Advertisement
ಪ್ರಯಾಣಿಕ ಸ್ನೇಹಿ ಪರಿಕಲ್ಪನೆ ಸಿಟಿ ಬಸ್‌ಗಳಲ್ಲಿ ಅನುಷ್ಠಾನ ಹಂತಕ್ಕೆ ಬಂದಿದೆ.
Related Articles
Advertisement
ಅಂದ ಹಾಗೆ, ನಗರದಲ್ಲಿ ಕಾರ್ಯಾಚರಣೆ ನಡೆಸುವ ಎಲ್ಲಾ ಸಿಟಿ ಬಸ್‌ಗಳಲ್ಲಿ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ತರಲು ‘ಚಲೋ’ ಸಂಸ್ಥೆಯ ಸಹಯೋಗದೊಂದಿಗೆ ಸಿಟಿ ಬಸ್ ಮಾಲೀಕರ ಸಂಘ ಒಪ್ಪಂದ ಮಾಡಿಕೊಂಡಿದೆ.
ಈ ಕಾರ್ಡ್ ಪಡೆದವರು ನಿಗದಿತವಾಗಿ ರೀಚಾರ್ಜ್ ಮಾಡಿಕೊಂಡರೆ ಸಾಕು. ಬಸ್‌ನಲ್ಲಿ ಪ್ರಯಾಣಿಸುವಾಗ ಈ ಕಾರ್ಡ್ ಅನ್ನೇ ಸ್ಪೈಪ್ ಮಾಡಿ ನಿಗದಿತ ಸ್ಥಳಕ್ಕೆ ಅವರು ಪ್ರಯಾಣಿಸಬಹುದು. ಕಂಡಕ್ಟರ್ ಹಾಗೂ ಪ್ರಯಾಣಿಕರ ಮಧ್ಯೆ ಡಿಜಿಟಲ್ ಪರಿಕಲ್ಪನೆ ಈ ಮೂಲಕ ಮಂಗಳೂರಿನಲ್ಲಿ ಸಾಕಾರ ಹಂತದಲ್ಲಿದೆ.
ಏನಿದು ಸ್ಮಾರ್ಟ್‌ಕಾರ್ಡ್?ಸ್ಮಾರ್ಟ್‌ಕಾರ್ಡ್ ಅಂದರೆ ನಗದು ರಹಿತ ಪ್ರಯಾಣಕ್ಕೆ ಅವಕಾಶ ಎಂಬುದು ತಾತ್ಪರ್ಯ. ಇದು ಸಂಪೂರ್ಣ ಡಿಜಿಟಲ್. ಸಿಟಿ ಬಸ್‌ನಲ್ಲಿ ಪ್ರಯಾಣಿಕರಿಗೆ ಉಚಿತವಾಗಿ ಸ್ಮಾರ್ಟ್‌ಕಾರ್ಡ್ ನೀಡಲಾಗುತ್ತದೆ. ಬಳಿಕ ಪ್ರಯಾಣಿಕರು ಟಾಪ್‌ಅಪ್ ರೀಚಾರ್ಜ್ ಮಾಡಿಸಿಕೊಳ್ಳಬೇಕು. ಸದ್ಯ ಸಿಟಿ ಬಸ್‌ನ ಎಲ್ಲ ನಿರ್ವಾಹಕರಲ್ಲಿ ‘ಇಟಿಎಂ’ ಟಿಕೆಟ್ ಮೆಶಿನ್ ಇದ್ದು, ಸ್ಮಾರ್ಟ್ ಕಾರ್ಡ್ ಜಾರಿಯಾದ ಬಳಿಕ ಅದನ್ನು ಇಟಿಎಂನಲ್ಲಿ ಮುಟ್ಟಿಸಿದರಾಯಿತು. ಆಗ ಪ್ರಯಾಣ ದರವು ಪ್ರಯಾಣಿಕನ ಕಾರ್ಡ್‌ನಿಂದ ಕಡಿತವಾಗುತ್ತದೆ. ಖಾಸಗಿ ಬಸ್ ಸೇವೆ ಆರಂಭವಾಗಿದ್ದೇ ಮಂಗಳೂರಿನಿಂದ!
