Advertisement

Mangaluru ಶುಚಿತ್ವ ಕಾಪಾಡದ ಅಂಗಡಿಗಳ ಮೇಲೆ ಪಾಲಿಕೆ ಆರೋಗ್ಯ ಇಲಾಖೆಯಿಂದ ದಾಳಿ

10:52 PM Oct 24, 2023 | Team Udayavani |

ಮಂಗಳೂರು: ಮಂಗಳೂರು ದಸರಾದ ಸಂತೆ ವ್ಯಾಪಾರದಲ್ಲಿ ಮಟ್ಕಾ ಸೋಡಾ ಮಾರಾಟ ಅಂಗಡಿಯಲ್ಲಿ ಸ್ವಚ್ಛತೆ ಕಾಪಾಡ ಕುರಿತ ವೀಡಿಯೋ ವೈರಲ್‌ ಆದ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು ದಾಳಿ ನಡೆಸಿ ಅಂಗಡಿ ಮುಚ್ಚಿಸಿದ್ದಾರೆ.

Advertisement

ಗ್ರಾಹಕರಿಗೆ ಸೋಡಾ ನೀಡುವ ಮಣ್ಣಿನ ಮಡಕೆಯನ್ನು ಒಮ್ಮೆ ತೊಳೆದ ನೀರಿನಲ್ಲೇ ಮತ್ತೆ ಮತ್ತೆ ತೊಳೆದು ನೀರಿನ ಬಣ್ಣ ಕಪ್ಪು ಕೊಳಕಾಗಿರುವ ಕುರಿತು ಮತ್ತು ಸ್ಟಾಲ್‌ನ ಕೆಲಸದ ವ್ಯಕ್ತಿ ಬಾಯಲ್ಲಿದ್ದ ತಂಬಾಕನ್ನು ಕೈಯಲ್ಲಿ ತೆಗೆದು ಅದೇ ಕೈಯನ್ನು ಮಡಕೆ ತೊಳೆಯಲು ಉಪಯೋಗಿಸುತ್ತಿದ್ದ ನೀರಿಗೆ ಹಾಕಿ ತೊಳೆಯುತ್ತಿದ್ದ ದೃಶ್ಯವನ್ನು ಸಾರ್ವಜನಿಕರೊಬ್ಬರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು.

ಇದರಿಂದ ಎಚ್ಚೆತ್ತ ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳು ಸೋಮವಾರ ಮಧ್ಯಾಹ್ನ ದಾಳಿ ನಡೆಸಿ ಅಲ್ಲಿದ್ದ ಆಹಾರ ಪದಾರ್ಥಗಳನ್ನು ಹಾಗೂ ಇತರ ಸೊತ್ತುಗಳನ್ನು ಜಪ್ತಿ ಮಾಡಿದ್ದಾರೆ. ಅಂಗಡಿ ಮಾಲಕನಿಗೆ ಶುಚಿತ್ವ ಕಾಪಾಡದಿರುವ ಕುರಿತಂತೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಸಂತೆಯಲ್ಲಿರುವ ಇತರ ಸ್ಟಾಲ್‌ಗ‌ಳಿಗೂ ದಿಢೀರ್‌ ಭೇಟಿ ನೀಡಿದ ಅಧಿಕಾರಿಗಳು ಸ್ವತ್ಛತೆಯ ಪರಿಶೀಲನೆ ಮಾಡಿದ್ದಾರೆ.

ಪರವಾನಿಗೆ ರದ್ದು ಮಾಡಲು ಆಗ್ರಹ
ಸಂತೆ ವ್ಯಾಪಾರದಲ್ಲಿ ಮಾತ್ರವಲ್ಲದೆ, ನಗರದ ಬೀದಿ ಬದಿ ವ್ಯಾಪಾರದ ಬಹುತೇಕ ಅಂಗಡಿಗಳು ಮತ್ತು ಸಣ್ಣ ಫಾಸ್ಟ್‌ಫುಡ್‌ ಮಳಿಗೆಗಳಲ್ಲೂ ಇದೇ ರೀತಿ ಸ್ವಲ್ಪ ನೀರು ಬಳಸಿ ಪ್ಲೇಟ್‌ಗಳು ತೊಳೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸ್ವಚ್ಛತೆ ಕಾಪಾಡದ ಅಂಗಡಿಗಳಿಗೆ ಅಧಿಕಾರಿಗಳು ನಿಯಮಿತವಾಗಿ ದಾಳಿ ನಡೆಸಿ ಪರವಾನಿಗೆ ರದ್ದು ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇಂತಹ ಕ್ರಮವಾದರೆ ಮಾತ್ರ ಬಾಕಿ ಉಳಿದವರು ಎಚ್ಚರಿಕೆ ವಹಿಸುತ್ತಾರೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next