Advertisement

Mangaluru;’ಸ್ವಚ್ಛ ಸುಜಲ’ದತ್ತ ಗ್ರಾಮ ಪಂಚಾಯತ್‌ಗಳು

11:33 PM Jan 02, 2025 | Team Udayavani |

ಮಂಗಳೂರು: ಬಯಲುಶೌಚ ಮುಕ್ತವಾಗಿ, ಸ್ವತ್ಛತೆಯ ಹಲವು ಮಾನದಂಡದಲ್ಲಿ ತೇರ್ಗಡೆಗೊಂಡಿರುವ ಗ್ರಾಮಗಳು ಈಗ ‘ಸ್ವಚ್ಛ ಸುಜಲ ಗ್ರಾಮ’ಗಳಾಗಿ ಹೊರಹೊಮ್ಮಲು ಸಿದ್ಧವಾಗಿವೆ.

Advertisement

ಬಯಲು ಬಹಿರ್ದೆಸೆ ಮುಕ್ತಗೊಂಡು, ತ್ಯಾಜ್ಯ ನಿರ್ವಹಣೆ ಘಟಕಾಂಶಗಳನ್ನು ಅಳವಡಿಸಿಕೊಂಡು ಸ್ವಚ್ಛತೆಯಲ್ಲಿ ಮಾದರಿ ಯಾಗಿರುವ ರಾಜ್ಯದ 4,667 ಗ್ರಾಮಗಳನ್ನು ಗುರುತಿಸಿ ಅವುಗಳನ್ನು ಸ್ವ ಭಾರತ್‌ ಮಿಷನ್‌(ಗ್ರಾಮ) ಯೋಜನೆಯಡಿ “ಒಡಿಎಫ್ (ಓಪನ್‌ ಡೆಫಿಕೇಷನ್‌ ಫ್ರೀ) ಪ್ಲಸ್‌ ಮಾದರಿ’ ಗ್ರಾಮಗಳೆಂದು ಗುರುತಿಸಲಾಗಿದೆ. ಇದರ ಜತೆಗೆ ಜಲಜೀವನ್‌ ಮಿಷನ್‌ ಯೋಜನೆಯಡಿ ಶೇ.100ರಷ್ಟು ಕಾರ್ಯಾತ್ಮಕ ನಳ್ಳಿ ಸಂಪರ್ಕಗಳನ್ನು ಒದಗಿಸುವ ಮೂಲಕ ಸುಮಾರು 4,211 ಗ್ರಾಮಗಳನ್ನು ಹರ್‌ ಘರ್‌ ಜಲ್‌ ಎಂದು ಘೋಷಿಸಲಾಗಿದೆ.

ಈಗ ಇವೆರಡೂ ಯೋಜನೆಗಳನ್ನು ಪೂರ್ಣಗೊಳಿಸಿರುವ ಹಾಗೂ ಸ್ವಚ್ಛತೆಗೆ ಸಂಬಂಧಿಸಿ ಹೆಚ್ಚುವರಿ ಕ್ರಮಗಳನ್ನು ಅನುಷ್ಠಾನಗೊಳಿಸಿರುವ ಗ್ರಾಮಗಳನ್ನು ಗುರುತಿಸಿ ಅವಗಳ ಸುಸ್ಥಿರತೆ ಕಾಪಾಡುವುದಕ್ಕಾಗಿ ‘ಸ್ವಚ್ಛ ಸುಜಲ ಗ್ರಾಮ’ವೆಂದು ಘೋಷಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಮೂಲಕ ಗ್ರಾಮೀಣ ಭಾಗದಲ್ಲಿ ಸ್ವತ್ಛತೆ ಕಾಪಾಡುವ ಮತ್ತು ಶುದ್ಧ ಕುಡಿಯುವ ನೀರಿನ ಪೂರೈಕೆ ದಿಸೆಯಲ್ಲಿ ಗ್ರಾಮಗಳಿಗೆ ಮತ್ತೂಂದು ಗರಿ ಸೇರಲಿದೆ.