ರೈಲ್ವೇ, ಹೆದ್ದಾರಿ, ವಿಮಾನ ಹಾಗೂ ನೌಕಾಯಾನ ಸೇವೆಯನ್ನು ಸುಸಜ್ಜಿತವಾಗಿ ಹೊಂದಿರುವ ರಾಜ್ಯದ ಏಕೈಕ ಜಿಲ್ಲೆ ದ.ಕ. ಅದರಲ್ಲಿಯೂ, ಖಾಸಗಿ ಬಸ್ ವ್ಯವಸ್ಥೆ ರಾಜ್ಯದಲ್ಲಿ ಮೊದಲ ಬಾರಿಗೆ ಪರಿಚಯವಾಗಿದ್ದೇ ಮಂಗಳೂರಿನಿಂದ ಎಂಬುದು ಉಲ್ಲೇಖನೀಯ ಸಂಗತಿ. ಕುದುರೆ ಗಾಡಿಯಲ್ಲಿಯೇ ತಿರುಗಾಡುತ್ತಿದ್ದ ಜನರಿಗೆ ಹಾಗೂ ‘ಬಸ್’ ಸಂಚಾರ ಎಂಬ ಪರಿಕಲ್ಪನೆಯೇ ಜಾರಿಯಲ್ಲಿಲ್ಲದ ಹೊತ್ತಿನಲ್ಲಿ ಮಂಗಳೂರಿನಲ್ಲಿ ‘ಕೆನರಾ ಪಬ್ಲಿಕ್ ಕನ್ವೇಯನ್ಸ್ ಕಂಪೆನಿ’ (ಸಿಪಿಸಿ) 1914ರ ಡಿಸೆಂಬರ್‌ನಲ್ಲಿ ಖಾಸಗಿ ಬಸ್ ಸಂಚಾರವನ್ನು ಮಂಗಳೂರಿನಲ್ಲಿ ಆರಂಭಿಸುವ ಮೂಲಕ ಕರಾವಳಿಗೆ ಮೊದಲ ಬಸ್ ವ್ಯವಸ್ಥೆ ಪರಿಚಯಿಸಿತು. ಇದನ್ನೂ ಓದಿ: ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು: ಧರ್ಮಸ್ಥಳಕ್ಕೆ ತೆರಳುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವು ಈ ಮೂಲಕ ಮಂಗಳೂರಿನಲ್ಲಿ ಸಾರ್ವಜನಿಕರಿಗೆ ಖಾಸಗಿ ಬಸ್‌ಗಳ ಮೂಲಕ ಸಂಚಾರ ಸೇವೆ ದೊರೆಯುವಂತಾಯಿತು. ಸಿಪಿಸಿ ಸಂಸ್ಥೆಯ ವಿ.ಎಸ್. ಕಾಮತ್ ಮತ್ತು ವಿ.ಎಸ್. ಕುಡ್ವ ಹಾಗೂ ಅವರ ನಂತರ ಬಂದ ಸಮರ್ಥ ನೇತೃತ್ವದ ಸಾಧಕರ ಮೂಲಕವಾಗಿ ಜಿಲ್ಲೆಯಲ್ಲಿ ಮೊದಲ ಸಾರಿಗೆ ಸಂಸ್ಥೆ ಶುರುವಾಗಿತ್ತು. 1914ರ ಮಾ. 