Advertisement
ಪ್ರಕರಣ ವಿವರ: ಮೂಲ್ಕಿ ಪೊಲೀಸ್ ಠಾಣೆಯ ಸರಹದ್ದಿನ ತಾಳಿಪಾಡಿ ಗ್ರಾಮದ ಪದ್ಮನೂರು ಶೆಟ್ಟಿಕಾಡು ಎಂಬಲ್ಲಿ 2022ರ ಜೂ. 23ರಂದು ಸಂಜೆ ಸುಮಾರು 5.15ರ ವೇಳೆಗೆ ಹಿತೇಶ್ ತನ್ನ ಮಕ್ಕಳಾದ ರಶ್ಮಿತಾ (14), ಉದಯ ಕುಮಾರ್ (11) ಮತ್ತು ದಕ್ಷಿತ್ ಯಾನೇ ದಕ್Ò ಕುಮಾರ್ (4) ನನ್ನು ಮನೆಯ ಬಳಿ ಇರುವ ಅಶೋಕ್ ಶೆಟ್ಟಿಗಾರ್ ಎಂಬವರ ಬಾವಿಗೆ ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಸಂಜೆ 5.35ರ ವೇಳೆ ಹೆಂಡತಿ ಲಕ್ಷ್ಮೀ ಮನೆಗೆ ಬಂದು ಮಕ್ಕಳ ಬಗ್ಗೆ ಕೇಳಿದಾಗ ಹೊರಗೆ ಹೋಗಿದ್ದಾರೆ ಬಾವಿಯ ಹತ್ತಿರ ಆಟವಾಡುತ್ತಿದ್ದಾರೆ ಎಂದೆಲ್ಲ ಉತ್ತರ ನೀಡಿದ್ದು, ಆಕೆ ಬಾವಿಯ ಹತ್ತಿರ ಹೋದಾಗ ಆಕೆಯನ್ನೂ ಕೂಡ ಬಾವಿಗೆ ದೂಡಿ ಹಾಕಿ ಕೊಲೆ ಮಾಡಲು ಯತ್ನಿಸಿದ್ದಾನೆ.
ಶಿಕ್ಷೆಗೊಳದಾಗ ಹಿತೇಶ್ ಈ ಮೊದಲು ಎಂಆರ್‌ಪಿಎಲ್‌ನಲ್ಲಿ ಕ್ಯಾಂಟೀನ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಕೋವಿಡ್ ಅನಂತರ ಕೆಲಸವಿಲ್ಲದೆ ಮನೆಯಲ್ಲಿದ್ದ. ತನ್ನ ಉದಾಸೀನ ಪ್ರವೃತ್ತಿಯಿಂದ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಹೆಂಡತಿ ಬೀಡಿ ಕಟ್ಟುತ್ತಿದ್ದು, ಮಕ್ಕಳನ್ನು ಸಾಕಲು ಕಷ್ಟವಾಗುತ್ತದೆ ಎಂದು ಹತ್ತಿರದ ಹೊಟೇಲ್ ಒಂದಕ್ಕೆ ಕೆಲಸ ಹೋಗಲು ಆರಂಭಿಸಿ 15 ದಿನ ಆಗಿತ್ತು. ಹೆಂಡತಿ ಕೆಲಸಕ್ಕೆ ಹೋಗುತ್ತಿದ್ದಾಳೆ ತಾನು ಮನೆಯಲ್ಲಿದ್ದೇನೆ ಎನ್ನುವ ಅವಮಾನವೂ ಆತನಿಗಿತ್ತು. ಹೆಂಡತಿ ಮಕ್ಕಳನ್ನು ಸಾಕಲು ಕಷ್ಟವಾಗುತ್ತದೆ ಅವರನ್ನು ಸಾಯಿಸಿದರೆ ತನಗೆ ಹೇಗೆ ಬೇಕಾದರೂ ಜೀವಿಸಬಹುದೆಂದು ಯೋಚಿಸಿ ತನ್ನ ಮೂವರು ಮಕ್ಕಳನ್ನು ಬಾವಿಗೆ ಹಾಕಿ ಕೊಲೆ ಮಾಡಿ ತನ್ನ ಹೆಂಡತಿಯನ್ನೂ ಕೂಡ ಬಾವಿಗೆ ದೂಡಿ ಹಾಕಿ ಕೊಲೆಗೆ ಪ್ರಯತ್ನಿಸಿದ್ದಾನೆ. ಕೋವಿಡ್ ಬಳಿಕ ರಸ್ತೆ ಬದಿಯಲ್ಲಿ ಸ್ವಲ್ಪ ಕಾಲ ಬೊಂಡ ವ್ಯಾಪಾರ ಮಾಡುತ್ತಿದ್ದ. ಬಳಿಕ ಅದನ್ನೂ ಬಿಟ್ಟಿದ್ದ. ಮದುವೆ ಆಗಿ ಸುಮಾರು 16-17 ವರ್ಷ ಆಗಿತ್ತು. ಆತ ಮಾನಸಿಕ ಅಸ್ವಸ್ಥನಾಗಿರಲಿಲ್ಲ.
