ಮಹಾನಗರ: ಬೀದಿಬದಿ ವ್ಯಾಪಾರಿಗಳನ್ನು ಎಬ್ಬಿಸಲು ಟೈಗರ್ ಕಾರ್ಯಾಚರಣೆಗೆ ವಹಿಸಿದಷ್ಟು ಆಸಕ್ತಿ ವಲಯದೊಳಗೆ ವ್ಯಾಪಾರ ಆರಂಭಿಸಲು ಪಾಲಿಕೆ ವಹಿಸಿದಂತಿಲ್ಲ. ಗುರುತಿನ ಚೀಟಿ ವಿತರಿಸಿ ಸ್ಟಾಲ್ ಹಂಚಿಕೆಯಾಗಿ ಮೂರು ತಿಂಗಳು ಕಳೆದರೂ ವಲಯ ಕಾರ್ಯಾರಂಭಗೊಂಡಿಲ್ಲ. ಇದೀಗ ಬೀದಿಬದಿ ವ್ಯಾಪಾರಿ ವಲಯ ಅವ್ಯವಸ್ಥೆಯ ಆಗರವಾಗಿ ಮಾರ್ಪಾ ಡಾಗಿದ್ದು, ಕುಡುಕರ, ಭಿಕ್ಷುಕರ ಆವಾಸ ತಾಣವಾಗಿದೆ.
ವ್ಯಾಪಾರಿ ವಲಯದ ಮೂರು ಕಡೆಗಳಲ್ಲೂ ಕೆಲಸ ಕಾರ್ಯಗಳು ಪೂರ್ಣಗೊಂಡು ಮೇಲ್ಛಾವಣಿ ನಿರ್ಮಿಸಲಾಗಿದೆ. ರಾತ್ರಿ ಹಗಲು ಇಲ್ಲಿ ಕುಡುಕರು, ಭಿಕ್ಷುಕರು ಮಲಗುತ್ತಿದ್ದಾರೆ. ಜತೆಗೆ ಧೂಮಪಾನ, ಮದ್ಯಪಾನ ಮಾಡುತ್ತಿರುವುದು ಕಂಡುಬಂದಿದೆ. ಬೀದಿನಾಯಿಗಳು ಕೂಡ ಈ ವಲಯದಲ್ಲಿ ಸೇರಿಕೊಂಡಿವೆ.
ಸೆ. 5ರಂದು ಪಾಲಿಕೆ 93 ವ್ಯಾಪಾರಿಗಳಿಗೆ ಚೀಟಿ ಎತ್ತುವ ಮೂಲಕ ಸ್ಟಾಲ್ಹಸ್ತಾಂತರ ಕಾರ್ಯ ಮಾಡಿತ್ತು. ಆದರೆ ಇಲ್ಲಿಯ ತನಕ ವಲಯದಲ್ಲಿ ವ್ಯಾಪಾರ ಆರಂಭಗೊಂಡಿಲ್ಲ. ಪರ ವಿರೋಧದ ನಡುವೆಯೇ ಪಾಲಿಕೆ ಕೆಲಸ ಕಾರ್ಯ ಪೂರ್ಣಗೊಳಿಸಿದೆ. ಕಾಮಗಾರಿ ಪೂರ್ಣವಾಗಿ ಕೆಲವು ತಿಂಗಳುಗಳು ಕಳೆದರೂ ವ್ಯಾಪಾರ ಆರಂಭಿಸದಿರುವುದಕ್ಕೆ ವ್ಯಾಪಾರಿ ಗಳು ಅಸಮಾಧಾನ ಹೊರಹಾಕುತ್ತಿದ್ದಾರೆ. ಪಟ್ಟಣ ವ್ಯಾಪಾರಸ್ಥರ ಸಮಿತಿಯ ಮೂಲಕ ಸುಮಾರು 667 ಬೀದಿ ಬದಿ ವ್ಯಾಪಾರಸ್ಥರನ್ನು ಗುರುತಿಸುವ ಕೆಲಸ ಮಾಡಲಾಗಿದೆ. ಇವರಿಗೆ ಬಹುತೇಕ 18 ಷರತ್ತುಗಳನ್ನು ಪಾಲಿಕೆ ವಿಧಿಸಿದೆ. ವ್ಯಾಪಾರ ನಡೆಸುವವರು ಷರತ್ತುಗಳನ್ನು ಪಾಲಿಸುವುದು ಅನಿವಾರ್ಯವಾಗಿದೆ.
ಶೀಘ್ರದಲ್ಲೇ ವಲಯ ಕಾರ್ಯಾರಂಭ
ವ್ಯಾಪಾರಿ ವಲಯದಲ್ಲಿ ನೀರಿನ ಪೂರೈಕೆಯಲ್ಲಿ ಸಮಸ್ಯೆಯಾಗಿತ್ತು. ಅದನ್ನು ಪರಿಹರಿಸಲಾಗಿದೆ. ಹೂವಿನ ವ್ಯಾಪಾರಿಗಳಿಗೆ ಸಣ್ಣಪುಟ್ಟ ವ್ಯವಸ್ಥೆ ಕಲ್ಪಿಸಬೇಕಿತ್ತು. ಅದನ್ನು ಪೂರ್ಣಗೊಳಿಸಲಾಗಿದೆ. ಶೀಘ್ರದಲ್ಲೇ ವಲಯ ಕಾರ್ಯಾರಂಭಗೊಳ್ಳಲಿದೆ.
-ಮನೋಜ್ ಕುಮಾರ್, ಪಾಲಿಕೆ ಮೇಯರ್