Advertisement

ಭಾಷೆ, ಸಂಸ್ಕೃತಿ ಜತೆಗೂಡಿದರೆ ಅಭಿವೃದ್ಧಿ: ಸಚಿವ ಸುನಿಲ್‌ ಕುಮಾರ್‌

12:59 AM Feb 27, 2022 | Team Udayavani |

ಮಂಗಳೂರು: ಭಾಷೆ ಮತ್ತು ಸಂಸ್ಕೃತಿ ಜತೆಗೂಡಿ ಕೆಲಸ ಮಾಡಿದರೆ ಮಾತ್ರ ನಾಗರಿಕ ಸಮಾಜ ಚೆನ್ನಾಗಿ ನಡೆಯುತ್ತದೆ. ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಮುಂದಿನ ಪೀಳಿಗೆಗೆ ತಲುಪಿಸ ಬೇಕಾಗಿದ್ದು, ಅಕಾಡೆಮಿಯಂತಹ ಸಂಸ್ಥೆಗಳು ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಖಾತೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

Advertisement

ಅವರು ಶನಿವಾರ ನಗರದ ಉರ್ವ ಸ್ಟೋರ್‌ನಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ನಿರ್ಮಿಸಲಾಗುವ ಕೊಂಕಣಿ ಭವನದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಕೊಂಕಣಿ ಭಾಷಿಕರ ಸಂಖ್ಯೆ ಬಹಳಷ್ಟಿದೆ. ಕರಾವಳಿಯ 3 ಜಿಲ್ಲೆಗಳಲ್ಲಿ ಜಾಸ್ತಿಇದೆ. ಎಲ್ಲರನ್ನೂ ಒಗ್ಗೂಡಿಸಿ ಕೊಂಕಣಿ ಭಾಷೆ, ಸಾಹಿತ್ಯದ ಕಾರ್ಯ ಚಟುವಟಿಕೆಗಳು ಚುರುಕಾಗಿ ನಡೆಯಲು ಅಗತ್ಯವಾಗಿರುವ ಭವನ ನಿರ್ಮಾಣ ವಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

3 ಕೋಟಿ ರೂ. ಬಿಡುಗಡೆ
ಭವನ ನಿರ್ಮಾಣಕ್ಕೆ ಸರಕಾರ 3 ಕೋಟಿ ರೂ. ಬಿಡುಗಡೆ ಮಾಡಿದ್ದು, ಮುಂದೆ ಆವಶ್ಯಕತೆಯನ್ನು ಗಮನಿಸಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಶಾಸಕ ಡಿ. ವೇದವ್ಯಾಸ ಕಾಮತ್‌ ಮಾತನಾಡಿ, ಕೊಂಕಣಿ ಭವನ ನಿರ್ಮಾಣಕ್ಕೆ ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಹಾಗೂ ಸಿ.ಟಿ. ರವಿ ಅವರು ಸಚಿವರಾಗಿದ್ದಾಗ 5 ಕೋಟಿ ರೂ.ಮಂಜೂರಾಗಿತ್ತು. ಆದರೆ ಕೊರೊನಾ ಕಾರಣ ಬಳಿಕ 3 ಕೋಟಿ ರೂ. ಮಾತ್ರ ಬಿಡುಗಡೆಮಾಡಲಾಗಿದೆ. ಇನ್ನೂ ಹೆಚ್ಚುವರಿ ಅನುದಾನದ ಅಗತ್ಯವಿದ್ದು, ಈ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

Advertisement

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಕೆ. ಜಗದೀಶ್‌ ಪೈ ಪ್ರಸ್ತಾವನೆಗೈದರು. ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ಸಿಂಹ ನಾಯಕ್‌, ಮೇಯರ್‌ ಪ್ರೇಮಾನಂದ ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್‌, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಕಾರ್ಪೊರೇಟರ್‌ಗಳಾದ ಗಣೇಶ ಕುಲಾಲ್‌ ಮತ್ತು ಜಯಶ್ರೀ, ಕೆಎಫ್‌ಡಿಸಿ ಅಧ್ಯಕ್ಷ ನಿತಿನ್‌ ಕುಮಾರ್‌ ಅತಿಥಿಗಳಾಗಿದ್ದರು.

ಅಕಾಡೆಮಿ ಸದಸ್ಯರಾದ ಕೆನ್ಯೂಟ್‌ ಜೀವನ್‌ ಪಿಂಟೋ ಸ್ವಾಗತಿಸಿ ನವೀನ್‌ ನಾಯಕ್‌ ವಂದಿಸಿದರು. ಸಾಣೂರು ನರಸಿಂಹ ಕಾಮತ್‌ ಕಾರ್ಯಕ್ರಮ ನಿರ್ವಹಿಸಿದರು.

ಸುಸಜ್ಜಿತ ಭವನ
ಕೊಂಕಣಿ ಭವನ ನಿರ್ಮಾಣಕ್ಕೆ ಉರ್ವ ಸ್ಟೋರಿನಲ್ಲಿ 35 ಸೆಂಟ್ಸ್‌ ಜಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಸರಿನಲ್ಲಿ ಮಂಜೂರಾಗಿದೆ.

ರಾಜ್ಯ ಸರಕಾರದಿಂದ 3 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಲೋಕೋಪಯೋಗಿ ಇಲಾಖೆ ಮೂಲಕ ಕೆಲಸ ನಡೆಯಲಿದೆ. ಕಟ್ಟಡವು ನೆಲ ಮಹಡಿ ಮತ್ತು 2 ಮಹಡಿಗಳನ್ನು ಹೊಂದಿದ್ದು, ನೆಲ ಮಹಡಿಯಲ್ಲಿ ವಾಹನ ಪಾರ್ಕಿಂಗ್‌, 1ನೇ ಮಾಳಿಗೆಯಲ್ಲಿ ಅಕಾಡೆಮಿಯ ಆಡಳಿತಾತ್ಮಕ ಕಚೇರಿ ಮತ್ತು ಗ್ರಂಥಾಲಯ, 2ನೇ ಮಹಡಿಯಲ್ಲಿ ಸಭಾಂಗಣ ಮತ್ತು ವಸ್ತು ಸಂಗ್ರಹಾಲಯ (ಮ್ಯೂಸಿಯಂ) ಇರುತ್ತದೆ. ಮ್ಯೂಸಿಯಂನಲ್ಲಿ 42 ಕೊಂಕಣಿ ಸಮುದಾಯಗಳ ವಿವಿಧ ಸಂಸ್ಕೃತಿಗೆ ಹಾಗೂ ಬಳಕೆಯ ವಸ್ತುಗಳನ್ನು ಇರಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next