ಮಂಗಳೂರು: ಮಂಗಳೂರು ಆಟೋರಿಕ್ಷಾ ಮತ್ತು ಕಾರು ಚಾಲಕರ ಸಹಕಾರ ಸಂಘದಲ್ಲಿ ಆಕೌಂಟೆಂಟ್ ಆಗಿದ್ದ ಸುಶ್ಮಾ ಮತ್ತು ಇತರರು 49.42 ಲ.ರೂ. ವಂಚಿಸಿರುವ ಬಗ್ಗೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಶ್ಮಾ ಸಂಘದ ಕಾರ್ಯದರ್ಶಿ, ಅಕೌಂಟೆಂಟ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿದ್ದರು. ಸಂಘದ ಹಣಕಾಸು ಮತ್ತು ಲೆಕ್ಕಪತ್ರಗಳನ್ನು ನಿರ್ವಹಿಸುವ ಹೊಣೆಗಾರಿಕೆ ಹೊಂದಿದ್ದರು.
ಅನಿತಾ ಮರಿಯಾ ಫೇರಾವೋ ಕ್ಯಾಶಿಯರ್ ಆಗಿದ್ದರು. ಸುಶ್ಮಾ ಅಕ್ರಮ ಲಾಭ ಪಡೆಯುವ ದುರುದ್ದೇಶದಿಂದ ತನ್ನ, ತನ್ನ ತಾಯಿ ಸೌಮ್ಯಾ ಶೆಣೈ ಹೆಸರಿನಲ್ಲಿ ಮತ್ತು ಪತಿ ಸಂತೋಷ್ ಡಿ’ಸೋಜಾ ಹೆಸರಿನಲ್ಲಿ ಕ್ರೆಡಿಟ್ ಬ್ಯಾಲೆನ್ಸ್ ಇಲ್ಲದಿದ್ದರೂ ಸಂಘದಲ್ಲಿ ಉಳಿತಾಯ ಖಾತೆ ತೆರೆದು ಸಂಘದ 18,61,800 ರೂ.ಗಳನ್ನು ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದಾರೆ. ಸಂಘದ ಎಸ್‌ಬಿಐ ಬ್ಯಾಂಕ್ ಆರ್ಯ ಸಮಾಜ ರಸ್ತೆಯ ಚಾಲ್ತಿ ಖಾತೆಯಿಂದ 13,52,618 ರೂ.ಗಳನ್ನು ಅಕ್ರಮವಾಗಿ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಸಂಘದ ಈ ಹಿಂದಿನ ಸೆಕ್ರೆಟರಿ ನೀಡಿದ ಚೆಕ್‌ನಲ್ಲಿ ಜುವೆಲರ್ನಲ್ಲಿ 8,28,000 ರೂ. ಪಾವತಿ ಮಾಡಿದ್ದಾರೆ. ಸಂಘ ಮಾರಾಟ ಮಾಡುವ ಮುದ್ರಾಂಕ ಪೇಪರ್‌ಗಳ ಮಾರಾಟದ ಮೊತ್ತ 6,05,895 ರೂ.ಗಳನ್ನು ತನ್ನ ಖಾತೆಗೆ ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದಾರೆ. ಬಜಾಜ್ ವಿಮಾ ಕಂಪೆನಿಗೆ ಸಂಘದ ಖಾತೆಯಿಂದ 2,23,235 ರೂ.ಗಳನ್ನು ವರ್ಗಾವಣೆ ಮಾಡಿದ್ದಾರೆ. ಅಲ್ಲದೆ ಮಾಸಿಕ ವೇತನದಲ್ಲಿ 71,035 ರೂ.ಗಳನ್ನು ಹೆಚ್ಚುವರಿಯಾಗಿ ನಗದೀಕರಿಸಿಕೊಂಡಿದ್ದಾರೆ. ಹೀಗೆ ಸುಶ್ಮಾ, ಅನಿತಾ ಮರಿಯಾ ಫೇರಾವೋ ಮತ್ತು ಸೌಮ್ಯಾ ಶೆಣೈ ಸಹಕಾರ ಸಂಘದ ಲೆಕ್ಕಪತ್ರದಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸಂಘದ ಒಟ್ಟು 49,42,583 ರೂ.ಗಳನ್ನು ಅಕ್ರಮವಾಗಿ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಅಲ್ಲದೆ ಕಂಪ್ಯೂಟರ್‌ನಲ್ಲಿದ್ದ ದಾಖಲೆಗಳನ್ನು ಅಳಿಸಿ ಹಾಕಿ ಸಾಕ್ಷ್ಯ ನಾಶ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.