Related Articles
ಮುಲ್ಕಿ ಠಾಣೆಯ ನಿರೀಕ್ಷಕರಾದ ಕುಸುಮಾಧರ್ ಕೆ.ಅವರು ತನಿಖೆ ಪೂರ್ಣಗೊಳಿಸಿ ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಈ ಪ್ರಕರಣದಲ್ಲಿ ಅಭಿಯೋಜನೆ ಪರ ಒಟ್ಟು 32 ಸಾಕ್ಷಿದಾರರನ್ನು ವಿಚಾರಿಸಲಾಗಿದೆ. ಪ್ರಕರಣದ ಸಾಕ್ಷÂ, ದಾಖಲೆಗಳು ಹಾಗೂ ಪೂರಕ ಸಾಕ್ಷÂ ಹಾಗೂ ವಾದ ಪ್ರತಿವಾದವನ್ನು ಆಲಿಸಿ ಆರೋಪಿಯ ವಿರುದ್ಧ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ಡಿ.30ರಂದು ನ್ಯಾಯಾ ಧೀಶರಾದ ಸಂಧ್ಯಾ ಎಸ್. ಅವರು ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆ ಮತ್ತು ಹೆಂಡತಿಯನ್ನು ಕೊಲೆಗೆ ಯತ್ನಿಸಿದ್ದಕ್ಕೆ 10 ವರ್ಷಗಳ ಕಾರಾಗೃಹವಾಸದ ಶಿಕ್ಷೆಯನ್ನು ವಿಧಿಸಿದ್ದಾರೆ.
Advertisement
ಮಕ್ಕಳ ತಾಯಿ ಲಕ್ಷ್ಮೀ ಅವರಿಗೆ ಸೂಕ್ತ ಪರಿಹಾರವನ್ನು ಕಾನೂನು ಸೇವೆಗಳ ಪ್ರಾ ಧಿಕಾರವು ನೀಡಬೇಕೆಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಎಲ್ಲ ಸಾಕ್ಷಿದಾರರ ವಿಚಾರಣೆಯನ್ನು ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ.ಅವರು ನಡೆಸಿ ವಾದ ಮಂಡಿಸಿದ್ದಾರೆ.
