Advertisement

Mangaluru: ಮತ್ಸ್ಯ ಕ್ಷಾಮದೊಂದಿಗೆ ಆಳಸಮುದ್ರ ಮೀನುಗಾರಿಕೆ ಅಂತ್ಯ

12:19 AM May 31, 2024 | Team Udayavani |

ಮಂಗಳೂರು: ರಾಜ್ಯ ಕರಾವಳಿಯಲ್ಲಿ ಈ ಬಾರಿಯ ಮೀನುಗಾರಿಕೆ ಋತು ಶುಕ್ರವಾರ (ಮೇ 31) ಅಂತ್ಯಗೊಳ್ಳಲಿದ್ದು, ಇನ್ನೇನಿದ್ದರೂ ನದಿ, ಸಮುದ್ರ ತೀರದಲ್ಲಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಮಾತ್ರ ಅವಕಾಶವಿದೆ.

Advertisement

ಮೀನುಗಳು ಸಂತಾನೋತ್ಪತ್ತಿ ಮಾಡುವ ಅವಧಿ ಮಳೆಗಾಲ. ಈ ವೇಳೆ ಯಾಂತ್ರಿಕ ದೋಣಿಗಳು ನೀರಿಗೆ ಇಳಿದರೆ ಅವುಗಳ ಸಂತಾನೋತ್ಪತ್ತಿಗೆ ತೊಂದರೆಯಾಗುತ್ತದೆ. ಇದರಿಂದ ಮತ್ಸ್ಯ ಸಂಕುಲಕ್ಕೆ ಹೊಡೆತ ಬೀಳಲಿದೆ. ಜತೆಗೆ ಈ ಸಮಯದಲ್ಲಿ ವಿಪರೀತ ಗಾಳಿ-ಮಳೆ ಇರುವುದರಿಂದ ಮೀನುಗಾರಿಕೆ ನಡೆಸಲು ಅಪಾಯ. ಹೀಗಾಗಿ ಮಳೆಗಾಲದ ಸಮಯ ಯಾಂತ್ರೀಕೃತ ಮೀನುಗಾರಿಕೆ ನಿಷೇಧ ನಿಯಮ ಜಾರಿಯಲ್ಲಿದೆ.

ಜೂ. 1ರಿಂದ ಜುಲೈ 31ರ ವರೆಗೆ ಆಳ ಸಮುದ್ರ ಮೀನುಗಾರಿಕೆಗೆ ರಜೆಯಿದ್ದು, ಈ ಅವಧಿಯಲ್ಲಿ ಯಾಂತ್ರೀಕೃತ ಮೀನುಗಾರಿಕೆ ನಿಷೇಧಿಸಲ್ಪಟ್ಟಿದೆ. ಸಮುದ್ರದಲ್ಲಿ ಮೀನಿನ ಅಲಭ್ಯತೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ಈಗಾಗಲೇ ಬಹುತೇಕ ಯಾಂತ್ರೀಕೃತ ಮೀನುಗಾರಿಕೆ ಬೋಟ್‌ಗಳು ಋತು ಮುಕ್ತಾಯಕ್ಕೂ ಮುನ್ನ ಬಂದರುಗಳಲ್ಲಿ ಲಂಗರು ಹಾಕಿವೆ. ಮೀನುಗಾರಿಕೆಗೆ ತೆರಳಿರುವ ದೋಣಿಗಳು ಶುಕ್ರವಾರ ಸಂಜೆಯೊಳಗೆ ದಡಕ್ಕೆ ಮರಳಲಿವೆ.

ಇನ್ನು ಸಾಂಪ್ರದಾಯಿಕ ಮೀನುಗಾರಿಕೆ
ಇನ್ನು ಮುಂದೆ ನಾಡದೋಣಿಗಳು ಮೀನು ಬೇಟೆಗೆ ಇಳಿಯುತ್ತವೆ. 10 ಅಶ್ವಶಕ್ತಿಯ ಎಂಜಿನ್‌ ಅಳವಡಿಸಿದ ದೋಣಿಗಳಲ್ಲಿ ಸಮುದ್ರದ ಬದಿ ಹಾಗೂ ನದಿಗಳಲ್ಲಿ ಮೀನುಗಾರಿಕೆ ಆರಂಭವಾಗುತ್ತದೆ. ಕರಾವಳಿ ಪ್ರದೇಶದಲ್ಲಿ ಉತ್ತಮವಾಗಿ ಮಳೆಯಾಗಿ ನದಿಯ ಮೂಲಕ ಸಿಹಿ ನೀರು ಸಮುದ್ರ ಸೇರುವುದು ಮತ್ತು ಸೈಕ್ಲೋನ್‌ ಕಾರಣದಿಂದ ಸಮುದ್ರ ನೀರು ಅಡಿಮೇಲಾದರೆ ಮಾತ್ರ ನಾಡದೋಣಿಗಳಿಗೆ ಮೀನಿನ ಲಭ್ಯತೆ ಉತ್ತಮವಾಗಿರುತ್ತದೆ ಎನ್ನುತ್ತಾರೆ ಮೀನುಗಾರರು.

ನಷ್ಟದ ಹಾದಿಯಲ್ಲಿ ಮೀನುಗಾರರು
ದ.ಕ. ಜಿಲ್ಲೆಯಲ್ಲಿ ಈ ಬಾರಿ ಬಹುತೇಕ ಬೋಟ್‌ಗಳು ನಷ್ಟದ ಹಾದಿಯಲ್ಲಿವೆ. ಮೀನುಗಾರಿಕೆಯಲ್ಲಿ ಆರಂಭ ಮತ್ತು ಅಂತ್ಯ ಲಾಭದಾಯಕವಾಗಿರುತ್ತದೆ. ಆದರೆ ಈ ಬಾರಿ ಆರಂಭದಲ್ಲಿ ಹೇರಳ ಮೀನು ಸಿಕ್ಕರೂ ದರ ಸಿಗಲಿಲ್ಲ. ಅಂತ್ಯದಲ್ಲಿ ಸರಿಯಾಗಿ ಮೀನು ಸಿಗದೆ ಬಹುತೇಕ ಮೀನುಗಾರರು ನಷ್ಟ ಅನುಭವಿಸಿದ್ದಾರೆ. ಮಾರ್ಚ್‌ನಿಂದಲೇ ಶೇ. 50ರಷ್ಟು ಬೋಟ್‌ಗಳು ಬಂದರಿನಲ್ಲಿ ಲಂಗರು ಹಾಕಿವೆ.

Advertisement

ಮತ್ಸ್ಯ ಕ್ಷಾಮಕ್ಕೆ ಕಾರಣವೇನು?
ಮಳೆ ಕಡಿಮೆಯಾಗಿದ್ದ ಕಾರಣ ಸಮುದ್ರಕ್ಕೆ ಪೋಷಕಾಂಶಗಳು ಉತ್ಕರ್ಷ ಆಗದೆ ಮೀನುಗ ಪ್ರಮಾಣ ಕಡಿಮೆಯಾಗಿದೆ. ಈ ಬಾರಿ ಉತ್ತಮ ಮಳೆಯಾದರೆ ಮುಂದಿನ ವರ್ಷ ಹೆಚ್ಚಿನ ಪ್ರಮಾಣದ ಮೀನು ನಿರೀಕ್ಷಿಸಬಹುದು ಎನ್ನುತ್ತಾರೆ ಉಡುಪಿ ಜಿಲ್ಲಾ ಮೀನುಗಾರಿಕೆ ಜಂಟಿ ನಿರ್ದೇಶಕರು. ಮತ್ಸ್ಯ ಕ್ಷಾಮಕ್ಕೆ ಕಾರಣ ಏನು ಎನ್ನುವುದನ್ನು ಸಮುದ್ರ ವಿಜ್ಞಾನಿಗಳು ಮಾತ್ರ ತಿಳಿಸಲು ಸಾಧ್ಯ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಜಂಟಿ ನಿರ್ದೇಶಕರು.

ಜೂ. 1ರಿಂದ ಜುಲೈ 31ರ ವರೆಗೆ ಕರ್ನಾಟಕ ಕರಾವಳಿಯ ಸಮುದ್ರ ತೀರದಲ್ಲಿ ಯಾಂತ್ರೀಕೃತ ಮೀನುಗಾರಿಕೆ ನಿಷೇಧಿಸಲಾಗಿದೆ. 10 ಆಶ್ವಶಕ್ತಿ ವರೆಗಿನ ಸಾಮರ್ಥ್ಯದ ಮೋಟರೀಕೃತ ದೋಣಿ ಹಾಗೂ ಸಾಂಪ್ರದಾಯಿಕ ನಾಡದೋಣಿಗಳು ಮೀನುಗಾರಿಕೆ ನಡೆಸಲು ಅವಕಾಶವಿದೆ.
– ಸಿದ್ದಯ್ಯ ಡಿ., ವಿವೇಕ್‌ ಆರ್‌., ಜಂಟಿ ನಿರ್ದೇಕರು ಮೀನುಗಾರಿಕಾ ಇಲಾಖೆ, ಉಡುಪಿ, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next