23ರಂದು ಮಂಗಳೂರಿನಿಂದ ಬಂಟ್ವಾಳಕ್ಕೆ ಮೊದಲ ಸಿಪಿಸಿ ಬಸ್ ಸಂಚಾರ ನಡೆಸಿತ್ತು. ಆಗ ಸುಮಾರು 16 ಮೈಲು ಅಂತರ. ಪ್ರತೀದಿನ ಎರಡು ಟ್ರಿಪ್ ಸಂಚಾರವಿತ್ತು. ಪ್ರತೀ ಸಂಚಾರಕ್ಕೆ 1.30 ಗಂಟೆ ಸಮಯ ತಗುಲುತ್ತಿತ್ತು. ಪ್ರತೀ ಟ್ರಿಪ್‌ನಲ್ಲಿ 22 ಮಂದಿ ಸಾಗಿಸುವ ಸಾಮರ್ಥ್ಯವಿತ್ತು. ವಿಶೇಷವೆಂದರೆ, ಅಂದಿನ ಆ ಬಸ್ ಅನ್ನು ಜರ್ಮನಿಯಿಂದ ಮಂಗಳೂರಿಗೆ ಹಡಗಿನ ಮೂಲಕ ತರಲಾಗಿತ್ತು. ಬಸ್‌ಗೆ 2,500 ರೂ. ವೆಚ್ಚವಾಗಿತ್ತು. ಅಂದು ಆರಂಭವಾದ ಖಾಸಗಿ ಬಸ್ ಸೇವೆ ಇಂದಿಗೆ 106ನೇ ವರ್ಷದ ಸಾರ್ಥಕ ಸೇವೆ ನೀಡುತ್ತಿರುವುದು ಸ್ಮರಣೀಯ ವಿಚಾರ.
1916-17ರಲ್ಲಿ ಹಿಂದು ಟ್ರಾನ್ಸಿಟ್ ಕಂಪೆನಿ ಎಂಬ ಹೊಸ ಸಾರಿಗೆ ಸಂಸ್ಥೆ ಆರಂಭವಾಯಿತು. ಬಳಿಕ ಹಲವು ಜನರು, ಕಂಪೆನಿಗಳು ಸಾರಿಗೆ ಸೇವೆಯಲ್ಲಿ ಕೈ ಜೋಡಿಸಿದರು. 1917ರಲ್ಲಿ ಪುತ್ತೂರಿಗೆ ಬಸ್ ಸಂಚಾರ ಆರಂಭವಾಯಿತು. 1939ರಲ್ಲಿ ಮಂಗಳೂರಿನಲ್ಲಿ ಸಿಟಿ ಬಸ್ ಆರಂಭವಾಯಿತು. ‘ಎಂ.ಎ’ ಲಿ.ನ 9 ಬಸ್‌ಗಳು ಸಂಚಾರ ಆರಂಭಿಸಿದವು. ಬಳಿಕ ಒಂದೊಂದೇ ಬಸ್‌ಗಳು ಏರಿಕೆಯಾದವು. ದುರ್ಗಾಪರಮೇಶ್ವರಿ ಮೋಟರ್ ಸರ್ವಿಸ್, ಶಂಕರ್ ವಿಠಲ್, ಮಿಸ್ಕಿತ್ ಮೋಟರ್, ಶೆಟ್ಟಿ ಮೋಟರ್, ಹನುಮಾನ್ ಟ್ರಾನ್ಸ್‌ಪೋರ್ಟ್ಸ್,ಬಿ.ಎನ್.ಎಸ್, ಪಾಪ್ಯುಲರ್ ಮೋಟರ್, ಎಸ್‌ಸಿಎಸ್, ವಿವೇಕ್, ರಾಜರಾಜೇಶ್ವರಿ, ವೆಸ್ಟ್ ಕೋಸ್ಟ್ ಸೇರಿದಂತೆ ಹತ್ತಾರು ಸಂಸ್ಥೆ, ಜನರ ಬಸ್‌ಗಳು ಮಂಗಳೂರಿನಲ್ಲಿ ಸಂಚಾರ ಸೇವೆ ಆರಂಭಿಸಿದರು. 