ಮಂಗಳೂರು: ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಇತ್ತೀಚೆಗಷ್ಟೇ ಪೂರ್ಣಗೊಂಡಿರುವ 4 ಮತ್ತು 5ನೇ ಪ್ಲಾಟ್‌ಫಾರಂಗಳ ಜತೆಯಲ್ಲೇ ಇದೀಗ ಅವುಗಳನ್ನು ಸಂಪರ್ಕಿಸುವ ಪಾದಾಚಾರಿ ಮೇಲ್ಸೇತುವೆಯೂ ಸಜ್ಜಾಗಿ ನಿಂತಿದೆ.
ಪ್ಲಾಟ್‌ಫಾರಂ 4 ಮತ್ತು 5ರ ಕಾಮಗಾರಿ ಕಳೆದ ನವೆಂಬರ್‌ನಲ್ಲಿ ಪೂರ್ಣಗೊಂಡು ಬಳಕೆಯಲ್ಲಿದೆ, ಆದರೆ ಅಧಿಕೃತ ಉದ್ಘಾಟನೆಗೊಳ್ಳಬೇಕಿದೆ. ಈ ನೂತನ ಪ್ಲಾಟ್ ಫಾರಂಗಳು ಬಳಕೆ ಯಾಗುತ್ತಿದ್ದರೂ, ಮೇಲ್ಸೇತುವೆಯ ಕೊರತೆಯಿಂದಾಗಿ ಅಲ್ಲಿ ಇಳಿಯುವ ಪ್ರಯಾಣಿಕರು ಪ್ಲಾಟ್‌ಫಾರಂನಿಂದ ನಿಲ್ದಾಣದ ಹಿಂದುಗಡೆ ರಸ್ತೆಗೆ ಸಾಗಿ ಮುಖ್ಯ ದ್ವಾರ ಅಥವಾ ಅವರ ಮುಂದಿನ ಪ್ರಯಾಣ ಬೆಳೆಸಲು ಬಹುದೂರ ನಡೆದೇ ಸಾಗಬೇಕಾಗಿತ್ತು.
ಈಗ ಮೇಲ್ಸೇತುವೆ ನಿರ್ಮಾಣ ವಾಗಿರುವುದರಿಂದ ಈ ನೂತನ ಪ್ಲಾಟ್‌ಫಾರಂಗಳಲ್ಲಿ ಇಳಿಯುವ ಪ್ರಯಾಣಿಕರು ಮೇಲ್ಸೇತುವೆ ಮೂಲಕ ಮುಖ್ಯದ್ವಾರಕ್ಕೆ ಕೆಲವೇ ನಿಮಿಷಗಳಲ್ಲೇ ತಲುಪಬಹುದಾಗಿದೆ.
ಸುಮಾರು 10 ವರ್ಷಗಳ ಹಿಂದೆ ಪ್ರಸಕ್ತ ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿಕರ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹನುಮಂತ ಕಾಮತ್ ಅವರ ನೇತೃತ್ವದಲ್ಲಿ ಸಮಿತಿಯು ಈ ಪ್ಲಾಟ್‌ಫಾರಂಗಳಿಗಾಗಿ ಬೇಡಿಕೆ ಸಲ್ಲಿಸಿತ್ತು.
ರೈಲ್ವೇ ಅಭಿವೃದ್ಧಿ ಹೋರಾಟಗಾರ ದಿನೇಶ್ ಕೆ. ಭಟ್ ಪುತ್ತೂರು ಅವರು ಭವಿಷ್ಯದಲ್ಲಿ ಸೆಂಟ್ರಲ್‌ನಿಂದ ಹೆಚ್ಚುವರಿ ರೈಲು ಗಾಡಿಗಳ ಓಡಾಟದ ಅಗತ್ಯ ಹಾಗೂ ಆಗ ಇದ್ದ ಮೂರು ಪ್ಲಾಟ್‌ಫಾರಂಗಳಿಂದ ಹೆಚ್ಚಿನ ರೈಲಿನ ಓಡಾಟಕ್ಕೆ ಹಿನ್ನಡೆಯಾಗಬಹುದು ಎಂಬ ಅಂಶವನ್ನು ಪತ್ರದ ಮೂಲಕ ರೈಲ್ವೇ ಇಲಾಖೆಯನ್ನು ಒತ್ತಾಯಿಸಿದ್ದರು ಎಂದು ರೈಲ್ವೇ ಯಾತ್ರಿ ಸಂಘದ ಸಲಹೆಗಾರ ಅನಿಲ್ ಹೆಗ್ಡೆ ಹೇಳುತ್ತಾರೆ.