ಅಳುಕಿಲ್ಲದೆ ಸಾಕ್ಷಿ ನುಡಿದರುಸಾಮಾನ್ಯವಾಗಿ ಸಾಕ್ಷಿ ಹೇಳಲು ಬರುವವರು ಒತ್ತಾಯದಲ್ಲಿ ಬರುತ್ತಾರೆ. ಆದರೆ ಈ ಪ್ರಕರಣದಲ್ಲಿ ಹಿತೇಶ್‌ನ ಸಹೋದರರು ಸೇರಿದಂತೆ ಊರಿನವರು ಆತನ ವಿರುದ್ಧ ಸ್ವಯಂ ಪ್ರೇರಿತವಾಗಿ ಬಂದು ಯಾವುದೇ ಅಳುಕಿಲ್ಲದೆ ಸಾಕ್ಷಿ ನುಡಿದಿದ್ದಾರೆ. ಹೈಕೋರ್ಟ್ ದೃಢೀಕರಣ
ಮರಣ ದಂಡನೆ ಆದೇಶ ಜಾರಿಯಾಗಲು ಹೈಕೋರ್ಟ್ ದೃಢೀಕರಣ ಬೇಕು. ದೃಢೀಕರಣಕ್ಕಾಗಿ ಸಲ್ಲಿಸಿದಾಗ ಅದನ್ನು ವಿಭಾಗೀಯ ಪೀಠಕ್ಕೆ ವರ್ಗಾವಣೆ ಮಾಡುತ್ತಾರೆ. ಜತೆಗೆ ಆತನಿಗೆ ಹೈಕೋರ್ಟ್‌ಗೆ ಅಪೀಲು ಮಾಡುವ ಅವಕಾಶವೂ ಇದೆ. ತೀರ್ಪು ಪ್ರಕಟಿಸಿದಾಗ ಆತನ ನಗು ಮಾಯ
ತೀರ್ಪು ಪ್ರಕಟಿಸುವ ವೇಳೆ ಆತನ ಪತ್ನಿ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಮಹಿಳೆ ತುಂಬಾ ನೊಂದಿದ್ದಾರೆ. ಆತನನ್ನು ನೋಡಿದರೆ ಅವರಿಗೆ ಆಕ್ರೋಶ ಉಂಟಾಗುತ್ತಿತ್ತು. ಅಳುತ್ತಲೇ ಸಾಕ್ಷಿ ನುಡಿದಿದ್ದಾರೆ. ಗಂಡನಿಗೆ ಶಿಕ್ಷೆ ಆಗಲೇಬೇಕು ಎನ್ನುವ ಉದ್ದೇಶವೇ ಅವರಲ್ಲಿತ್ತು. ಆರೋಪ ಸಾಬೀತು ಆಗಿದೆ ಎಂದು ನ್ಯಾಯಧೀಶರು ತಿಳಿಸಿದಾಗ ಆತ ವಿಚಲಿತಗೊಂಡಿರಲಿಲ್ಲ. ಶಿಕ್ಷೆ ಪ್ರಕಟವಾಗುವುದಕ್ಕೆ ಮೊದಲು ಬೇರೆ ಕೈದಿಗಳ ಜತೆ ನಗುತ್ತ ಮಾತನಾಡುತ್ತಿದ್ದ. ಗಲ್ಲು ಶಿಕ್ಷೆ ಎಂದು ತೀರ್ಪು ಪ್ರಕಟಿಸಿದಾಗ ಮುಖದಲ್ಲಿ ಬೇಸರದ ಭಾವ ಕಂಡು ಬಂದಿದೆ. ನಗು ಮಾಯವಾಗಿದೆ. ಬಾವಿಗೆ ಎತ್ತಿಹಾಕಿದ್ದಾನೆ ಎನ್ನುವುದೇ ಯಕ್ಷ ಪ್ರಶ್ನೆ
ಮಕ್ಕಳನ್ನು ಎತ್ತಿ ಹಾಕಿದ ಬಾವಿಗೆ ಸುಮಾರು ಎರಡು ಅಡಿ ಎತ್ತರದ ತಡೆಗೋಡೆ ಇತ್ತು. ಅಷ್ಟು ಎತ್ತರದ ತಡೆಗೋಡೆ ಇದ್ದರೂ ಮೂವರು ಮಕ್ಕಳನ್ನು ಹೇಗೆ ಎತ್ತಿ ಹಾಕಿದ್ದಾನೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಆತ ಮಾತ್ರ “ಮಕ್ಕಳು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾರೆ’ ಎಂದಷ್ಟೇ ನ್ಯಾಯಾಲಯದ ಮುಂದೆ ಹೇಳುತ್ತಿದ್ದ. ಬಾವಿಯೊಳಗೆ ಪೈಪ್ ಹಿಡಿದು ನಿಂತಿದ್ದರು