ದ.ಕ. ಜಿಲ್ಲೆಯಲ್ಲಿ 151 ಗ್ರಾಮಗಳು ಒಡಿಎಫ್ ಪ್ಲಸ್‌ ಆಗಿರುವುದನ್ನು ದೃಢೀಕರಿಸಲಾಗಿದೆ. ಉಳಿದ ಗ್ರಾಮಗಳ ದೃಢೀಕರಣ ಪ್ರಕ್ರಿಯೆ ನಡೆಯುತ್ತಿದೆ. ಜಲಜೀವನ್‌ ಮಿಷನ್‌ ಯೋಜನೆಯಡಿ 74 ಗ್ರಾಮಗಳನ್ನು ದೃಢೀಕರಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ 50ಕ್ಕೂ ಅಧಿಕ ಗ್ರಾಮಗಳು ಒಡಿಎಫ್ ಪ್ಲಸ್‌ ಹಾಗೂ 29 ಗ್ರಾಮಗಳು ಜಲಜೀವನ್‌ ಮಿಷನ್‌ನಲ್ಲಿ ದೃಢೀಕರಣ ಪಡೆದುಕೊಂಡಿವೆ.

17 ಅಂಶಗಳ ಗುರಿ
ಸ್ವತ್ಛತೆ ಮತ್ತು ಶುದ್ಧ ಕುಡಿಯುವ ನೀರಿನಲ್ಲಿ ಪ್ರಗತಿ ಸಾಧಿಸಿರುವ ಗ್ರಾಮಗಳು ಇದನ್ನು ಉಳಿಸಿಕೊಂಡು ಹೋಗುವುದಕ್ಕಾಗಿ ಕೇಂದ್ರ ಸರಕಾರ ಸುಸ್ಥಿರ ಅಭಿವೃದ್ಧಿ ಗುರಿ(ಎಸ್‌ಡಿಜಿ) ನೀಡಿದ್ದು, ಅದರ ಭಾಗವಾಗಿ “ಸ್ವಚ್ಛ ಸುಜಲ ಗ್ರಾಮ’ ದೃಢೀಕರಣ ನೀಡಲಾಗುತ್ತಿದೆ. ಇದು 17 ಅಂಶಗಳನ್ನು ಒಳಗೊಂಡಿದ್ದು, ಇದರಲ್ಲಿ ಸ್ವಚ್ಛ ಗ್ರಾಮ ಮತ್ತು ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರಿನ ಪೂರೈಕೆ ಪ್ರಮುಖವಾಗಿದೆ.

Advertisement

ನೀರಿನ ಶುದ್ಧತೆ ಪರೀಕ್ಷೆ
ಜೆಜೆಎಂನಲ್ಲಿ ಪ್ರತಿಯೊಂದು ಮನೆಗೆ ನೀಡುವ ನೀರಿನ ಶುದ್ಧತೆಯನ್ನು ಖಾತರಿಪಡಿಸಲಾಗುತ್ತದೆ. ಇದಕ್ಕಾಗಿ ಪ್ರತಿ ಗ್ರಾ.ಪಂ.ಗೆ ಫೀಲ್ಡ್‌ ಟೆಸ್ಟ್‌ ಕಿಟ್‌ ನೀಡಲಾಗುತ್ತದೆ. ಅಲ್ಲದೆ ಜಿಲ್ಲೆಯ ವಿವಿಧೆಡೆ ಪ್ರಯೋಗಾಲಯ ಸ್ಥಾಪಿಸಲಾಗುತ್ತದೆ. ಅದರಂತೆ ದ.ಕ. ಜಿಲ್ಲೆಯ ಮಂಗಳೂರು, ಪುತ್ತೂರು ಮತ್ತು ಬೆಳ್ತಂಗಡಿಯಲ್ಲಿ ಸ್ಥಾಪಿಸಲಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಘಟಕದಲ್ಲೂ ಇಂತಹ ಪ್ರಯೋಗಾಲಯಗಳಿವೆ. ಪ್ರತಿಯೊಂದು ಮನೆಯ ನಳ್ಳಿಯಲ್ಲಿ ಬರುವ ನೀರಿಗೆ ಶುದ್ಧತೆ ಖಾತರಿ ನೀಡಲಾಗುತ್ತದೆ.

