ಮಂಗಳೂರು: ಮಂಗಳೂರು ವಿ.ವಿ. ಅಧೀನಕ್ಕೆ ಒಳಪಟ್ಟ ಎಂಎಸ್‌ಡಬ್ಲ್ಯು ವಿಭಾಗ ಇರುವ ಸರಕಾರಿ ಕಾಲೇಜುಗಳಲ್ಲಿ 15 ವಿದ್ಯಾರ್ಥಿಗಳು ಇದ್ದ ವಿಷಯಕ್ಕೆ ಮಾತ್ರ ಐಚ್ಛಿಕ (ಸ್ಪೆಷಲೈಸೇಷನ್) ನೀಡುವಂತೆ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ತಮ್ಮ ಇಚ್ಛೆಯ ವಿಷಯ ಪಡೆದುಕೊಳ್ಳಲು ಸಾಧ್ಯವಾಗದೆ ಅಡಕತ್ತರಿಯಲ್ಲಿ ಸಿಲುಕಿದ್ದಾರೆ ಎಂದು ಸರಕಾರಿ ಕಾಲೇಜಿನ ಎಂಎಸ್‌ಡಬ್ಲ್ಯು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾರ್ಥಿನಿ ದೀಕ್ಷಿತಾ, ಎಂಎಸ್‌ಡಬ್ಲ್ಯುಸ್ನಾತಕೋತ್ತರ ವಿಭಾಗದ ದ್ವಿತೀಯ ವರ್ಷದಲ್ಲಿ ಮೂರರಲ್ಲಿ ಒಂದು ಐಚ್ಛಿಕ ವಿಷಯ (ಎಚ್.ಆರ್., ಮೆಡಿಕಲ್ ಸೈಕಿಯಾಟ್ರಿ, ಕಮ್ಯುನಿಟಿ ಡೆವಲಪ್‌ಮೆಂಟ್) ಪಡೆದುಕೊಳ್ಳಬೇಕು. ಸರಕಾರಿ ನಿಯಮದ ಪ್ರಕಾರ ಯಾವುದೇ ಕೋರ್ಸ್‌ನಲ್ಲಿ 15 ವಿದ್ಯಾರ್ಥಿಗಳು ಇರಬೇಕೇ ಹೊರತು ಸ್ಪೆಷಲೈಸೇಷಶನ್‌ಗೆ ಇಂಥ ಯಾವುದೇ ನಿಯಮ ಇಲ್ಲ.
ನನಗೆ ಎಚ್.ಆರ್. ಐಚ್ಛಿಕ ವಿಷಯ ಆಯ್ಕೆಗೆ ಆಸಕ್ತಿ ಇದೆ. ಆದರೆ ಈ ವಿಷಯಕ್ಕೆ 15 ವಿದ್ಯಾರ್ಥಿಗಳು ಇಲ್ಲ ಎಂದು ಈಗ ಬೇರೆ ಆಯ್ಕೆ ಮಾಡಬೇಕಿದೆ. ಮೊದಲನೇ ವರ್ಷದಲ್ಲಿ ಈ ಬಗ್ಗೆ ಮಾಹಿತಿಯೇ ನೀಡಿರಲಿಲ್ಲ. ನಾಲ್ಕು ಕಾಲೇಜುಗಳ 60ರಿಂದ 70 ವಿದ್ಯಾರ್ಥಿಗಳಿಗೆ ಈ ಸಮಸ್ಯೆ ಉಂಟಾಗಿದೆ. ಸರಕಾರಿ ಕಾಲೇಜುಗಳಿಗೆ ಮಾತ್ರ ಈ ನಿಯಮ ಯಾಕೆ? ಈ ಸಮಸ್ಯೆಯಿಂದ ಮುಂದಿನ ದಿನಗಳಲ್ಲಿ ನಮ್ಮ ಉದ್ಯೋಗದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಸೂಚನೆ ಕುರಿತು ಲಿಖೀತ ಆದೇಶ ಪ್ರತಿ ನೀಡುವಂತೆ ಸಂಬಂಧಪಟ್ಟವರಲ್ಲಿ ಮನವಿ ಮಾಡಿದರೆ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ದೂರಿದರು.
ಇಂದು ಪ್ರತಿಭಟನೆ:
ಈಗಾಗಲೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೂ ಈಡೇರಲಿಲ್ಲ. ಅ.23ರಂದು ಮಂಗಳೂರಿನ ಮಿನಿ ವಿಧಾನಸೌಧದ ಮುಂಭಾಗ ವಿದ್ಯಾರ್ಥಿಗಳು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ಎಂದು ನಿಖಿಲ್ ತಿಳಿಸಿದರು. ಪ್ರವೀಣ, ಸ್ವಾತಿ ಉಪಸ್ಥಿತರಿದ್ದರು.