1981ರಲ್ಲಿ ದ.ಕ. ಬಸ್ ಆಪರೇಟರ್ ಆರಂಭವಾಗುವ ಮೂಲಕ ಖಾಸಗಿ ಬಸ್ ಕ್ಷೇತ್ರದಲ್ಲಿ ಹೊಸ ಶಕೆ ಆರಂಭವಾಯಿತು. ಆರ್ಥಿಕವಾಗಿ ಸದೃಢವಾಗಿರುವವರು ಮಾತ್ರ ಬಸ್ ಖರೀದಿ ಮಾಡಿ ಸಂಚಾರ ನಡೆಸುತ್ತಿದ್ದ ಕಾಲದಲ್ಲಿ ಹೊಸ ಮನ್ವಂತರವೊಂದು ನಡೆಯಿತು. 1970ರ ಕಾಲದಲ್ಲಿ ಬಸ್‌ನ ಕಾರ್ಮಿಕರು ಅಥವಾ ಬಸ್‌ನಲ್ಲಿ ದುಡಿಯುತ್ತಿದ್ದವರೇ ಬಸ್‌ಗಳನ್ನು ಖರೀದಿಸುವ ಹೊಸ ಸ್ವರೂಪ ಜಾರಿಗೆ ಬಂತು. ದುಡಿಯುವವರೇ ಈ ಕಾರಣಕ್ಕಾಗಿ ಮಾಲೀಕರಾದರು. ಬಸ್‌ಗಳನ್ನು ಖರೀದಿಸಿದ ದುಡಿಯುವ ವರ್ಗ ಖಾಸಗಿ ಬಸ್ ಸೇವೆಯಲ್ಲಿ ಮಹತ್ವದ ಬದಲಾವಣೆಯೊಂದಕ್ಕೆ ಸಾಕ್ಷಿಯಾದರು. ಅನಂತರ ನೂರಾರು ಬಸ್‌ಗಳನ್ನು ಖರೀದಿ ಮಾಡುವ ಮೂಲಕ ಹೊಸ ಜಮಾನ ಸೃಷ್ಟಿಯಾಯಿತು ಎನ್ನುತ್ತಾರೆ ಮಹೇಶ್ ಬಸ್‌ನ ಮಾಲೀಕರು ಹಾಗೂ ಸಿಟಿ ಬಸ್ ಮಾಲಕರ ಸಂಘದ ಮಾಜಿ ಅಧ್ಯಕ್ಷ ಜಯರಾಮ ಶೇಖ.
‘ಸ್ಮಾರ್ಟ್ ಕಾರ್ಡ್’ನ ಬಳಕೆ ಹೇಗೆ?
ಪ್ರಯಾಣಿಕರು ಪಡೆದುಕೊಳ್ಳುವ ಸ್ಮಾರ್ಟ್‌ಕಾರ್ಡ್‌ಗೆ ಟಾಪ್ ಅಪ್ ರೀಚಾರ್ಜ್ ಮಾಡಿಸಿಕೊಳ್ಳಬೇಕು. ಸ್ಮಾರ್ಟ್ ಕಾರ್ಡ್‌ನ ಸೆಂಟರ್‌ನಲ್ಲಿ ರೀಚಾರ್ಜ್‌ಗೆ ಅವಕಾಶವಿದೆ. ಜತೆಗೆ, ಕೆಲವೇ ದಿನಗಳಲ್ಲಿ ಮೊಬೈಲ್ ರೀಚಾರ್ಜ್ ಅಂಗಡಿಗಳಲ್ಲೂ ಈ ವ್ಯವಸ್ಥೆ ಜಾರಿಗೆ ಬರಲಿದೆ. ಖಾತೆಯಲ್ಲಿದ್ದ ಹಣಕ್ಕೆ ವ್ಯಾಲಿಡಿಟಿ ಇರುವುದಿಲ್ಲ. ಪ್ರಯಾಣಿಕರು ಬಸ್‌ನಲ್ಲಿ ಸಂಚರಿಸುವಾಗ ನಿರ್ವಾಹಕನಿಗೆ ಹಣದ ಬದಲು ಈ ಕಾರ್ಡ್ ನೀಡಿದರಾಯಿತು. ಪ್ರಯಾಣಿಕ ಹತ್ತಿದ ಮತ್ತು ಇಳಿಯುವ ಸ್ಥಳವನ್ನು ನಿರ್ವಾಹಕ ಇಟಿಎಂನಲ್ಲಿ ನಮೂದು ಮಾಡಿ ಈ ಯಂತ್ರಕ್ಕೆ ಈ ಕಾರ್ಡ್ ಮುಟ್ಟಿಸಿದರೆ ಕಾರ್ಡ್ ಖಾತೆಯಿಂದ ಹಣ ಕಡಿತಗೊಳ್ಳುತ್ತದೆ. ಇದರಿಂದಾಗಿ ಪ್ರಯಾಣಿಕರಿಗೆ ನಗದು ಅಥವಾ ಚಿಲ್ಲರೆ ಸಮಸ್ಯೆ ಎದುರಾಗುವುದಿಲ್ಲ. ಪ್ರಯಾಣಿಕರಿಗೆ ‘ಸ್ಮಾರ್ಟ್‌ಕಾರ್ಡ್’ ಉಚಿತ
ಸ್ಮಾರ್ಟ್‌ಕಾರ್ಡ್ ಪಡೆಯಲು ಪ್ರಯಾಣಿಕರು ಯಾವುದೇ ರೀತಿಯ ಶುಲ್ಕ ಪಾವತಿಸಬೇಕಿಲ್ಲ. ನಗರದಲ್ಲಿ ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಔಟ್‌ಲೆಟ್ ಮಾಡಲಾಗಿದೆ. ಅಲ್ಲಿ, ಪ್ರಯಾಣಿಕರು ಆಧಾರ್ ಕಾರ್ಡ್ ಮಾಹಿತಿ ನೀಡಿ ಉಚಿತವಾಗಿ ಈ ಕಾರ್ಡ್ ಪಡೆಯಬಹುದು. ಕೆಲವೇ ದಿನಗಳಲ್ಲಿ ನಗರದ ವಿವಿಧ ಕಡೆಗಳಲ್ಲಿ ಸ್ಮಾರ್ಟ್ ಕಾರ್ಡ್ ವಿತರಿಸಲು ಪ್ರತ್ಯೇಕ ಸೆಂಟರ್ ಆರಂಭಿಸಲು ಸಿಟಿ ಬಸ್ ಮಾಲಕರ ಸಂಘ ತೀರ್ಮಾನಿಸಿದೆ. ಜತೆಗೆ ಬಸ್‌ಗಳಲ್ಲಿಯೇ ಪ್ರಯಾಣಿಕರಿಗೆ ಈ ಬಗ್ಗೆ ಮಾಹಿತಿ ನೀಡಿ ಉಚಿತವಾಗಿ ವಿತರಿಸಲಾಗುತ್ತಿದೆ. ಈ ಹೈಟೆಕ್ ಮಾದರಿ ಸೇವೆ ಒದಗಿಸಲು ಈಗಾಗಲೇ 10 ಸಾವಿರಕ್ಕೂ ಮಿಕ್ಕಿ ಕಾರ್ಡ್‌ಗಳನ್ನು ಮುದ್ರಣ ಮಾಡಲಾಗಿದೆ.
ಸಿಟಿ ಬಸ್‌ಗಳ ‘ಟ್ರ್ಯಾಕಿಂಗ್’ ಮಾಡಬಹುದು!
ಮಂಗಳೂರು ನಗರದಲ್ಲಿ ಸಂಚರಿಸುವ ಸಿಟಿ ಬಸ್‌ಗಳಲ್ಲಿ “ಚಲೋ’ ಎಂಬ ಹೆಸರಿನ ಆ್ಯಪ್ ಮೂಲಕ ಬಸ್‌ನ “ಲೈವ್ ಟ್ರ್ಯಾಕಿಂಗ್’ ವ್ಯವಸ್ಥೆ ಇದೆ. ಮೊಬೈಲ್ ಜಿಪಿಎಸ್ ಆಧಾರದ ಮೇಲೆ ಬಸ್‌ಗಳ ನಿಖರ ಮಾಹಿತಿ ಮೊಬೈಲ್‌ನಲ್ಲಿಯೇ ಪ್ರಯಾಣಿಕರಿಗೆ ತಿಳಿಯಬಹುದು. ಮ್ಯಾಪ್‌ನಲ್ಲಿ ಟ್ಯಾಪ್ ಮಾಡಿ ಸದ್ಯ ಬಸ್ ಎಲ್ಲಿದೆ? ಎಂಬುವುದನ್ನು ಕೂಡ ತಿಳಿಯಲು ಸಾಧ್ಯ. ಅಷ್ಟೇ ಅಲ್ಲ, ಒಂದು ಕಡೆಯಿಂದ ಮತ್ತೂಂದೆಡೆ ಚಲಿಸಲು ಎಷ್ಟು ಸಮಯ ಬೇಕು? ಮುಂದಿನ ನಿಲ್ದಾಣ ಸೇರಿದಂತೆ ಹಲವು ಮಾಹಿತಿ ಈ ಆ್ಯಪ್‌ನಲ್ಲಿ ಲಭ್ಯವಿದೆ. 320 ಸಿಟಿ ಬಸ್
ಮಂಗಳೂರಿನಲ್ಲಿ ಪ್ರಸಕ್ತ 320 ಸಿಟಿ ಬಸ್‌ಗಳು, 1,450 ಸರ್ವಿಸ್ ಬಸ್‌ಗಳು ಹಾಗೂ ಸುಮಾರು 60 ಕಾಂಟ್ರಾಕ್ಟ್ ಕ್ಯಾರೇಜ್ ಬಸ್‌ಗಳಿವೆ. ಜತೆಗೆ ಉಡುಪಿ, ಚಿಕ್ಕಮಗಳೂರು ಸೇರಿದಂತೆ ಇತರ ಜಿಲ್ಲೆಗಳಿಂದ ಅನುಮತಿ ಪಡೆದ ಸುಮಾರು 100ರಷ್ಟು ಬಸ್‌ಗಳು ಪರ್ಮಿಟ್ ಪಡೆದು ಸಂಚರಿಸುತ್ತಿದೆ. 1962ರಿಂದ ಮುಂಂಬಯಿ, ಬೆಂಗಳೂರು ಸೇರಿದಂತೆ ಬೇರೆ ಬೇರೆ ಕಡೆಗಳಿಗೆ ಸುಮಾರು 400ರಷ್ಟು ನಿತ್ಯ ಬಸ್‌ಗಳು ಮಂಗಳೂರಿನಿಂದ ಸಂಚರಿಸುತ್ತಿವೆ. ನಿತ್ಯ ಸಾವಿರಾರು ಜನರಿಗೆ ಖಾಸಗಿ ಬಸ್‌ಗಳೇ ಪ್ರಯಾಣಿಕರಿಗೆ ಆಧಾರಸ್ತಂಭ. ಸಿಟಿ ಬಸ್‌ಗಳಿಗೆ “ತುಳುನಾಡು ನಗರ ಸಾರಿಗೆ’ ಹೆಸರು: ದಿಲ್‌ರಾಜ್ ಆಳ್ವ
– ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷರ ಜತೆಗೆ ಸಂದರ್ಶನ ‘ಬಸ್‌ಗಳೆಂದರೆ, ಅದು ನಗರ ಸಂಚಾರಕ್ಕೆ ಭಾವನಾತ್ಮಕ ಸಂಬಂಧ ಬೆಸೆಯುವ ಮುಖ್ಯ ಕೊಂಡಿ. ಸಾವಿರಾರು ನಗರವಾಸಿಗಳನ್ನು ಗಮ್ಯಸ್ಥಳಗಳಿಗೆ ಕರೆದುಕೊಂಡು