ಒಂದು ಮಗು ಅಂಗನವಾಡಿಗೆ ಹೋಗುತ್ತಿತ್ತು. ಇನ್ನಿಬ್ಬರು ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಹೆಂಡತಿ ಪ್ರತಿ ದಿನ ಸಂಜೆ 5.30ರ ವೇಳೆಗೆ ಮನೆಗೆ ಬರುತ್ತಿದ್ದರು. ಈ ವೇಳೆ ಮಕ್ಕಳು “ಅಮ್ಮ ಬಂದ್ರು ಅಮ್ಮ ಬಂದ್ರು’ ಎಂದು ಹೇಳಿ ಓಡಿಕೊಂಡು ಬರುತ್ತಿದ್ದರು. ಆದರೆ ಆ ದಿನ ಮಾತ್ರ ಬಂದಿರಲಿಲ್ಲ. ಮಕ್ಕಳು ಶಾಲೆಯಿಂದ ಬಂದ ಬಳಿಕ ಮಕ್ಕಳನ್ನು ಪುಸಲಾಯಿಸಿ ಬಾವಿ ಬಳಿಗೆ ಕರೆದುಕೊಂಡು ಹೋಗಿ ಎತ್ತಿ ಬಾವಿಗೆ ಹಾಕಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ ನೋಡಿದಾಗ ಮಕ್ಕಳು ಬಾವಿಯಲ್ಲಿದ್ದ ಸಬ್‌ಮರ್ಸಿಬಲ್ ಪಂಪ್‌ನ ಪೈಪ್ ಹಿಡಿದುಕೊಂಡು ನಿಂತಿರುವುದು ಕಂಡು ಬಂದಿದೆ. ಮನೆಯಿಂದ ಕತ್ತಿ ತಂದು ಪೈಪ್ ಮತ್ತು ಅದಕ್ಕೆ ಆಧಾರವಾಗಿ ಕಟ್ಟಿದ್ದ ಹಗ್ಗವನ್ನು ತುಂಡರಿಸಿದ್ದಾನೆ. ಈ ವೇಳೆ ಮಕ್ಕಳು ಮತ್ತೆ ನೀರಿಗೆ ಬಿದ್ದು ಅಲ್ಲೇ ಸಾವನ್ನಪ್ಪಿದ್ದಾರೆ. ಅಗ್ನಿಶಾಮಕ ದಳದವರು ಒಂದು ಮಗುವನ್ನು ತೆಗೆಯುವಾಗ ಮಗು ಪೈಪನ್ನೇ ಹಿಡಿದುಕೊಂಡಿದ್ದ ದೃಶ್ಯ ಮನ ಕಲಕುವಂತಿತ್ತು. ಆಕಸ್ಮಿಕವಾಗಿ ಆತನೂ ಬಾವಿಗೆ ಬಿದ್ದಿದ್ದ
ಹೆಂಡತಿಯನ್ನು ಎತ್ತಿ ಬಾವಿಗೆ ಹಾಕುವಾಗ ಆಕೆ ಆತನನ್ನು ಹಿಡಿದುಕೊಂಡ ಕಾರಣ ಇಬ್ಬರೂ ಬಾವಿಗೆ ಬಿದ್ದಿದ್ದಾರೆ. ಇದಕ್ಕೂ ಮೊದಲು ಆಕೆ ಬಾವಿಗೆ ಇಣುಕುವಾಗ ಒಂದು ಮಗು ಇನ್ನೂ ಬಾವಿಯ ಬದಿಯಲ್ಲಿ ನಿಂತಿತ್ತು. ಇವರು ಬೀಳುವಾಗ ಮಗು ಮತ್ತೆ ನೀರಿಗೆ ಬಿದ್ದಿದೆ. ಬಾವಿಗೆ ಬಿದ್ದ ಬಳಿಕ ಹೆಂಡತಿಯ ಕುತ್ತಿಗೆಯನ್ನು ಹಿಡಿದು ಬಾವಿಯಲ್ಲಿ ಮುಳುಗಿಸಲು ನೋಡಿದ್ದಾನೆ. ಆಕೆ ತಪ್ಪಿಸಿಕೊಂಡು ಬೊಬ್ಬೆ ಹಾಕಿದ್ದು, ಆಗ ಹತ್ತಿರದಲ್ಲಿ ಬೊಂಡ ವ್ಯಾಪಾರಿ ಹಾಗೂ ಇತರ ಅಕ್ಕಪಕ್ಕದವರು ಸೇರಿ ಹಗ್ಗದ ಸಹಾಯದಿಂದ ಇಬ್ಬರನ್ನು ರಕ್ಷಿಸಿದ್ದಾರೆ.