ತ್ಯಾಜ್ಯ ನಿರ್ವಹಣೆಗೆ ಕ್ರಮ
“ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛತೆ ಮತ್ತು ಶುದ್ಧ ಕುಡಿಯುವ ನೀರಿಗೆ ಸಂಬಂಧಿಸಿ ಎಲ್ಲ ಅವಶ್ಯ ಕೆಲಸಗಳನ್ನು ಪೂರ್ಣಗೊಳಿಸಿದ್ದೇವೆ. ಅಂಗನವಾಡಿ, ಶಾಲೆ, ಮನೆಗಳಲ್ಲಿ ಶೌಚಾಲಯಗಳು ನಿರ್ಮಾಣಗೊಂಡಿವೆ. ಅಗತ್ಯ ಇರುವಲ್ಲಿ ದ್ರವ ತ್ಯಾಜ್ಯ, ಘನ ತ್ಯಾಜ್ಯ ನಿರ್ವಹಣ ಘಟಕಗಳನ್ನೂ ನಿರ್ಮಿಸಲಾಗಿದೆ. ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರಿನ ಸಂಪರ್ಕ ಮಾಡಲಾಗಿದೆ. ಈಗ ಎಲ್ಲರ ಸಹಕಾರದಿಂದ ನಮ್ಮ ಗ್ರಾಮ ಕೂಡ “ಸ್ವಚ್ಛ ಸುಜಲ ಗ್ರಾಮ’ವಾಗಿ ಘೋಷಣೆಯಾಗಿರುವುದಕ್ಕೆ ಸಂತಸವಾಗಿದೆ ಎನ್ನುತ್ತಾರೆ ಬೆಳ್ತಂಗಡಿ ತಾಲೂಕು ಸುಲ್ಕೇರಿ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಗಾಯತ್ರಿ.

ಸುಸ್ಥಿರ ಗ್ರಾಮಕ್ಕೆ ಪೂರಕ
ಶೌಚಾಲಯ ನಿರ್ಮಾಣ ಮಾತ್ರವಲ್ಲದೆ, ತ್ಯಾಜ್ಯ ವಿಲೇವಾರಿಗೂ ಕ್ರಮ ಕೈಗೊಂಡ ಗ್ರಾ.ಪಂ.ಗಳಿಗೆ ಒಡಿಎಫ್ ಪ್ಲಸ್‌ ಪ್ರಮಾಣಪತ್ರ ನೀಡಲಾಗಿದೆ. ಈಗ ಒಡಿಎಫ್ ಪ್ಲಸ್‌ ಪ್ರಮಾಣಪತ್ರದ ಜತೆಗೆ ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರಿನ ಪೂರೈಕೆ ಪೂರ್ಣಗೊಂಡಿರುವ ಹಾಗೂ ನೈರ್ಮಲ್ಯಕ್ಕೆ ಇತರ ಕ್ರಮಗಳನ್ನು ಕೈಗೊಂಡಿರುವ ಗ್ರಾಮಗಳಿಗೆ ‘ಸ್ವಚ್ಛ ಸುಜಲ ಗ್ರಾಮ’ ಮಾನ್ಯತೆ ನೀಡಲಾಗುತ್ತಿದೆ. ಈಗಾಗಲೇ ಬಯಲು ಶೌಚ ಮುಕ್ತಗೊಳಿಸುವುದು ಸಹಿತ ಸ್ವಚ್ಛತೆಗಾಗಿ ಅನುಷ್ಠಾನಗೊಳಿಸಲಾದ ಯೋಜನೆ/ ಕಾರ್ಯಕ್ರಮಗಳ ನಿರ್ವಹಣೆ ಸಮರ್ಪಕವಾಗಿ ಮುಂದುವರಿಯಬೇಕು. ಸುಸ್ಥಿರ ಗ್ರಾಮವಾಗಿ ಬೆಳೆಯಬೇಕೆಂಬ ಉದ್ದೇಶದಿಂದ ಹಂತ ಹಂತವಾಗಿ ಗ್ರಾಮಗಳಿಗೆ ಇಂತಹ ಮಾನ್ಯತೆಗಳನ್ನು ನೀಡಲಾಗುತ್ತಿದೆ.
– ಡಾ| ಆನಂದ್‌, ಸಿಇಒ, ದ.ಕ. ಜಿ.ಪಂ.

ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next