ಹೋಗುವ ಕಾರಣದಿಂದ ಬಸ್‌ಗಳು ಪ್ರಯಾಣಿಕರ ಬೆಸುಗೆ ಅನನ್ಯ. ನಗರದ ಒಟ್ಟು ಆಗು ಹೋಗುಗಳಲ್ಲಿ ಬಸ್‌ಗಳ ಪಾತ್ರವೇ ಬಹುಮುಖ್ಯ. ಈ ನಿಟ್ಟಿನಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ಹಾಗೂ ಮಂಗಳೂರಿಗೆ ಬ್ರ್ಯಾಂಡ್ ಪರಿಕಲ್ಪನೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಎಲ್ಲ ಸಿಟಿ ಬಸ್‌ಗಳ ಹೆಸರನ್ನು ‘ತುಳುನಾಡ ನಗರ ಸಾರಿಗೆ’ಎಂಬ ರೀತಿಯಲ್ಲಿ ಬದಲಾಯಿಸುವ ಬಗ್ಗೆ ಸಿಟಿ ಬಸ್ ಮಾಲಕರ ಸಂಘದಿಂದ ಮಾತುಕತೆ ನಡೆಯುತ್ತಿದೆ ಎನ್ನುತ್ತಾರೆ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ. ‘ಉದಯವಾಣಿ-ಸುದಿನ’ ಜತೆಗೆ ಸಂದರ್ಶನದಲ್ಲಿ ಮಾತನಾಡಿದ ಅವರು, “ನಗರವೊಂದು ಬಸ್‌ಗಳ ಮೂಲಕವೇ ಗುರುತಿಸುತ್ತದೆ. ಬೇರೆ ಬೇರೆ ಕಡೆಗಳಿಂದ ಅಲ್ಲಿಗೆ ಜನರು ಬಂದು ಹೋಗುವ ಹಿನ್ನೆಲೆಯಲ್ಲಿ ಆ ನಗರವನ್ನು ಬಸ್‌ಗಳ ಮೂಲಕವೂ ಅಳೆಯಲಾಗುತ್ತದೆ. ಈ ನಿಟ್ಟಿನಲ್ಲಿ ಕರಾವಳಿಯ ವಿಭಿನ್ನತೆ ಯನ್ನು ಸಾರಿರುವ ತುಳುನಾಡು ಎಲ್ಲೆಲ್ಲೂ ಪರಿಚಯವಾಗಲಿ ಎಂಬ ಸದುದ್ದೇಶದಿಂದ ಹೊಸ ಬ್ರ್ಯಾಂಡ್ ಕಲ್ಪನೆಗೆ ಉದ್ದೇಶಿಸಲಾಗಿದೆ. ಈಗಾಗಲೇ ಕೆಲವು ರೂಟ್‌ನ ಬಸ್‌ಗಳ ಮಾಲಕರ ಜತೆಗೆ ಮಾತುಕತೆ ನಡೆಸಲಾಗುತ್ತಿದೆ. ಇದು ಜಾರಿಯಾದರೆ ಎಲ್ಲ ಸಿಟಿ ಬಸ್‌ನ ಮುಂಭಾಗದಲ್ಲಿ “ತುಳುನಾಡು ನಗರ ಸಾರಿಗೆ’ ಎಂಬ ಹೆಸರು ಮಾತ್ರ ಇರಲಿದೆ. ಬಸ್‌ನ ಹಿಂಭಾಗ ಹಾಗೂ ಬದಿಯಲ್ಲಿ ಬಸ್‌ನ ಮೂಲ ಹೆಸರು ಬರೆಯಲು ಅವಕಾಶವಿರುತ್ತದೆ. ಹೀಗೆ ಬಸ್‌ಗಳ ನೋಂದಣಿ ಮಾಡಿದವರಿಗೆ ಡೀಸೆಲ್ ರಿಯಾಯಿತಿ ನೀಡುವ ಸಂಬಂಧ ಹೊಸ ಪರಿಕಲ್ಪನೆಯನ್ನು