಾಚುಗಳಿವೆ.