ಮಹಾನಗರ: ಈ ಬಾರಿಯ ಕರಾವಳಿ ಉತ್ಸವವನ್ನು ವಿಭಿನ್ನವಾಗಿ ಆಯೋಜಿಸಲು ಸಿದ್ಧತೆ ನಡೆಯುತ್ತಿದೆ. ತುಳುನಾಡಿನ ಅಹಾರ ಹಾಗೂ ಸಂಸ್ಕೃತಿಗೆ ಒತ್ತು ನೀಡುವ ಮೂಲಕ ಈ ವರೆಗೆ ಕರಾವಳಿ ಉತ್ಸವ ಎಂದರೆ ‘ಪ್ರದರ್ಶನ’ ಎಂದು ಜನಮಾನಸದಲ್ಲಿ ಇದ್ದ ಭಾವನೆಯನ್ನು ಬದಲಾಯಿಸಲಾಗುವುದು. ಜತೆಗೆ ಉತ್ಸವದ ಸ್ಥಳವೂ ಬದಲಾಗಲಿದೆ.
ಈವರೆಗೆ ಲಾಲ್‌ಬಾಗ್‌ನ ಮಂಗಳಾ ಕ್ರೀಡಾಂಗಣದ ಒತ್ತಿಗೆ ಇರುವ ಮೈದಾನದಲ್ಲಿ ಕರಾವಳಿ ಉತ್ಸವ ನಡೆಯುತ್ತಿತ್ತು.
ವಸ್ತು ಪ್ರದರ್ಶನದ ಜತೆಯಲ್ಲೇ ಸಾಂಸ್ಕೃತಿ ಕಾರ್ಯಕ್ರಮಗಳು ಪ್ರದರ್ಶನಗೊಳ್ಳುತ್ತಿದ್ದವು. ಈ ಬಾರಿ ಪಿಲಿಕುಳದ ಅರ್ಬನ್ ಹಾಥ್‌ಗೆ ಸ್ಥಳಾಂತರಗೊಳ್ಳಲಿದೆ. ಈಗ ಅಲ್ಲಲ್ಲಿ ಆಗಾಗ ವಸ್ತು ಪ್ರದರ್ಶನಗಳು ನಡೆಯುತ್ತಿರುವುದರಿಂದ ಕರಾವಳಿ ಉತ್ಸವದ ಪ್ರದರ್ಶನ ನೋಡಲೆಂದೇ ಬರುವ ಜನರ ಸಂಖ್ಯೆ ಕಡಿಮೆಯಾಗಿದೆ. ಪ್ರದರ್ಶನ ಸ್ಟಾಲ್‌ಗಳನ್ನು ಸ್ಥಾಪಿಸುವವರ ಸಂಖ್ಯೆಯೂ ವಿರಳವಾಗಿದೆ. ಹಾಗಾಗಿ ಬದಲಾದ ಕಾಲಘಟ್ಟದಲ್ಲಿ ಕರಾವಳಿ ಉತ್ಸವದ ಸ್ವರೂಪದಲ್ಲಿ ಕೂಡ ಬದಲಾವಣೆ ಅಗತ್ಯ ಎಂದು ಕರಾವಳಿ ಉತ್ಸವ ಸಮಿತಿಯ ಸಮಾಲೋಚನೆ ಸಭೆಯಲ್ಲಿ ಅಭಿಪ್ರಾಯ ಕೇಳಿಬಂದಿತ್ತು. ಆಹಾರೋತ್ಸವ ತುಳುನಾಡಿನ ಶೈಲಿಯ ಆಹಾರ, ವಿಶೇಷವಾಗಿ ಬ್ಯಾರಿ, ಕೊಂಕಣಿ, ಬಂಟ, ಮೊಗವೀರ ಇತ್ಯಾದಿ ಸಮುದಾಯಗಳ ಆಹಾರ ವೈಭವ, ಸಸ್ಯಾಹಾರ, ಮಲೆನಾಡು ಶೈಲಿಯ ಅಹಾರೋತ್ಸವ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.ಕರಾವಳಿ ಉತ್ಸವದ ಸ್ವರೂಪ ಬದಲಾವಣೆ ಬಗ್ಗೆ ಸಭೆಯಲ್ಲಿ ಹಲವು ರೀತಿ ಚರ್ಚೆಗಳು ನಡೆದಿವೆ. ಇನ್ನೂ ಯಾವುದೇ ಅಂತಿಮ ನಿರ್ಣಯಕ್ಕೆ ಬಂದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಕೂಡಾ ಚರ್ಚಿಸಿ ನಿರ್ಧರಿಸುತ್ತೇವೆ.
-ಮುಲ್ಲೈ ಮುಗಿಲನ್ ಜಿಲ್ಲಾಧಿಕಾರಿ, ದ.ಕ.
ಪಿಲಿಕುಳಕ್ಕೆ ಜನರನ್ನು ಸೆಳೆಯುವ ಉದ್ದೇಶ
ಈ ಹಿಂದೆ ಎ.ಬಿ. ಇಬ್ರಾಹಿಂ ಅವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಪಿಲಿಕುಳದಲ್ಲಿ ಹಲವು ಬಾರಿ ಆಹಾರ ಮೇಳ, ಮಾವುಮೇಳ, ಮತ್ಸ್ಯ ಉತ್ಸವ ಇತ್ಯಾದಿಗಳನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಅದನ್ನು ಗಮನದಲ್ಲಿರಿಸಿ ಹಾಗೂ ನಿಸರ್ಗಧಾಮಕ್ಕೆ ಹೆಚ್ಚು ಮಂದಿಯನ್ನು ಆಕರ್ಷಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಮುಖ್ಯ ಕಾರ್ಯಕ್ರಮಗಳು ಪಿಲಿಕುಳದಲ್ಲಿ ನಡೆದರೂ ಕೆಲವೊಂದು ಪೂರಕ ಕಾರ್ಯಕ್ರಮಗಳು ಪುರಭವನ ಬಳಿಯ ರಾಜಾಜಿ ಪಾರ್ಕ್ ಆ್ಯಂಪಿ ಥಿಯೇಟರ್ ಹಾಗೂ ಕದ್ರಿ ಪಾರ್ಕ್‌ನಲ್ಲೂ ನಡೆಯಲಿವೆ.
ಬೀಚ್ ಉತ್ಸವ
ಈ ಬಾರಿಯೂ ಬೀಚ್ ಉತ್ಸವ ಇರಲಿದೆ. ಪಣಂಬೂರಿನಲ್ಲೋ ತಣ್ಣೀರುಬಾವಿ ಬೀಚ್‌ನಲ್ಲೋ ಎಂದು ಇನ್ನಷ್ಟೇ ತೀರ್ಮಾನವಾಗಬೇಕಿದೆ.
ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಿ ಅವರಿಂದ ಸಾಂಸ್ಕೃತಿಕ ಜಾನಪದ ಕಲಾ ಪ್ರದರ್ಶನ ಏರ್ಪಡಿಸುವ ಉದ್ದೇಶವೂ ಇದೆ. ಹಿಂದೆ ಕರಾವಳಿ ಉತ್ಸವದಲ್ಲಿ ಸ್ಟಾರ್ ಕಲಾವಿದರ ಪ್ರದರ್ಶನವೂ ಇರುತ್ತಿತ್ತು. ಈ ಬಾರಿ ಬರುವ ಅನುದಾನದ ಆಧಾರದಲ್ಲಿ ಇದು ನಿರ್ಧಾರವಾಗಲಿದೆ.
-ವೇಣುವಿನೋದ್ ಕೆ.ಎಸ್