ಈಗ ಚಿಂತಿಸಲಾಗಿದೆ. ಈ ಸಂಬಂಧ ಪೆಟ್ರೋಲ್ ಪಂಪ್‌ನ ಮಾಲಕರ ಜತೆಗೂ ಮಾತುಕತೆ ಸದ್ಯ ನಡೆಯುತ್ತಿದೆ ಎಂದರು. ಡಿಜಿಟಲ್ ಸ್ವರೂಪದಲ್ಲಿ ಸಿಟಿ ಬಸ್‌ಗಳನ್ನು ಬದಲಾಯಿಸುವ ನಿಟ್ಟಿನಲ್ಲಿ ಹೊಸ ಹೊಸ ಪರಿಕಲ್ಪನೆಗಳನ್ನು ಜಾರಿಗೆ ತರಲಾಗುತ್ತಿದೆ. ಅದರಂತೆ, ಪ್ರಯಾಣಿಕ ಸ್ನೇಹಿ ಪರಿಕಲ್ಪನೆಯಲ್ಲಿ ಸ್ಮಾರ್ಟ್‌ಕಾರ್ಡ್ ಅನ್ನು ಪರಿಚಯಿಸಲಾಗಿದೆ ಎಂದರು. ಪ್ರಸಕ್ತ ದೇಶದಲ್ಲಿ ಎಲೆಕ್ಟ್ರಿಕಲ್ ವಾಹನಗಳ ಬಗ್ಗೆ ವ್ಯಾಪಕ ಮಾತುಕತೆ ನಡೆಯುತ್ತಿದೆ. ಎಲೆಕ್ಟ್ರಿಕ್ ವಾಹನಗಳತ್ತ ಜನರು ಹಾಗೂ ಸರಕಾರ ವಿಶೇಷ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಒಂದು ವೇಳೆ ನಗರ ವ್ಯಾಪ್ತಿಯ ಬಸ್‌ಗಳು ಕೂಡ ಎಲೆಕ್ಟ್ರಿಕ್ ಆಗಬೇಕು ಎಂಬುವುದಾದರೆ, ದೇಶದಲ್ಲಿಯೇ ಮೊದಲು ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ನಾವು ಆದ್ಯತೆ ನೀಡಲಿದ್ದೇವೆ. ಯಾಕೆಂದರೆ ದೇಶದಲ್ಲಿಯೇ ಖಾಸಗಿ ಬಸ್ ಎಂಬ ಪರಿಕಲ್ಪನೆ ಮೂಡಿಬಂದಿರುವುದೇ ಮಂಗಳೂರಿನಿಂದ ಆಗಿರುವ ಕಾರಣಕ್ಕಾಗಿ ಎಲೆಕ್ಟ್ರಿಕ್ ಬಸ್ ಮಾದರಿಯು ಮಂಗಳೂರಿನಿಂದಲೇ ಆರಂಭವಾಗಬೇಕು ಎಂಬುದು ನಮ್ಮ ಸಂಕಲ್ಪ’ ಎಂದರು. ಸಿಟಿ ಬಸ್‌ಗಳ ಮಾಲಕರನ್ನೆಲ್ಲ ಸೇರಿಸಿಕೊಂಡು ಕೋಆಪರೇಟಿವ್ ಬ್ಯಾಂಕ್ ಮಾಡಬೇಕು ಎಂಬ ಯೋಜನೆಯಿದೆ. ಈ ಮೂಲಕ ಬಸ್‌ಗಳ ಮಾಲಕರಿಗೆ ಹಾಗೂ ಕಾರ್ಮಿಕರಿಗೆ ಆರ್ಥಿಕವಾಗಿ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ವಿಶೇಷ ಯೋಜನೆಗಳ ಜಾರಿ ಬಗ್ಗೆ ನಿರ್ಧರಿಸಲಾಗಿದೆ ಎಂದರು. ಸಲಹೆ ಮತ್ತು ದೂರುಗಳಿಗೆ ಸಂಪರ್ಕಿಸಿ: 7996999977