ಮಂಗಳೂರು: ಲಕ್ನೋ ಕ್ಯಾಥೊಲಿಕ್ ಧರ್ಮ ಪ್ರಾಂತದ ಧರ್ಮಗುರು ಹಾಗೂ ಅಲಹಾಬಾದ್‌ನ ಸೈಂಟ್ ಜೋಸೆಫ್ ಪ್ರಾದೇಶಿಕ ಸೆಮಿನರಿಯ ರೆಕ್ಟರ್ ಆಗಿರುವ ಮಂಗಳೂರು ಮೂಲದ ಫಾ| ವಿಲ್ಫ್ರೆಡ್ ಗ್ರೆಗೊರಿ ಮೊರಾಸ್ ಅವರನ್ನು ಉತ್ತರ ಪ್ರದೇಶದ ಝಾನ್ಸಿ ಧರ್ಮ ಪ್ರಾಂತದ ಸಹಾಯಕ ಬಿಷಪ್ ಆಗಿ ನೇಮಕ ಮಾಡಿ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರು ಆದೇಶ ಹೊರಡಿಸಿದ್ದಾರೆ.
ಫಾ| ವಿಲ್ಫ್ರೆಡ್ ಗ್ರೆಗೊರಿ ಮೊರಾಸ್ ಅವರು ಮಂಗಳೂರು ಧರ್ಮಪ್ರಾಂತ ವ್ಯಾಪ್ತಿಯ ನೀರುಡೆ ನಿವಾಸಿ ಆಗಿದ್ದಾರೆ. ಅಲಹಾಬಾದ್ ಧರ್ಮ ಪ್ರಾಂತದ ಸೈಂಟ್ ಜೋಸೆಫ್ ಪ್ರಾದೇಶಿಕ ಸೆಮಿನರಿಯಲ್ಲಿ ತಣ್ತೀಶಾಸ್ತ್ರ ಮತ್ತು ದೇವತಾಶಾಸ್ತ್ರ ಅಧ್ಯಯನ ಮಾಡಿದ ಅವರು ಧಾರ್ಮಿಕ ಶಿಕ್ಷಣ ತರಬೇತಿಯನ್ನು ಮುಗಿಸಿ 1997ರ ಎ. 27ರಂದು ಲಕ್ನೋ ಧರ್ಮಪ್ರಾಂತದ ಗುರುಗಳಾಗಿ ದೀಕ್ಷೆ ಸ್ವೀಕರಿಸಿದ್ದರು.
ಅವರು 1997- 1999 ಅವಧಿಯಲ್ಲಿ ಲಕ್ನೋದ ಸೈಂಟ್ ಪಾವುಲ್ ಮೈನರ್ ಸೆಮಿನರಿಯಲ್ಲಿ ತರಬೇತುದಾರರಾಗಿ ಹಾಗೂ 1999 ರಿಂದ 2002 ತನಕ ಬಿಷಪ್ ಕಾರ್ಯದರ್ಶಿಯಾಗಿ, 2002-2003 ಅವ ಧಿಯಲ್ಲಿ ಪಾಲಿಯಾದಲ್ಲಿನ ಸೈಂಟ್ ಆನ್ಸ್ ಶಾಲೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2003-2006 ಅವಧಿಯಲ್ಲಿ ರೋಮ್‌ನಲ್ಲಿರುವ ಪೊಂತಿಫಿಕಲ್ ಅರ್ಬನ್ ವಿಶ್ವವಿದ್ಯಾಲಯದಲ್ಲಿ ಮಿಸ್ಸಿಯಾಲಜಿಯಲ್ಲಿ ಸ್ನಾತ ಕೋತ್ತರ ಪದವಿ ಅಧ್ಯಯನ ನಡೆಸಿದ್ದರು.
2007-2008ರಲ್ಲಿ ನಿಗೋ ಹಾನ್‌ನಲ್ಲಿರುವ ಸೈಂಟ್ ಫ್ರಾನ್ಸಿಸ್ ಶಾಲೆ ಮತ್ತು ಹಾಸ್ಟೆಲ್‌ನ ಚೇರ್ಮನ್ ಮತ್ತು ನಿರ್ದೇಶಕರಾಗಿ, 2008-2013 ಅವಧಿ ಯಲ್ಲಿ ಬಾರಾಬಂಕಿಯ ಸೈಂಟ್ ಆಂಥೋನಿ ಶಾಲೆಯ ಅಧ್ಯಕ್ಷರಾಗಿದ್ದರು. ಆ ಬಳಿಕ ರೋಮ್‌ಗೆ ತೆರಳಿ 2013-2016 ಅವ ಧಿಯಲ್ಲಿ ಪೊಂತಿಫಿಕಲ್ ಅರ್ಬನ್ ವಿಶ್ವವಿದ್ಯಾಲಯದಲ್ಲಿ ಮಿಸಿಯಾಲಜಿಯಲ್ಲಿ ಡಾಕ್ಟರೆಟ್ ಪದವಿ ಪಡೆದರು. ಬಳಿಕ 2017 ರಿಂದ 2021 ರ ತನಕ ವಾರಾಣಸಿಯ ನವ್ ಸಾಧನಾ ಪ್ರಾದೇಶಿಕ ಪ್ಯಾಸ್ಟೋರಲ್ ಸೆಂಟರ್‌ನ ನಿರ್ದೇಶಕರಾಗಿದ್ದ ಅವರು 2021 ರಿಂದ ಅಲಹಾಬಾದ್‌ನಲ್ಲಿರುವ ಸೈಂಟ್ ಜೋಸೆಫ್ ಪ್ರಾದೇಶಿಕ ಸೆಮಿನರಿಯ ರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಝಾನ್ಸಿ ಧರ್ಮ ಪ್ರಾಂತದ ಸಹಾಯಕ ಬಿಷಪ್ ಆಗಿ ನೇಮಕಗೊಂಡಿದ್ದಾರೆ.